Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕುತೂಹಲ ಮೂಡಿಸಿದ ಟಿಎಪಿಸಿಎಂಎಸ್ ಚುನಾವಣೆ

ದಾ.ರಾ.ಮಹೇಶ್

ಕಾಂಗ್ರೆಸ್‌ಗೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿರುವ ಪ್ರತಿಷ್ಠೆ; ಜಾ.ದಳಕ್ಕೆ ಕ್ಷೇತ್ರದ ಶಾಸಕರ ಬಲ 

ವೀರನಹೊಸಹಳ್ಳಿ: ಹುಣಸೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಐದು ವರ್ಷಗಳ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯವಾಗಿದ್ದು, ಅ.೨೬ಕ್ಕೆ ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಚುನಾವಣಾ ಸಿದ್ಧತೆಗಳನ್ನು ಬಿರುಸುಗೊಳಿಸಿದ್ದಾರೆ.

ರಾಜಕೀಯ ಪ್ರವೇಶಕ್ಕೆ ಮೆಟ್ಟಿಲುಗಳಾಗಿರುವ ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ರಾಜಕೀಯಹೊರತಾಗಿದ್ದರೂ, ರಾಜಕೀಯದ ಸೋಂಕಿಲ್ಲದೇ ಚುನಾವಣೆ ನಡೆಯದು ಎನ್ನುವಷ್ಟರ ಮಟ್ಟಿಗೆ ಮಹತ್ವ ಪಡೆದಿದೆ.

ಈ ದಿಸೆಯಲ್ಲಿ ಈಗಾಗಲೇ ಜಾ.ದಳ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ಟಿಎಪಿಸಿ ಎಂಎಸ್ ಚುನಾವಣೆಗೆ ಸಂಬಂಽಸಿದಂತೆ ಸಭೆಗಳನ್ನು ನಡೆಸಿ, ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಿಂದ ನಾಮಪತ್ರ ಸಲ್ಲಿಸಿದ್ದಾರೆ. ಟಿಎಪಿಎಂಸಿಎಸ್ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ‘ಬಿ’ ತರಗತಿ ಯಿಂದ ೧,೫೫೭ ಮಂದಿ ಮತದಾರರು ಇದ್ದಾರೆ. ೧೩ ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್‌ನಲ್ಲಿ ‘ಎ’ ತರಗತಿಗೆ ೪ ಸ್ಥಾನ, ಬಿ’ ತರಗತಿಗೆ ೮ ಸ್ಥಾನಗಳಿವೆ. ೮ ನಿರ್ದೇಶಕ ಸ್ಥಾನಗಳ ಪೈಕಿ ೨ ಸಾಮಾನ್ಯ ಅಭ್ಯರ್ಥಿಗಳಿಗೆ, ೧ ಬಿಸಿಎಂ ಬಿ, ೧ ಬಿಸಿಎಂ ಎ, ೨ ಮಹಿಳಾ ಅಭ್ಯರ್ಥಿಗಳಿಗೆ, ೧ ಪರಿಶಿಷ್ಟ ಜಾತಿ, ೧ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಆಡಳಿತ ಚುಕ್ಕಾಣಿಗಾಗಿ ಎರಡು ಪಕ್ಷಗಳ ಪೈಪೋಟಿ: ಸಹಕಾರ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುವುದಿಲ್ಲ. ಆದರೂ, ಎರಡು ರಾಜಕೀಯ ಪಕ್ಷಗಳಿಗೂ ಟಿಎಪಿಎಂಸಿಎಸ್ ಆಡಳಿತದ ಚುಕ್ಕಾಣಿ ನಮ್ಮ ಕೈಯಲ್ಲೇ ಇರಬೇಕು ಎನ್ನುವ ಪ್ರತಿಷ್ಠೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಸಂಘದ ಅಧಿಕಾರಾವಧಿ ಮುಕ್ತಾಯವಾಗುತ್ತಿದಂತೆ ಅರ್ಹ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲು ಮುಂದಾಗಿದ್ದು ಕಾಂಗ್ರೆಸ್, ಜಾ.ದಳ ಮುಖಂಡರು ಮೊದಲ ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸಿ ಆಕಾಂಕ್ಷಿಗಳ ಪಟ್ಟಿಯನ್ನು ತಯಾರು ಮಾಡಿ ತಂಡ ರಚಿಸಿ ಪ್ರಚಾರ ಆರಂಭಿಸಿದ್ದಾರೆ.

