Mysore
33
few clouds

Social Media

ಸೋಮವಾರ, 02 ಮಾರ್ಚ್ 2026
Light
Dark

‘ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸುವುದು ಅಗತ್ಯ : ಸಚಿವ ಚಲುವರಾಯಸ್ವಾಮಿ

ಬಿ.ಟಿ. ಮೋಹನ್ ಕುಮಾರ್

ಶೇ.೬೦ರಷ್ಟು ಬಿ, ಸಿ, ಡಿ ಹುದ್ದೆಗಳು ಬಹಳ ವರ್ಷಗಳಿಂದ ಖಾಲಿ

ಪೌರಕಾರ್ಮಿಕರ ಹುದ್ದೆ ಭರ್ತಿಗೆ ಸಂಬಂಧಪಟ್ಟ ಸಚಿವರಿಗೆ ಸಿಎಂ ಸೂಚನೆ 

ಕಂದಾಯ ಇಲಾಖೆಯಲ್ಲಿ ಹೆಚ್ಚು ಸಮಸ್ಯೆ ಇದ್ದು, ಪರಿಹಾರಕ್ಕೆ ಸಚಿವ ಕೃಷ್ಣ ಬೈರೇಗೌಡ ಕ್ರಮ

ಆಂದೋಲನ’ದ ಸಂದರ್ಶನದಲ್ಲಿ ಸಚಿವ ಚಲುವರಾಯಸ್ವಾಮಿ ಅಭಿಮತ

ಮಂಡ್ಯ: ಸ್ಥಳೀಯ ಸಂಸ್ಥೆಗಳಲ್ಲಿ ಬಹಳ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಬಿದ್ದಿವೆ. ಇದಕ್ಕೆ ಯಾರನ್ನೂ ಹೊಣೆ ಮಾಡುವುದು ಸಾಧ್ಯವಿಲ್ಲ. ಆದರೆ, ಹುದ್ದೆಗಳು ಖಾಲಿಯಾದಂತೆ ಭರ್ತಿ ಪ್ರಕ್ರಿಯೆ ನಡೆಯಬೇಕು. ಪ್ರತಿವರ್ಷ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದ ಪ್ರಣಾಳಿಕೆಯಲ್ಲೂ ಸೇರಿಸಿ ದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಹಲವಾರು ಹುದ್ದೆಗಳು ಖಾಲಿ ಇರುವ ಸಂಬಂಧ ‘ಆಂದೋಲನ’ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಪತ್ರಿಕೆಗೆ ಸಂದರ್ಶನ ನೀಡಿದ ಅವರು, ತಮ್ಮ ಅಭಿ ಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ.

ಆಂದೋಲನ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುಮಾರು ಎರಡು ವರ್ಷಗಳಿಂದ ಕಾರ್ಯನಿರ್ವ ಹಿಸುತ್ತಿದ್ದೀರಿ, ಯಶಸ್ವಿಯಾಗಿದ್ದೀರಿ ಅನಿಸುತ್ತಿದೆಯಾ?

ಚಲುವರಾಯಸ್ವಾಮಿ: ಅಭಿವೃದ್ಧಿ ಎನ್ನುವುದು ವಿಪಕ್ಷಗಳ ನಾಯಕರಿಗೂ ಬೇಕಿಲ್ಲ, ಅದೇ ರೀತಿ ಜನತೆಗೂ ಬೇಕಾಗಿಲ್ಲ. ಜನತೆಗೂ ಬಯ್ಯುವುದು, ಟೀಕೆ ಮಾಡುವುದೇ ಖುಷಿಯಾಗಿದೆ. ಇದರ ನಡುವೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದೇವೆ.

ಆಂದೋಲನ: ಜಿಲ್ಲೆಯ ಬಹುತೇಕ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಅಂದಾಜು ಶೇ.೫೦ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆಯಲ್ಲ?

