Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಣ್ಣಿಗೆ ಕಾಣದ ೧ ಕೋಟಿ ರೂ. ಅಭಿವೃದ್ಧಿ ಕೆಲಸ!

ಮಹೇಂದ್ರ ಹಸಗೂಲಿ

ಕಲ್ಕಟ್ಟ ಕೆರೆ ಅಭಿವೃದ್ಧಿ ಕಾಮಗಾರಿ ನಡೆದೇ ಇಲ್ಲ ಎನ್ನುವ ಸ್ಥಳೀಯ ರೈತ ಮುಖಂಡರು 

ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ- ಕೋಡಹಳ್ಳಿ ಮಧ್ಯೆ ಇರುವ ಕಲ್ಕಟ್ಟ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ಭೂಮಿಪೂಜೆ ನಡೆದು ೬ ತಿಂಗಳುಗಳೇ ಕಳೆದಿವೆ. ಆದರೆ, ಅಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಆದರೂ ಒಂದು ಕೋಟಿ ರೂ.ಗಳನ್ನು ಅಭಿವೃದ್ಧಿ ನೆಪದಲ್ಲಿ ಸಣ್ಣ ನೀರಾವರಿ ಇಲಾಖೆಯವರು ಹಾಗೂ ಗುತ್ತಿಗೆ ದಾರರು ಗುಳುಂ ಮಾಡಿದ್ದಾರೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಸಾರ್ವಜನಿಕರು ಆರೋಪಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಎಇಇ ಅವರು ೧ ಕೋಟಿ ರೂ. ವೆಚ್ಚದಲ್ಲಿ ಕಲ್ಕಟ್ಟ ಕೆರೆ ಅಭಿವೃದ್ಧಿಯಾಗಿದೆ ಎಂದಿದ್ದಾರೆ. ಆದರೆ, ಅಲ್ಲಿ ಸ್ಥಳೀಯರ ಕಣ್ಣಿಗೆ ಯಾವುದೇ ಕೆಲಸಗಳು ಕಾಣಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ. ಅಣ್ಣೂರು ಕೇರಿಯಿಂದ ಕಾಲುವೆ ಲೈನಿಂಗ್ ರಿಪೇರಿ, ಸೇತುವೆ ನಿರ್ಮಾಣ, ಹೂಳು ತೆರವು, ಮಣ್ಣು ತೆಗೆಯುವುದು, ಕೆರೆ ನೀರು ಬರುವ ಕಾಲುವೆ ದುರಸ್ತಿ, ರಿವಿಟ್‌ಮೆಂಟ್, ರೀಸೆಟ್ಟಿಂಗ್, ಏರಿ ಮೇಲೆ ಜಂಗಲ್ ಕಟ್ಟಿಂಗ್ ನಂತಹ ಕೆಲಸಗಳನ್ನು ಮಾಡಲಾಗಿದೆ ಎಂದು ಎಇಇ ಅಭಿಲಾಷ್ ತಿಳಿಸಿದ್ದಾರೆ. ಆದರೆ ಅಲ್ಲಿ ಕೆಲಸ ನಡೆದಂತಿಲ್ಲ ಎಂಬುದು ಸ್ಥಳೀಯರ ಆರೋಪ.

