Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಈ ಬಾರಿಯೂ ತೆಪ್ಪೋತ್ಸವ ನಡೆಯುವುದು ಅನುಮಾನ

ಎಂ.ಬಿ.ರಂಗಸ್ವಾಮಿ

ಮೂಗೂರಿನ ತ್ರಿಪುರ ಸುಂದರಿ ದೇಗುಲದ ನೂತನ ಕಲ್ಯಾಣಿಯಲ್ಲಿ ೪ ವರ್ಷಗಳಿಂದ ನಡೆಯದ ತೆಪ್ಪೋತ್ಸವ

ಮೂಗೂರು: ಐತಿಹಾಸಿಕ ಹಿನ್ನೆಲೆಯುಳ್ಳ ಧಾರ್ಮಿಕ ಕ್ಷೇತ್ರ ಎನಿಸಿದ ತಾಲ್ಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಮೀಪಿಸುತ್ತಿದ್ದರೂ ಪರಂಪರೆಯಾಗಿ ನಡೆಯುತ್ತಿದ್ದ ತೆಪ್ಪೋತ್ಸವ ಈ ಬಾರಿಯೂ ನಡೆಯುವುದು ಅನುಮಾನ ಮೂಡಿಸಿದೆ.

ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯೊಂದಿಗೆ ತೆಪ್ಪದಲ್ಲಿರಿಸಿ ಉತ್ಸವ ನಡೆಸುವುದು ವಾಡಿಕೆ. ಐತಿಹಾಸಿಕ (ಹಳೆಯ) ಕಲ್ಯಾಣಿಯನ್ನು ಕೆಡವಿ ಸುಮಾರು ೧.೬೦ ಕೋಟಿ ರೂ. ವೆಚ್ಚದಲ್ಲಿ ವಿನೂತನ ರೀತಿಯಲ್ಲಿ ನೂತನ ಕಲ್ಯಾಣಿಯನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ. ಸೋಮಶೇಖರ್‌ರವರು ನೂತನ ಕಲ್ಯಾಣಿಯನ್ನು ಆಗಸ್ಟ್ ೨೦೨೨ರಲ್ಲಿ ಲೋಕಾರ್ಪಣೆಗೊಳಿಸಿದ್ದರು. ಅಂದಿನಿಂದ ೪ ವರ್ಷಗಳು ಕಳೆದರೂ ತೆಪ್ಪೋತ್ಸವ ಮಾತ್ರ ನಡೆದಿಲ್ಲ.

ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನೂತನ ಕಲ್ಯಾಣಿಯ ತಾಂತ್ರಿಕ ನ್ಯೂನತೆಯನ್ನು ಗುರುತಿಸಿ ಸಮಸ್ಯೆಯನ್ನು ಅರಿತು ಅದಕ್ಕೆ ಪರಿಹಾರ ನೀಡುತ್ತಿಲ್ಲ ಎಂಬ ಆರೋಪ ಭಕ್ತರಿಂದ ಕೇಳಿಬಂದಿದೆ.

ಮೂಡದ ಒಮ್ಮತ: ಗ್ರಾಮದ ವಿವಿಧ ಸಮುದಾಯಗಳ ಮುಖಂಡರಲ್ಲಿನ ಸಮನ್ವಯತೆ ಹಾಗೂ ಇಚ್ಛಾಶಕ್ತಿಯ ಕೊರತೆ ಯಿಂದಾಗಿ ತೆಪ್ಪೋತ್ಸವ ಸ್ಥಗಿತಗೊಂಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈಗಲಾದರೂ ತ್ರಿಪುರ ಸುಂದರಿ ಅಮ್ಮನವರ ಜಾತ್ರೆಯ ಪ್ರಯುಕ್ತ ತೆಪ್ಪೋತ್ಸವ ನಡೆಸಲು ತಾಲ್ಲೂಕು ಆಡಳಿತ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಮೂಗೂರು ಗ್ರಾಮಸ್ಥರ ಆಗ್ರಹವಾಗಿದೆ.

” ಸ್ಥಳೀಯರ ಸಲಹೆ ಪಡೆಯದೇ ಮಾಡಿರುವ ಎಡವಟ್ಟನ್ನು ಸರಿಪಡಿಸಿಕೊಂಡು ತಜ್ಞರ ಮಾರ್ಗದರ್ಶನದಲ್ಲಿ ನೂತನ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಸಲು ಅಧಿಕಾರಿಗಳು ಮುಂದಾಗಬೇಕಿದೆ.”

-ಎಂ.ಎಂ.ಜಗದೀಶ್, ಎಸ್ಸಿ, ಎಸ್ಟಿ, ಹಿತರಕ್ಷಣಾ ಸಮಿತಿ ಸದಸ್ಯ

” ಕಟ್ಟಡದ ರೀತಿ ಸರಿಯಿಲ್ಲ ಎಂಬ ಸೂಚನೆಯಿದ್ದು,ಕಲ್ಯಾಣಿಯ ದುರಸ್ತಿ ಕಾರ್ಯಕ್ಕೆ ದೊಡ್ಡ ಮಟ್ಟದ ಅನುದಾನ ಬೇಕಾಗಿದೆ. ತೆಪ್ಪ ನಡೆಸುವ ಏಕಾಏಕಿ ನಿರ್ಧಾರ ಕೈಗೊಳ್ಳಲಾಗದ್ದರಿಂದ ಈ ಬಾರಿಯೂ ತೆಪ್ಪೋತ್ಸವ ನಡೆಯುವುದು ಅನುಮಾನ.”

-ಟಿ.ಜಿ.ಸುರೇಶಾಚಾರ್, ತಹಸಿಲ್ದಾರ್, ತಿ.ನರಸೀಪುರ

Tags:
error: Content is protected !!