ಅನಿಲ್ ಅಂತರಸಂತೆ
ನಾಳೆಯಿಂದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಅಂತರಸಂತೆ: ಶತಮಾನಗಳ ಇತಿಹಾಸವಿರುವ ಅಂತರಸಂತೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಸೋಮವಾರ (ಫೆ.೩) ಆರಂಭಗೊಳ್ಳಲಿದ್ದು, ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಅಂತರಸಂತೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಸುತ್ತಮುತ್ತಲಿನ ೩೩ಕ್ಕೂ ಅಧಿಕ ಹಳ್ಳಿಗಳ ಜನರು ಈ ಜಾತ್ರೆಯಲ್ಲಿ ಸೇರುವುದು ವಿಶೇಷ.
ಅಂತೆಯೇ ಫೆ.೩ರ ಸೋಮವಾರದಿಂದ ಫೆ.೫ರ ಬುಧವಾರದ ವರೆಗೆ ಅಂತರಸಂತೆ ಮಹದೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿ ಯಾಗಿ ನಡೆಯಲಿದ್ದು, ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗಿವೆ.
ಈಗಾಗಲೇ ಜಾತ್ರೆಯ ಅಂಗಳದಲ್ಲಿ ಅಂಗಡಿಗಳು ತಲೆ ಎತ್ತಿದ್ದು, ರಥ ನಿರ್ಮಾಣದ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶಗಳನ್ನು ವರ್ಣ ರಂಜಿತ ಬಣ್ಣದ ದೀಪಗಳಿಂದ ಅಲಂಕೃತಗೊಳಿಸಲಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.
ಜಾತ್ರೆ ಆರಂಭದ ಸೋಮವಾರದಂದು ಬೆಳಿಗ್ಗೆ ೯.೩೦ಕ್ಕೆ ಗ್ರಾಮದ ಮುಖಂಡರಾದ ಡಿ.ಸುಂದರ್ ದಾಸ್ ಮತ್ತು ಕುಟುಂಬದವರ ಸೇವಾರ್ಥದಲ್ಲಿ ಹೋಮ, ಹೂವಿನ ಅಲಂಕಾರ, ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿಯ ಮೂಲಕ ಜಾತ್ರೆ ಆರಂಭಗೊಳ್ಳುತ್ತದೆ. ನಂತರ ಮಂಗಳವಾರ ಬೆಳಗಿನ ಜಾವ ೩ ಗಂಟೆಯಿಂದ ೫ ಗಂಟೆಯವರೆಗೆ ಶೀರನಹುಂಡಿ ಗ್ರಾಮಸ್ಥರಿಂದ ಹಾಲ್ಹರವಿ ಸೇವೆ ಮತ್ತು ಕೊಂಡೋತ್ಸವ ನಡೆಯಲಿದ್ದು, ನೂರಲಕುಪ್ಪೆ ಎ. ಗ್ರಾಮಸ್ಥರಿಂದ ವೀರಭದ್ರೇಶ್ವರ ಮೆರವಣಿಗೆ ನಡೆಯಲಿದೆ.
ಜಾತ್ರೆಯ ಎರಡನೇ ದಿನವಾದ ಮಂಗಳವಾರ ಸಾಂಪ್ರದಾಯಿಕ ಪೂಜೆ, ವಿಽ ವಿಧಾನದ ಜೊತೆಗೆ ರಾತ್ರಿ ಹುಲಿವಾಹನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಮೂರನೇ ದಿನವಾದ ಬುಧವಾರ ಬೆಳಿಗ್ಗೆ ೧೧.೩೦ಕ್ಕೆ ರಥೋತ್ಸವ ಹಾಗೂ ಸಂಜೆ ೫ ಗಂಟೆಗೆ ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯಲ್ಲಿ ಪಂಜಿನ ಸೇವೆ ಮತ್ತು ದನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಜಾತ್ರೆಯ ಅಂಗವಾಗಿ ಮೂರು ದಿನಗಳ ಕಾಲ ರಾತ್ರಿಯ ವೇಳೆ ವಿವಿಧ ಸಾಂಸ್ಕ ತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬುಧವಾರ ರಾತ್ರಿ ತೆಪ್ಪೋತ್ಸವ ನಡೆಸಲಾಗುತ್ತದೆ.
ಸರಿಗಮಪ ಕಲಾವಿದರಿಂದ ರಸಮಂಜರಿ: ಜಾತ್ರೆಯ ಅಂಗವಾಗಿ ಸರಿಗಮಪ ಖ್ಯಾತಿಯ ದಿವ್ಯ ರಾಮಚಂದ್ರ, ಸುಮಂತ್ ವಸಿಷ್ಠ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಲ್ಲದೆ ರಾತ್ರಿ ೧ ಗಂಟೆಗೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಜಗ್ಗಪ್ಪ ಮತ್ತು ಸುಶ್ಮಿತಾ ತಂಡದವರಿಂದ ಕಾಮಿಡಿ ಹಾಗೂ ಡಿಕೆಡಿ ತಂಡದವರಿಂದ ‘ರೆಕಾರ್ಡಿಂಗ್ ಡ್ಯಾನ್ಸ್’ ಏರ್ಪಡಿಸಲಾಗಿದೆ. ಆದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಬೇಕು ಎಂದು ಜಾತ್ರಾ ಸಮಿತಿ ಕೋರಿದೆ.
” ಈ ಬಾರಿ ಅದ್ಧೂರಿ ಜಾತ್ರೆ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗ್ರಾಮದಲ್ಲಿ ಜಾತ್ರೆಯ ಸಡಗರ ಮನೆ ಮಾಡಿದ್ದು, ಎಲ್ಲರೂ ಜಾತ್ರೆ ಕಾರ್ಯಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಭಾಗವಹಿಸುತ್ತಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಮೂರೂ ದಿನಗಳ ಕಾಲ ಪ್ರಸಾದ ವಿನಿಯೋಗ ಮಾಡಲಾಗುವುದು.”
-ಎ.ವಿ.ರಾಜಪ್ಪ, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಅಂತರಸಂತೆ.