ಚೀನಿ ಸೈನಿಕರು ಫಿರಂಗಿಗಳೊಂದಿಗೆ ಮುನ್ನುಗ್ಗುತ್ತಲೇ ಇದ್ದರು…
ಉದ್ವಿಗ್ನ ಸನ್ನಿವೇಶದಲ್ಲಿ ರಕ್ಷಣಾ ಸಚಿವರಿಂದ ಸಿಗದ ಸ್ಪಷ್ಟ ಸಂದೇಶ
೨ ಗಂಟೆಗಳ ಕಾಲ ಭಾರತೀಯ ಸೇನೆ ತಳಮಳ
‘ಆಪ್ ಜೋ ಉಚಿತ್ ಸಮ್‌ಜೋ, ವೋ ಕರೋ’ ಪ್ರಧಾನಿ ಸಂದೇಶ
೨೦೨೦, ಆಗಸ್ಟ್ ೩೧ರ ರಾತ್ರಿ ೮.೧೫ ನಿಮಿಷಕ್ಕೆ ಸರಿಯಾಗಿ ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ಮುಖ್ಯಸ್ಥ ಜನರಲ್ ಯೋಗೇಶ್ ಜೋಶಿ ಅವರಿಗೆ ಒಂದು ಫೋನ್ ಕಾಲ್ ಬಂತು. ಆ ಕಡೆಯಿಂದ ಬಂದ ಮಾಹಿತಿಯು ಗಾಬರಿಗೊಳಿಸುವಂತಿತ್ತು. ‘ಪೂರ್ವ ಲಡಾಖ್‌ನ ಕಡಿದಾದ ಪರ್ವತದ ಮಾರ್ಗದಲ್ಲಿ ಚೀನಾ ಸೈನಿಕರ ಚಲನವಲನಗಳು ದಿಢೀರನೆ ಹೆಚ್ಚಾಗಿವೆ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (PLA) ನಾಲ್ಕು ಫಿರಂಗಿಗಳು, ಭೂಸೇನೆಯ ನೂರಾರು ಯೋಧರೊಂದಿಗೆ ಭಾರತದ ಭೂಭಾಗದವಾದ ರೆಚಿನ್ ಲಾ ಪಾಸ್‌ನತ್ತ ಮುನ್ನುಗ್ಗುತ್ತಿವೆ’ ಎಂಬ ಅಪಾಯಕಾರಿ ಮಾಹಿತಿಯದು.
ತಮಗೆ ದೊರೆತ ಈ ಮಾಹಿತಿಯನ್ನು ಜನರಲ್ ಜೋಶಿ ಅವರು ತಕ್ಷಣವೇ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರಿಗೆ ರವಾನಿಸಿದರು. ಈ ಮಾಹಿತಿಯ ಗಾಂಭೀರ್ಯತೆ ಮತ್ತು ಗಡಿಯಲ್ಲಿರುವ ಉದ್ವಿಗ್ನ ಪರಿಸ್ಥಿತಿ ಯನ್ನು ಜನರಲ್ ನರವಣೆ ತಕ್ಷಣವೇ ಗ್ರಹಿಸಿದರು. ಕೆಲವೇ ಗಂಟೆಗಳ ಹಿಂದೆ ಚೀನಾದ ಸೈನಿಕರೊಂದಿಗೆ ಕಾದಾಡಿ ಭಾರತೀಯ ಸೈನಿಕರು ವಶಪಡಿಸಿ ಕೊಂಡಿದ್ದ ಕೈಲಾಶ್ ಶ್ರೇಣಿಯ ಎತ್ತರದ ಮತ್ತು ರಣ ತಂತ್ರದ (ಸ್ಟ್ರಾಟೆಜಿ) ದೃಷ್ಟಿಯಿಂದ ಅತ್ಯಂತ ಮಹತ್ವದ್ದೆನಿ ಸಿದ ಪ್ರದೇಶದಿಂದ ಚೀನಿ ಯರ ಫಿರಂಗಿಗಳು ಕೆಲವೇ ಮೀಟರ್ ದೂರದಲ್ಲಿದ್ದವು.
ಭಾರತ-ಚೀನಾ ನಡುವಿನ ವಿವಾದಿತ ವಾಸ್ತವಿಕ ಗಡಿರೇಖೆಯಲ್ಲಿರುವ ಈ ಪ್ರದೇಶದಲ್ಲಿ ಪ್ರತಿ ಮೀಟರ್ ಎತ್ತರವೂ ರಣತಂತ್ರದ ದೃಷ್ಟಿಯಿಂದ ಎರಡೂ ದೇಶ ಗಳಿಗೆ ಅತ್ಯಂತ ನಿರ್ಣಾಯಕ. ಈ ಹಂತದಲ್ಲಿ ಭಾರತೀಯ ಸೈನಿಕರು ವಾರ್ನಿಂಗ್ ರೂಪದಲ್ಲಿ ಹಲವು ಸುತ್ತು ಗುಂಡು ಹಾರಿಸಿದರೂ ಚೀನಾದ ಸೈನಿಕರ ಮೇಲೆ ಏನೂ ಪರಿಣಾಮ ಆಗಲಿಲ್ಲ. ಚೀನಿ ಸೈನಿಕರು ಫಿರಂಗಿಗಳೊಂದಿಗೆ ಮುನ್ನುಗ್ಗುತ್ತಲೇ ಇದ್ದರು. ಆಗ ಜನರಲ್ ನರವಣೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೇರಿದಂತೆ ದೇಶದ ರಾಜಕೀಯ ಮತ್ತು ಸೈನ್ಯ ಪಡೆಗಳ ನಾಯಕರಿಗೆ ಉದ್ವೇಗದಲ್ಲಿ ಕರೆ ಮಾಡಲಾರಂಭಿಸಿದರು.
ಒಂದೇ ಒಂದು ಪ್ರಶ್ನೆ: ಪ್ರತಿಯೊಬ್ಬರಿಗೂ ನಾನು ಕೇಳಿದ್ದು ಒಂದೇ ಒಂದು ಪ್ರಶ್ನೆ. ‘ಈಗ ನನಗೆ ಆದೇಶ ವೇನು?’ ಎಂಬುದೇ ಆಗಿತ್ತು ಎಂದು ಜನರಲ್ ನರವಣೆ ತಮ್ಮ ಇನ್ನೂ ಪ್ರಕಟವಾಗದ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯಲ್ಲಿ ಬರೆದಿದ್ದಾರೆ. ವಾಸ್ತವಿಕ ಗಡಿ ರೇಖೆಯಲ್ಲಿನ ಪರಿಸ್ಥಿತಿ ನಿಮಿಷದಿಂದ ನಿಮಿಷಕ್ಕೆ ಬಿಗಡಾಯಿಸುತ್ತಿತ್ತು, ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಮತ್ತು ನಾವೇನು ಮಾಡಬೇಕೆಂಬ ಬಗ್ಗೆ ನಮಗೆ ಸ್ಪಷ್ಟತೆ ಸಿಗಬೇಕಾದ ತುರ್ತು ಅಗತ್ಯವಿತ್ತು. ಉನ್ನತ ಅಧಿಕಾರಿಗಳಿಂದ ಸ್ಪಷ್ಟ ಆದೇಶವಿಲ್ಲದೇ ಚೀನಾ ಗಡಿಯಲ್ಲಿ ಗುಂಡುಗಳನ್ನು ಹಾರಿಸುವಂತಿಲ್ಲ ಎಂಬ ಸ್ಪಷ್ಟ ಆದೇಶವೊಂದು ಜಾರಿಯಲ್ಲಿರುವುದರಿಂದ ಮೇಲಧಿಕಾರಿಗಳಿಂದ ಆದೇಶವನ್ನು ಜನರಲ್ ನರವಣೆ ನಿರೀಕ್ಷಿಸುತ್ತಿದ್ದರು. ಆದರೆ, ಮೇಲಧಿಕಾರಿಗಳಿಂದ ಯಾವುದೇ ಸ್ಪಷ್ಟ ಸೂಚನೆ ಬರಲೇ ಇಲ್ಲ.