ಚಲುವರಾಯಸ್ವಾಮಿ: ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ, ಬಹಳ ವರ್ಷಗಳಿಂದ ಸರ್ಕಾರಿ ಇಲಾಖೆಗಳ ಬಿ, ಸಿ, ಡಿ ಹುದ್ದೆಗಳು ಶೇ.೬೦ರಷ್ಟು ಖಾಲಿ ಉಳಿದಿವೆ. ಇದಕ್ಕೆ ಇಂತಹವರೇ ಹೊಣೆ ಎಂದು ಹೇಳಲಾಗದು. ಹುದ್ದೆಗಳು ಖಾಲಿಯಾದ ತಕ್ಷಣವೇ ನೇಮಕಾತಿ ಮಾಡಿಕೊಳ್ಳಲು ಆಯಾಯಾ ಇಲಾಖೆಗೇ ಅಽಕಾರ ನೀಡಬೇಕಾಗಿತ್ತು. ಗ್ರೂಪ್ ಎ, ಬಿ ಹೊರತುಪಡಿಸಿ, ಸಿ, ಡಿ ಹುದ್ದೆಗಳಿಗೆ ಯಾವುದೇ ಇಂಟರ್‌ವ್ಯೂ (ಸಂದರ್ಶನ) ಇರಲಿಲ್ಲ. ಆದರೆ, ಈ ವ್ಯವಸ್ಥೆ ಯಾವಾಗ ಸ್ಥಗಿತಗೊಂಡಿತು ಎಂಬ ಮಾಹಿತಿ ಇಲ್ಲ.

ನಾನು ಅಧಿಕಾರ ವಹಿಸಿಕೊಂಡಾಗ ಕೃಷಿ ಇಲಾಖೆಯಲ್ಲಿ ಶೇ.೫೭ರಷ್ಟು ಹುದ್ದೆಗಳು ಖಾಲಿ ಇದ್ದವು. ೧೮-೨೦ ವರ್ಷಗಳಿಂದ ನೇಮಕಾತಿ ಆಗಿರಲಿಲ್ಲ. ನಾನು ಇಲಾಖೆಗೆ ಪ್ರಸ್ತಾವ ಕಳುಹಿಸಿ ಒಂದು ಸಾವಿರ ಡಿ ದರ್ಜೆ ಹುದ್ದೆಗಳ ನೇಮಕಾತಿಗೆ ಅನುಮೋದನೆ ಪಡೆದುಕೊಂಡು ಕೆಪಿಎಸ್‌ಸಿಗೆ ಕೊಟ್ಟಿದ್ದು, ಅವರು ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ೧೫ ವರ್ಷ ಗಳಿಂದ ೬೫೦ ಜನಕ್ಕೆ ಮುಂಬಡ್ತಿ ಕೊಟ್ಟಿರಲಿಲ್ಲ. ಅದನ್ನು ಬಗೆಹರಿಸಿದ್ದೇವೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪ್ರಣಾ ಳಿಕೆಯಲ್ಲೂ ಹಾಕಿಕೊಂಡಿದ್ದರು. ಅದರಂತೆ ಪ್ರತಿ ವರ್ಷ ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ನಿರಂತರ ವಾಗಿ ಖಾಲಿ ಆದ ಹುದೆಗಳನ್ನು ಭರ್ತಿ ಮಾಡಿಕೊಳ್ಳ ಬೇಕು ಎನ್ನುವುದು ನನ್ನ ಒತ್ತಾಸೆ.

ಆಂದೋಲನ: ಹುದ್ದೆಗಳು ಖಾಲಿ ಇರುವುದರಿಂದಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಇವೆ. ಏನು ಹೇಳುವಿರಿ?

ಚಲುವರಾಯಸ್ವಾಮಿ: ಹೆಚ್ಚು ತೊಂದರೆ ಇರುವುದು ಕಂದಾಯ ಇಲಾಖೆಯಲ್ಲಿ. ಯಾವುದೇ ತಾಲ್ಲೂಕು ಕಚೇರಿಗೆ ಹೋದರೂ ಹೆಚ್ಚು ಕಡಿಮೆ ನೌಕರ ಮೃತಪಟ್ಟಿರುವ ಅನುಕಂಪ ಆಧಾರದಲ್ಲಿ ಅವರ ಪತ್ನಿಯೇ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ. ಆಡಳಿತದ ಜ್ಞಾನ ಇರುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ಏನು ಮಾಡುವುದಕ್ಕೂ ಆಗುವುದಿಲ್ಲ. ಕ್ವಾಲಿಫಿಕೇಷನ್ ನೋಡುತ್ತೇವೆ. ಕ್ವಾಲಿಟಿ ನೋಡಲು ಆಗುವುದಿಲ್ಲ. ಈ ರೀತಿಯ ದೊಡ್ಡ ಸಮಸ್ಯೆ ಇದೆ.

