Mysore
23
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ಇಂದಿರಾ ಕ್ಯಾಂಟೀನ್‌ಗೂ ಸಂಕಷ್ಟ ; ಸೀಮಿತಗೊಂಡ ತಿನಿಸುಗಳ ತಯಾರಿ

ನವೀನ್ ಡಿಸೋಜ

ಹೋಟೆಲ್‌ಗಳಿಗೆ ಪೂರೈಕೆಯಾಗದ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳು ಪೂರೈಕೆಯಾಗದೆ ಸಮಸ್ಯೆ ಮುಂದುವರಿದಿದೆ. ಪೂರೈಕೆಯಾಗಿರುವ ಸಿಲಿಂಡರ್‌ಗಳಲ್ಲಿಯೇ ನಿರ್ವಹಣೆ ಕಷ್ಟಕರವಾಗುತ್ತಿದೆ.

ಇರಾನ್ ಮೇಲೆ ಇಸ್ರೇಲ್ -ಅಮೆರಿಕ ಸಮರ ಸಾರಿರುವ ಹಿನ್ನೆಲೆಯಲ್ಲಿ ಅನಿಲ ಸಮಸ್ಯೆ ಮುಂದುವರಿದಿದೆ. ಜಿಲ್ಲೆಯಲ್ಲಿ ಗೃಹಬಳಕೆಯ ಸಿಲಿಂಡರ್ ಪೂರೈಕೆ ಸಮರ್ಪಕವಾಗಿದೆ. ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ದೊರೆಯದೆ ಹೋಟೆಲ್, ರೆಸಾರ್ಟ್ ಸೇರಿದಂತೆ ವಿವಿಧ ಉದ್ಯಮಗಳು ನಷ್ಟ ಅನುಭವಿಸುವಂತಾಗಿದೆ.

ಸಿಲಿಂಡರ್ ಪೂರೈಕೆಯಾಗದೆ ಕೆಲವು ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಕೆಲವು ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಮೊದಲು ೧೦ಕ್ಕೂ ವಿಧದ ಬಗೆಯ ತಿಂಡಿ ಮಾಡುತ್ತಿದ್ದ ಹೋಟೆಲ್‌ಗಳಲ್ಲಿ ಈಗ ೫ ಬಗೆಯ ತಿನಿಸುಗಳನ್ನು ಮಾತ್ರ ಮಾಡಲಾಗುತ್ತಿದೆ. ಕಡಿಮೆ ಅನಿಲದಲ್ಲಿ ತಯಾರಾಗುವ ತಿನಿಸು ಗಳ ಮೊರೆ ಹೋಗಲಾಗಿದೆ. ಇರುವ ಸಿಲಿಂಡರ್‌ಗಳನ್ನು ಮಿತವಾಗಿ ಬಳಸಲು ನಿರ್ಧರಿಸಲಾಗಿದೆ.

ಅಡುಗೆ ಅನಿಲ ಕೊರತೆಯಿಂದ ಪ್ರವಾಸೋದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಸದ್ಯ ಈಗ ಪರೀಕ್ಷೆಯ ಸಮಯವೂ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಈ ತಿಂಗಳ ಅಂತ್ಯಕ್ಕೆ ಬಹುತೇಕ ಪರೀಕ್ಷೆಗಳು ಮುಕ್ತಾಯವಾಗಲಿದ್ದು, ಬೇಸಿಗೆ ಪ್ರವಾಸೋದ್ಯಮ ಮತ್ತೆ ತೆರೆದುಕೊಳ್ಳಲಿದೆ. ಆ ವೇಳೆಗೆ ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ.