ರಾತ್ರಿ ೯.೧೦ಕ್ಕೆ ಮತ್ತೆ ಜನರಲ್ ಯೋಗೇಶ್ ಜೋಶಿ ಕರೆ ಮಾಡಿದರು. ಚೀನಾದ ಮಿಲಿಟರಿ ಟ್ಯಾಂಕ್‌ಗಳು ಮುನ್ನುಗ್ಗುತ್ತಲೇ ಇವೆ. ರೆಚಿನ್ ಲಾ ಪಾಸ್‌ನಿಂದ ಒಂದು ಕಿ.ಮೀ.ಗಿಂತಲೂ ಕಡಿಮೆ ಅಂತರದಲ್ಲಿವೆ ಎಂಬ ಮಾಹಿತಿ ದೊರೆಯಿತು. ರಾತ್ರಿ ೯.೨೫ಕ್ಕೆ ಜನರಲ್ ನರವಣೆ ಮತ್ತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ, ‘ಇಂಥ ಉದ್ವಿಗ್ನ ಸ್ಥಿತಿಯಲ್ಲಿ ಏನು ಮಾಡಬೇಕು’ ಎಂದು ಕೇಳಿದರು. ಆದರೆ, ಆ ಕಡೆಯಿಂದ ಏನೂ ಉತ್ತರ ಸಿಗಲಿಲ್ಲ. ಈ ನಡುವೆ ಚೀನಾದ ಕಮಾಂಡರ್ ಲಿಯು ಲಿನ್ ಅವರಿಂದ ಒಂದು ಸಂದೇಶ ಬಂತು. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಸ್ತಾವವನ್ನು ಅವರು ಮುಂದಿಟ್ಟರು. ‘ಎರಡೂ ಕಡೆಯ ಸೈನಿಕರು ತಮ್ಮ ಚಲನವಲನಗಳನ್ನು ತಕ್ಷಣಕ್ಕೆ ಸ್ಥಗಿತಗೊಳಿಸಬೇಕು ಮತ್ತು ಸ್ಥಳೀಯ ಕಮಾಂಡರ್‌ಗಳು ಮರುದಿನ ಬೆಳಿಗ್ಗೆ ೯.೩೦ಕ್ಕೆ ರೇಚಿನ್ ಲಾ ಪಾಸ್‌ನಲ್ಲಿ ತಲಾ ಮೂವರು ಪ್ರತಿನಿಧಿಗಳೊಂದಿಗೆ ಸಭೆ ಸೇರಬೇಕು’ ಎಂಬ ಪ್ರಸ್ತಾವ ಅದು. ಈ ಹಂತದಲ್ಲಿ ಇದು ಸೂಕ್ತವಾದ ಪ್ರಸ್ತಾವವೆಂದು ಜನರಲ್ ನರವಣೆ ಅವರಿಗೆ ಅನ್ನಿಸಿತು.