ಕಂದಾಯ ಇಲಾಖೆಯಲ್ಲಿ ಹೆಚ್ಚು ಸಮಸ್ಯೆ ಇದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪುರಾತನ ಕಾಲದಿಂದಲೂ ಸರಿ ಮಾಡಿಕೊಂಡಿಲ್ಲ. ಮೂರು ತಲೆಮಾರಿ ನಿಂದಲೂ ಖಾತೆ ಬದಲಾವಣೆ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಪೋಡಿ, ಖಾತೆ, ಆರ್‌ಟಿಸಿ ಮುಂತಾದ ಸಮಸ್ಯೆಗಳನ್ನು ಸ್ವಯಂಚಾಲಿತವಾಗಿ ಸರಿಮಾಡಿಕೊಳ್ಳು ವಂತೆ ವ್ಯವಸ್ಥೆ ಮಾಡುತ್ತಿದ್ದಾರೆ. ಸಂಬಂಧಿಸಿದ ತಹಸಿ ಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಪೂರ್ಣಗೊಳಿಸಲು ಹೇಳಲಾಗಿದ್ದು, ೧೫ ಸಾವಿರ ಪ್ರಕರಣಗಳನ್ನು ಎರಡು ವರ್ಷಗಳಲ್ಲಿ ಮುಗಿಸಿದ್ದು, ಜಿಲ್ಲೆಯಲ್ಲಿ ೨ ಸಾವಿರ ಪ್ರಕರಣಗಳು ಬಾಕಿ ಇವೆ.

ಆಂದೋಲನ: ಪೌರ ಕಾರ್ಮಿಕರ ಹುದ್ದೆ ಖಾಲಿ ಇದೆಯಲ್ಲ?

ಚಲುವರಾಯಸ್ವಾಮಿ: ಅವುಗಳ ಭರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂಚನೆ ನೀಡಿದ್ದು, ಸಂಬಂಧಿಸಿದ ಇಲಾಖೆಗಳ ಸಚಿವರೇ ಶೇ.೫೦ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ಆಂದೋಲನ: ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮವಹಿಸುತ್ತೀರಾ?

ಚಲುವರಾಯಸ್ವಾಮಿ: ಒಂದೇ ಸಲ ಭರ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರತಿ ವರ್ಷ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದ್ದಾರೆ. ಇದು ನಿರಂತರ ಪ್ರಕ್ರಿಯೆ, ಒಂದೊಂದು ಬಾರಿ ಒಂದೇ ಬಾರಿಗೆ ಹೆಚ್ಚು ಮಂದಿ ನಿವೃತ್ತಿ ಆಗಬಹುದು, ಕೆಲವು ಬಾರಿ ಕಡಿಮೆ ಮಂದಿ ನಿವೃತ್ತಿಯಾಗುತ್ತಾರೆ. ಹಾಗಾಗಿ ಆ ಇಲಾಖೆಗಳೇ ನೇಮಕಾತಿ ಮಾಡಿಕೊಳ್ಳುವ ಅಧಿಕಾರ ನೀಡಬೇಕು. ಒಂದೇ ವರ್ಷದಲ್ಲಿ ಶೇ.೬೦ರಷ್ಟು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಗುವುದಿಲ್ಲ. ಕೆಪಿಎಸ್‌ಸಿಗೆ ಹೇಳುತ್ತಲೇ ಇದ್ದೇವೆ. ಅವರು ಪರೀಕ್ಷೆ ನಡೆಸಿದರೂ, ಕೆಲ ನ್ಯೂನತೆಗಳಿಂದಾಗಿ ಪುನರ್ ಪರೀಕ್ಷೆ ಮಾಡಿದರು. ಇಷ್ಟು ನಿಧಾನವಾದರೆ ಕೆಲಸಗಳು ಆಗುವುದಿಲ್ಲ ಎಂದು ಹೇಳಿದ್ದೇನೆ. ಇದಕ್ಕೆ ಪುನಃ ಅನುಮೋದನೆ ತೆಗೆದುಕೊಳ್ಳಬೇಕಾಗಿದೆ. ಇಂತಿಷ್ಟು ಅವಧಿಯಲ್ಲಿ ಭರ್ತಿ ಮಾಡುತ್ತೇವೆ ಎಂದು ಹೇಳಲಾಗದು.

Tags:
error: Content is protected !!