ಪ್ರಸ್ತುತ ಎ ತರಗತಿಯಿಂದ ಜಾ.ದಳ ಬೆಂಬಲಿತ ನಿರ್ದೇಶಕರಾಗಿ ಗೋವಿಂದೇಗೌಡ, ಪ್ರೇಮಕುಮಾರ್, ಹೊನ್ನಪ್ಪರಾವ್ ಕಾಳಿಂಗೆ, ರೇವಣ್ಣ ಪ್ರತಿನಿಧಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕಿನಲ್ಲಿ ಜಾ.ದಳ ಶಾಸಕರು ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಟಿಎಪಿಎಂಸಿಎಸ್‌ನಲ್ಲಿ ಹೆಚ್ಚಿನ ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎನ್ನುವ ಪ್ರತಿಷ್ಠೆ ಒಂದು ಕಡೆಯಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಹೆಚ್ಚಿನ ಸ್ಥಾನಗಳಲ್ಲಿ ಆಯ್ಕೆಯಾಗುವ ಮೂಲಕ ಪಕ್ಷ ಸಂಘಟನೆಗೆ ಈ ಚುನಾವಣೆಯನ್ನು ದಿಕ್ಸೂಚಿಯಾಗಿಸಿಕೊಳ್ಳುವ ತವಕ ಕಾಂಗ್ರೆಸ್‌ನದ್ದಾಗಿದೆ. ಕಾಂಗ್ರೆಸ್, ಜಾ.ದಳ ದಿಂದ ತಲಾ ೮ ಮಂದಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯವರು ಈವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಟಿಎಪಿಎಂಸಿಎಸ್ ಚುನಾವಣೆ ಕುತೂಹಲ ಕೆರಳಿಸಿದೆ.

” ಹುಣಸೂರು ಕ್ಷೇತ್ರದಲ್ಲಿ ಸಹಕಾರ ರಂಗದಲ್ಲಿ ಜಾ.ದಳವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ೪ ಕ್ಷೇತ್ರಗಳಿಂದ ಈಗಾಗಲೇ ಜಾ.ದಳದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ೮ ಕ್ಷೇತ್ರಗಳಲ್ಲೂ ಚುನಾವಣೆಯಲ್ಲಿ ನಾವೇ ಗೆದ್ದುಮ ಟಿಎಪಿಸಿಎಂಎಸ್ ಅಧಿಕಾರ ಹಿಡಿಯುತ್ತೇವೆ.”

-ಜಿ.ಡಿ.ಹರೀಶ್‌ಗೌಡ, ಶಾಸಕ

” ೩೫ ವರ್ಷಗಳಿಂದ ಹುಣಸೂರು ಕ್ಷೇತ್ರದಲ್ಲಿ ಸಹಕಾರ ಕ್ಷೇತ್ರದಲ್ಲಿ ಜಾ.ದಳ ಬಲಿಷ್ಠಗೊಂಡಿತ್ತು. ಆದರೆ, ಅದರ ಬೇರು ಹಂತಹಂತವಾಗಿ ಮುರಿಯುತ್ತಿದ್ದು, ಕಾಂಗ್ರೆಸ್ ಪಕ್ಷವೂ ಸಹಕಾರ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ.”

-ಎಚ್.ಪಿ.ಮಂಜುನಾಥ್, ಮಾಜಿ ಶಾಸಕ

Tags:
error: Content is protected !!