ರಾತ್ರಿ ೧೦ ಗಂಟೆಗೆ ರಾಜನಾಥ್ ಸಿಂಗ್ ಮತ್ತು ಮತ್ತು ಅಜಿತ್ ದೋವಲ್ ಅವರಿಗೆ ಕರೆ ಮಾಡಿ ಚೀನಾದ ಕಮಾಂಡರ್ ಮುಂದಿಟ್ಟಿರುವ ಪ್ರಸ್ತಾವವನ್ನು ವಿವರಿಸಿದರು. ಹತ್ತೇ ಹತ್ತು ನಿಮಿಷಗಳ ನಂತರ ನಾರ್ದರ್ನ್ ಕಮಾಂಡ್ ನ ದೂರವಾಣಿ ಮತ್ತೆ ರಿಂಗಣಿಸತೊಡಗಿತು. ‘ಚೀನಾ ಮಿಲಿಟರಿಯ ಟ್ಯಾಂಕ್ಗಳು ಇನ್ನೂ ಮುನ್ನುಗ್ಗು ತ್ತಲೇ ಇವೆ. ಈಗ ಅವು ರೇಚಿನ್ ಲಾ ಪಾಸ್‌ನಿಂದ ಕೆಳಕ್ಕೆ ಕೇವಲ ಐದು ಮೀಟರ್ ದೂರದಲ್ಲಿವೆ, ಈ ಹಂತದಲ್ಲಿ ಚೀನಿಯರನ್ನು ತಡೆಯುವ ಏಕೈಕ ಮಾರ್ಗವೆಂದರೆ ಈಗಾಗಲೇ ಸಿದ್ಧವಿರುವ ನಮ್ಮ ಮಧ್ಯಮ ಗಾತ್ರದ ಫಿರಂಗಿಗಳನ್ನು ತಕ್ಷಣಕ್ಕೆ ನಿಯೋಜಿಸುವುದು’ ಎಂದು ಜನರಲ್ ಜೋಶಿ ಹೇಳಿದರು ಎಂಬುದನ್ನು ಜನರಲ್ ನರವಣೆ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಪಾಕ್ ಬೇರೆ, ಚೀನಾ ಬೇರೆ: ಪಾಕಿಸ್ತಾನದೊಂದಿಗಿರುವ ನಿಯಂತ್ರಣ ರೇಖೆಯಲ್ಲಿ ಪ್ರತಿದಿನ ಗುಂಡಿನ ಚಕಮಕಿಗಳು ಸಾಮಾನ್ಯ ಸಂಗತಿ. ಪಾಕಿಸ್ತಾನದ ವಿರುದ್ಧ ಮದ್ದು ಗುಂಡುಗಳನ್ನು ಬಳಸುವ ಮೊದಲು ಅಲ್ಲಿನ ವಿಭಾಗೀಯ ಮತ್ತು ಕಾರ್ಪ್ಸ್ ಕಮಾಂಡರ್‌ಗಳು ಮೇಲಧಿಕಾರಿಗಳ ಅನುಮತಿ ಪಡೆಯಬೇಕೆಂಬ ನಿಯಮವೇನೂ (ಪ್ರೊಟೊಕಾಲ್) ಇಲ್ಲ. ಯಾರ ಅನುಮತಿಯೂ ಇಲ್ಲದೇ ಪ್ರತಿದಿನ ನೂರಾರು ಸುತ್ತಿನ ಗುಂಡು ಹಾರಿಸಲು ಪಾಕ್ ಗಡಿಯಲ್ಲಿ ನಿಯೋಜಿತಗೊಂಡಿರುವ ಭಾರ ತೀಯ ಯೋಧರಿಗೆ ಅವಕಾಶವಿದೆ. ಆದರೆ, ಚೀನಾ ಗಡಿಯಲ್ಲಿನ ಪರಿಸ್ಥಿತಿಯೇ ಬೇರೆ. ಚೀನಾ ಸೈನ್ಯದೊಂದಿಗೆ ಈ ರೀತಿಯ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವ ಸಾಧ್ಯತೆಗಳಿರುವುದರಿಂದ ಮೇಲಧೀಕಾರಿ ಗಳ ಅನುಮತಿ ಇಲ್ಲದೇ ಚೀನಾ ಗಡಿಯಲ್ಲಿ ಮದ್ದು ಗುಂಡುಗಳನ್ನು ಬಳಸುವಂತಿರಲಿಲ್ಲ. ‘ಇಂಥ ಸಂದಿಗ್ಧ ಸ್ಥಿತಿಯಲ್ಲಿ ಅತ್ಯಂತ ನಿರ್ಣಾಯಕ ಮತ್ತು ದೂರಗಾಮಿ ಪರಿಣಾಮ ಬೀರಬಹುದಾದ ತೀರ್ಮಾನ ಕೈಗೊಳ್ಳಲೇ ಬೇಕಾದ ಸ್ಥಾನದಲ್ಲಿ ನಾನು ಇದ್ದೆ’ ಎಂದು ಜನರಲ್ ನರವಣೆ ಪುಸ್ತಕದಲ್ಲಿ ವಿವರಿಸಿದ್ದಾರೆ.
ಚೀನಾದ ಸೈನಿಕರು ಮುನ್ನುಗ್ಗದಂತೆ ತಡೆಯುವುದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ನಾವು ಕೈಗೊಳ್ಳಲೇ ಬೇಕು ಎಂಬ ಸ್ಪಷ್ಟ ಅಭಿಪ್ರಾಯ ಹೊಂದಿದ್ದ ನಾರ್ದರ್ನ್ ಕಮಾಂಡ್ ಮತ್ತು ಇಂಥ ಉದ್ವಿಗ್ನ ಸ್ಥಿತಿಯಲ್ಲಿ ಭಾರ ತೀಯ ಯೋಧರು ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ವಾದ ಆದೇಶ ಕೊಡಲು ಒಪ್ಪದ ರಾಜಕೀಯ ನಾಯ ಕತ್ವದ ಮಧ್ಯೆ ಏಕಾಂಗಿಯಾಗಿ ನಾನು ಸಿಲುಕಿದ್ದೆ ಎಂದು ಜನರಲ್ ನರವಣೆ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ದಿ ಕ್ಯಾರವಾನ್ ಮ್ಯಾಗಝೀನ್ ವರದಿ ಮಾಡಿದೆ.
ಕಾರ್ಯಾಚರಣೆಯನ್ನು ನಿಯಂತ್ರಿಸುತ್ತಿದ್ದ ಸೇನೆಯ ಪ್ರಧಾನ ಕಚೇರಿಯ ಕೊಠಡಿಯಲ್ಲಿ ಎಲ್ಲ ರೀತಿಯ ಸಾಧ್ಯಾ ಸಾಧ್ಯತೆಗಳ ಪರಿಶೀಲನೆ ಮತ್ತು ತಿರಸ್ಕರಿಸುವುದು ನಿರಂತರವಾಗಿ ನಡೆದೇ ಇತ್ತು. ಇಡೀ ನಾರ್ದರ್ನ್ ಕಮಾಂಡ್ ಹೈ ಅಲರ್ಟ್ ಸ್ಥಿತಿಯಲ್ಲಿತ್ತು. ಸಂಘರ್ಷ ನಡೆಯುವ ಸಾಧ್ಯತೆಗಳಿರುವ ಪ್ರದೇಶಗಳನ್ನು ಗುರುತಿಸುವ ಕಾರ್ಯವೂ ಚುರುಕಿನಿಂದ ನಡೆದಿತ್ತು. ಎಲ್ಲಕ್ಕಿಂತ ಹೆಚ್ಚಿನ ಅಪಾಯ, ಭೀಷಣ ಸಂಘರ್ಷ ರೇಚಿನ್ ಲಾ ಪಾಸ್‌ನಲ್ಲಿ ನಡೆಯುವ ಸಾಧ್ಯತೆಗಳಿದ್ದವು.
ಈ ಹಂತದಲ್ಲಿ ಜನರಲ್ ನರವಣೆ ರಕ್ಷಣಾ ಸಚಿವರಿಗೆ ಮತ್ತೊಂದು ಕರೆ ಮಾಡಿದರು. ‘ಸ್ವಲ್ಪ ಸಮಯ ಕೊಡಿ, ನಿಮಗೆ ವಾಪಸು ಕರೆ ಮಾಡುವೆ’ ಎಂಬ ಉತ್ತರ ಬಂತು. ಸಮಯ ಕಳೆಯುತ್ತಲೇ ಇತ್ತು, ಪ್ರತಿ ನಿಮಿಷವೂ ