‘ಆಂದೋಲನ’ದೊಂದಿಗೆ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡ ಯುವ ಕೈಗಾರಿಕೋದ್ಯಮಿಗಳು, ಸಾರ್ವಜನಿಕರು
‘ಕೈಗಾರಿಕೆ-ಅಭಿವೃದ್ಧಿ ಕನವರಿಕೆ’ ಲೇಖನ ಸರಣಿಗೆ ಉತ್ತಮ ಪ್ರತಿಕ್ರಿಯೆ
ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾದ ಕೈಗಾರಿಕೆ ಕ್ಷೇತ್ರ ಕುರಿತ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೈಗಾರಿಕೋದ್ಯಮಿಗಳು, ಸಾರ್ವಜನಿಕರು ಸರಣಿಯನ್ನು ವಿಶ್ಲೇಷಿಸಿ ಸರ್ಕಾರಕ್ಕೆ ತಮ್ಮ ಒತ್ತಾಸೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಲೇಖನ, ಕೈಗಾರಿಕೆ ಕ್ಷೇತ್ರದಲ್ಲಿನ ಲೋಪದೋಷಗಳು, ಬೇಡಿಕೆಗಳು, ಸರ್ಕಾರದ ಯೋಜನೆಗಳು, ಉದ್ಯೋಗಾವಕಾಶಗಳು ಮತ್ತು ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿತ್ತು. ವರದಿಗಳ ಪರಿಣಾಮದಿಂದ ಕೈಗಾರಿಕೋದ್ಯಮಿಗಳಿಗೆ ಹಾಗೂ ಯುವ ಕೈಗಾರಿಕೋದ್ಯಮಿಗಳಿಗೆ ಮಾಹಿತಿ ಸಿಕ್ಕಂತಾಗಿದೆ. ಇನ್ನೂ ಕೈಗಾರಿಕೆ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲು ಉದ್ಯಮಿಗಳು ಮುಂದಾಗಿದ್ದಾರೆ. ಈ ಸರಣಿ ಲೇಖನಗಳ ಕುರಿತು ಸಾರ್ವಜನಿಕರು ಮತ್ತು ಉದ್ಯಮಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಜೊತೆಗೆ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದಾರೆ.
ಕೈಗಾರಿಕೆ ಕ್ಷೇತ್ರವೂ ಹೆಚ್ಚಿನ ಉದ್ಯೋಗ ಸೃಷ್ಟಿಸುವ ವಲಯವಾಗಿದ್ದು, ಇತರೆ ರಾಜ್ಯಗಳಲ್ಲಿ ಸರ್ಕಾರ ಕೈಗಾರಿಕೆ ಕ್ಷೇತ್ರವನ್ನು ಉತ್ತೇಜಿಸಲು ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಆನ್‌ಲೈನ್ ಮೂಲಕ ಕೈಗಾರಿಕೋದ್ಯಮಿಗಳು ತಮ್ಮ ಕೈಗಾರಿಕೆಗಳ ಸ್ಥಾಪನೆ ಸ್ಥಳ, ಬಜೆಟ್ ಎಲ್ಲವನ್ನೂ ತಿಳಿದು ಕೊಳ್ಳಬಹುದಾಗಿದೆ. ಆ ರಾಜ್ಯಗಳಲ್ಲಿ ಕೃಷಿ ಜಮೀನನ್ನು ಬಿಟ್ಟು ಉಳಿದಂತೆ ಕೈಗಾರಿಕೆಗಾಗಿಯೇ ನಿವೇಶನಗಳನ್ನು ನೀಡುತ್ತವೆ. ಇಂತಹ ನೆರವನ್ನು ಕರ್ನಾಟಕ ಸರ್ಕಾರವೂ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರವೇ ಕೈಗಾರಿಕಾ ಪ್ರದೇಶವೆಂದು ಭೂಮಿಯನ್ನು ನೀಡಿ ಮತ್ತೆ ‘ಡಿ’ ನೋಟಿಫಿಕೇಷನ್ ಮೂಲಕ ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸುತ್ತಿದೆ. ಇದು ಎಷ್ಟು ಸರಿ? ಮೊದಲೇ ರೂಪುರೇಷೆಗಳನ್ನು ನೋಡಿ, ಸ್ಥಳ ಪರಿಶೀಲಿಸಿ ಕೈಗಾರಿಕಾ ವಲಯವೆಂದು ಸರ್ಕಾರ ಘೋಷಿಸಬೇಕು. ಇದು ರೈತರು ಮತ್ತು ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗಲಿದೆ ಎಂಬ ಒತ್ತಾಯವೂ ಕೇಳಿ ಬಂದಿದೆ.
ಸಣ್ಣ-ಸೂಕ್ಷ್ಮ ಕೈಗಾರಿಕೆಗಳಲ್ಲೂ ಉದ್ಯೋಗವಿದೆ:
ಇತ್ತೀಚೆಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಯುವಕರು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಆಸಕ್ತಿ ತೋರುತ್ತಿರುವಷ್ಟು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಮೇಲೆ ತೋರುತ್ತಿಲ್ಲ. ಏಕೆಂದರೆ ಕೆಲವು ಕೌಶಲ ಕೊರತೆಯ ಜೊತೆಗೆ ಮುಖ್ಯವಾಗಿ ಮಾನವ ಶ್ರಮ ಹೆಚ್ಚಿರುವುದರಿಂದ ಯಂತ್ರಗಳ ಬಳಕೆಯ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಿ ಕೈಗಾರಿಕೆಗಳು ನಷ್ಟ ಅನುಭವಿಸಿ ಮುಚ್ಚುವ ಹಂತ ತಲುಪಲಿವೆ. ಇದರ ಬಗ್ಗೆ ಸರ್ಕಾರ ಗಮನ ಕೊಡಬೇಕು ಎಂದು ಕೈಗಾರಿಕೆಗಳ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.
” ಪತ್ರಿಕೆಯಲ್ಲಿ ಪ್ರಕಟವಾದ ಸರಣಿ ವರದಿಗಳು ಸರ್ಕಾರದ ಸವಲತ್ತುಗಳು, ಯೋಜನೆಗಳನ್ನು ತಿಳಿಸಿವೆ. ಕೇರಳದಲ್ಲಿ ಪ್ರೌಢಶಾಲೆ ಹಂತದಿಂದಲೇ ಕೌಶಲಾಧರಿತ ಕೋರ್ಸ್‌ಗಳನ್ನು ನೀಡುತ್ತಾರೆ. ಅಂತಹ ಶಿಕ್ಷಣವನ್ನು ಕರ್ನಾಟಕದಲ್ಲೂ ಸರ್ಕಾರ ಆರಂಭಿಸಬೇಕು.”
-ಜಗದೀಶ್ ಸೂರ್ಯ, ಕಾರ್ಮಿಕ ಸಂಘಟನೆ ಹೋರಾಟಗಾರ
” ದೇಶದಲ್ಲಿ ಕೃಷಿ ಬಿಟ್ಟರೆ ಅತಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು ಕೈಗಾರಿಕಾ ಕ್ಷೇತ್ರ. ಅನೇಕ ಕೈಗಾರಿಕೆಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕರನ್ನು ಶೋಷಿಸುತ್ತವೆ. ಇವುಗಳ ಬಗ್ಗೆಯೂ ಕೈಗಾರಿಕೆ ಸಂಘಗಳು ಗಮನಹರಿಸಬೇಕು.”
-ಮಲ್ಲೇಶ್, ಉಪಾಧ್ಯಕ್ಷರು, ಮೈಸೂರು ವಿವಿ ಸಂಶೋಧಕರ ಸಂಘ
” ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾದ ಕೈಗಾರಿಕೆ ಕ್ಷೇತ್ರದ ಸರಣಿ ಮಾಲಿಕೆಯಿಂದ ಕೈಗಾರಿಕೋದ್ಯಮಿಗಳು ಸರ್ಕಾರದ ಗಮನ ಸೆಳೆಯಲು ಸಾಧ್ಯವಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಸ್ಪಂದಿಸಬೇಕು, ಸಾಲ ಸೌಲಭ್ಯಗಳನ್ನು ನೀಡಬೇಕು.”
-ಸುರೇಶ್ ಕುಮಾರ್ ಜೈನ್, ಕೈಗಾರಿಕೋದ್ಯಮಿ
” ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೈಗಾರಿಕೆ ಕ್ಷೇತ್ರಕ್ಕೆ ಸರ್ಕಾರದಿಂದ ವ್ಯವಸ್ಥಿತವಾದ ಉತ್ತೇಜನ ಸಿಗುತ್ತಿಲ್ಲ. ಸರ್ಕಾರ ನೇರವಾಗಿ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿಲ್ಲ. ಸರ್ಕಾರೇತರ ವಲಯಗಳಲ್ಲಿ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸಬೇಕು.”
-ಎಚ್.ರಾಮಕೃಷ್ಣಗೌಡ, ಗೌರವಾಧ್ಯಕ್ಷ, ಕಡಕೊಳ- ಅಡಕನಹಳ್ಳಿ ಕೈಗಾರಿಕಾ ಸಂಘ
” ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿ, ಬೇಡಿಕೆ ಹೆಚ್ಚಿಸಿ, ಆಮದು ಕಡಿಮೆ ಮಾಡಿ ಸ್ವದೇಶಿ ಉತ್ಪನ್ನಗಳನ್ನು ರಫ್ತು ಮಾಡಲು ಜಾರಿ ಮಾಡಿರುವ ಮೇಕ್ ಇನ್ ಇಂಡಿಯಾ ಯೋಜನೆಯಡಿ ಉದ್ಯಮಗಳ ಸ್ಥಾಪನೆಗೆ ಸರ್ಕಾರ ಉತ್ತೇಜನ ನೀಡಿ ಉದ್ಯೋಗ ಸೃಷ್ಟಿಗೆ ನೆರವಾಗಬೇಕು.”
-ಗುರು ಬಸವ, ಸ್ಥಳೀಯರು
” ೨೦೨೪-೨೫ರಲ್ಲಿ ೩೯ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಯೋಜನೆಗಳು ಕೂರ್ಗಳ್ಳಿ, ಹೂಟಗಳ್ಳಿ, ತಾಂಡ್ಯ ಹಾಗೂ ಕೋಚನಹಳ್ಳಿ ಪ್ರದೇಶಗಳಲ್ಲಿ ಸ್ಥಾಪನೆಯಾಗಲಿವೆ. ೧೪,೪೦೦ ಕೋಟಿ ರೂ. ಹೂಡಿಕೆಗೆ ಒಪ್ಪಂದ ಮಾಡಿಕೊಂಡಿವೆ. ಇವು ಕಾರ್ಯಗತವಾಗಬೇಕು.”
-ಪವಿತ್ರ, ಸ್ಥಳೀಯರು
” ಪತ್ರಿಕೆಯಲ್ಲಿ ಪ್ರಕಟವಾದ ಸರಣಿ ಲೇಖನ ಉಪಯುಕ್ತವಾಗಿದೆ. ಕೆಐಎಡಿಬಿ ಸೂಕ್ಷ್ಮ, ಅತಿ ಸೂಕ್ಷ್ಮ ಕೈಗಾರಿಕೆಗಳಿಗೆ ೫೦ ರಿಂದ ೧೦೦ ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶದಲ್ಲಿ ಮೀಸಲಿರಿಸಿ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಬೇಕು.”
-ಮಂಜುನಾಥ್, ಅಧ್ಯಕ್ಷ, ಎಸ್‌ಸಿ-ಎಸ್‌ಟಿ ಕೈಗಾರಿಕೋದ್ಯಮಿಗಳ ಸಂಘ