ಹುಂಡಿಮನೆ ಕಡೆ ಇರುವ ಕಾಲುವೆ, ಅಣ್ಣೂರು ಕೇರಿಯಿಂದ ಬರುವ ಕಾಲುವೆ, ಕೆರೆ ತುಂಬಿಸುವ ಯೋಜನೆಯಲ್ಲಿ ಗ್ರ್ಯಾವಿಟಿ ಮೂಲಕ ಬರುವ ಕಾಲುವೆ, ಎಲ್ಲಾ ಕಡೆ ಗಿಡಗಂಟಿ, ಪೊದೆಗಳು ಬೆಳೆದು ನಿಂತಿದ್ದು, ಕಾಲುವೆ ಸ್ವಚ್ಛತೆ ಮಾಡಿಲ್ಲ. ರಿವಿಟ್‌ಮೆಂಟ್ ಮಾಡಿರುವ ಬಗ್ಗೆ ಯಾವುದೇ ಕುರುಹುಗಳಿಲ್ಲ. ಏರಿ ಮೇಲೆ ಎರಡು ದಿನ ಜಂಗಲ್ ಕಟಿಂಗ್ ಮಾಡಿದ್ದನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ನಡೆದಿಲ್ಲ. ಹೂಳು ಎತ್ತಿಲ್ಲ, ಕೋಡಿ ಬಳಿ ರಿಪೇರಿ ಮಾಡಿಲ್ಲ. ಹೀಗಿದ್ದ ಮೇಲೆ ೧ ಕೋಟಿ ರೂ. ಎಲ್ಲಿ ಹೋಯಿತು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಕೆರೆ ತುಂಬಿಸುವ ಯೋಜನೆಯಡಿ ಡಿಸೆಂಬರ್‌ನಿಂದ ಕೆರೆಗೆ ನೀರು ಬಂದರೆ ಇವರ ಕಾಮಗಾರಿಗಳು ಕಾಣುವುದಿಲ್ಲ. ನೀರು ತುಂಬಿದ ಮೇಲೆ ಯಾವ ಅಭಿವೃದ್ಧಿಯನ್ನೂ ಮಾಡಲು ಸಾಧ್ಯವಿಲ್ಲ. ಅಲ್ಲದೆ ಕೆಲಸಮುಗಿದಿದೆ ಎನ್ನುವುದಕ್ಕೆ ಸಣ್ಣ ನೀರಾವರಿ ಇಲಾಖೆ ಸೂಕ್ತ ದಾಖಲೆಯನ್ನು ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

” ಶಿವಪುರ ಬಳಿಯ ಕಲ್ಕಟ್ಟಕೆರೆ ಅಭಿವೃದ್ಧಿಗೆಬಿಡುಗಡೆಯಾದ ಒಂದು ಕೋಟಿ ರೂ.ಗಳಲ್ಲಿ ಏರಿಯ ಮೇಲೆ ಜಂಗಲ್ ಕಟಿಂಗ್ ಹಾಗೂ ರಿವಿಟ್‌ಮೆಂಟ್, ಕಾಲುವೆದುರಸ್ತಿ, ಮಣ್ಣು ಹಾಕುವ ಕೆಲಸ, ನೀರು ಬರುವ ಕಾಲುವೆ ದುರಸ್ತಿ, ಸೇತುವೆ ಕಾಮಗಾರಿ ಮುಗಿಸಲಾಗಿದೆ.”

ಅಭಿಲಾಷ್, ಎಇಇ, ಸಣ್ಣ ನೀರಾವರಿ ಇಲಾಖೆ 

” ಸಣ್ಣ ನೀರಾವರಿ ಇಲಾಖೆಯಿಂದ ಕಲ್ಕಟ್ಟ ಕೆರೆಯಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ. ಡಿಸೆಂಬರ್‌ಗೆ ಕೆರೆಗೆ ನೀರು ಬಿಡುವುದಾಗಿ ಹೇಳುತ್ತಾರೆ. ಆದರೆ ಕೆರೆಯ ಒಳಗೆ, ಕೋಡಿ ಬಳಿ, ಏರಿ ಮೇಲೆ ಯಾವ ರೀತಿಯ ಜಂಗಲ್ ಕಟಿಂಗ್ ಮಾಡಿಲ್ಲ. ಕಾಲುವೆ ದುರಸ್ತಿಯಾಗದೆ ೧ ಕೋಟಿ ರೂ.ಗಳ ಅಭಿವೃದ್ಧಿ ಕೆಲಸ ಎಲ್ಲಿ ಮಾಡಿದ್ದಾರೆ ಎಂಬುದೇ ಅನುಮಾನ.”

ಮಹದೇವಪ್ಪ ಶಿವಪುರ, ರೈತಸಂಘದ ಜಿಲ್ಲಾಧ್ಯಕ್ಷ 

Tags:
error: Content is protected !!