ಇಂದಿರಾ ಕ್ಯಾಂಟೀನ್‌ಗಳಿಗೂ ಅಡುಗೆ ಅನಿಲ ಕೊರತೆಯ ಬಿಸಿ ತಟ್ಟಿದೆ. ಮೊದಲು ಬೆಳಿಗ್ಗೆ ೨ ವಿಧದ ತಿನಿಸು ನೀಡಲಾಗುತ್ತಿತ್ತು. ಆದರೆ, ಈಗ ಅಡುಗೆ ಅನಿಲ ಸಮರ್ಪಕವಾಗಿ ಪೂರೈಕೆಯಾಗದಿರುವುದರಿಂದ ಒಂದೇ ಬಗೆಯ ತಿನಿಸು ತಯಾರಿ ಮಾಡಲಾಗುತ್ತಿದೆ. ನಗರದಲ್ಲಿ ಸದ್ಯಕ್ಕೆ ಸಾಕಾಗುವಷ್ಟು ಅಡುಗೆ ಅನಿಲವಿದ್ದು, ಸಕಾಲದಲ್ಲಿ ಪೂರೈಕೆಯಾಗದಿದ್ದಲ್ಲಿ ಸಮಸ್ಯೆಯಾಗಲಿದೆ.

” ಕಳೆದ ೩-೪ ದಿನಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಾಗಿಲ್ಲ. ಬಂದ ತಕ್ಷಣ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ಸಾಕಷ್ಟು ಮಂದಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳನ್ನು ಕೇಳುತ್ತಿದ್ದು, ಬಂದ ತಕ್ಷಣ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.”

-ಕುಶಾಲ್, ಗ್ಯಾಸ್ ವಿತರಕರು, ಮಡಿಕೇರಿ

” ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಡುಗೆ ಅನಿಲದ ಕೊರತೆಯಿಂದ ಉಪಾಹಾರ ತಿನಿಸಿನ ಸಂಖ್ಯೆ ಕಡಿಮೆ ಮಾಡಲಾಗಿದೆ. ಮೊದಲು ೨ ವಿಧದ ತಿನಿಸು ನೀಡಲಾಗುತ್ತಿತ್ತು. ಈಗ ಒಂದೇ ಬಗೆಯ ತಿನಿಸು ಮಾಡಲಾಗುತ್ತಿದೆ. ಹಸಿದು ಕ್ಯಾಂಟೀನ್ಗೆ ಬರುವವರಿಗೆ ಊಟ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇರುವ ಸಿಲಿಂಡರ್‌ಗಳನ್ನು  ಬಳಸಲಾಗುತ್ತಿದ್ದು, ಶೀಘ್ರದಲ್ಲಿ ಸಿಲಿಂಡರ್ ಪೂರೈಕೆಯಾಗದಿದ್ದಲ್ಲಿ ಸಮಸ್ಯೆಯಾಗಲಿದೆ.”

-ರಮೇಶ್, ಪೌರಾಯುಕ್ತರು, ಮಡಿಕೇರಿ

” ವಾಣಿಜ್ಯ ಅನಿಲ ಪೂರೈಕೆಯಾಗದೆ ಸಮಸ್ಯೆ ಮುಂದುವರಿದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಆದರೆ, ವಾಣಿಜ್ಯ ಸಿಲಿಂಡರ್ ಪೂರೈಕೆಯಾಗಿರುವ ಮಾಹಿತಿ ದೊರೆತಿಲ್ಲ. ಈಗಾಗಲೇ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಶೀಘ್ರದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಾಗದಿದ್ದಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ.”

-ದಿನೇಶ್ ಕಾರ್ಯಪ್ಪ, ಅಧ್ಯಕ್ಷರು, ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್‌ 

” ವಾಣಿಜ್ಯ ಅಡುಗೆ ಅನಿಲ ಕೊರತೆಯಿಂದ ಕೊಡಗು ಜಿಲ್ಲೆಯ ಶಾಲೆಗಳಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಬಿಸಿಯೂಟ ವಿತರಣೆಯಲ್ಲಿಯೂ ಯಾವುದೇ ಸಮಸ್ಯೆಯಾಗಿಲ್ಲ.”

-ಬಸವರಾಜು, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ

 

 

Tags:
error: Content is protected !!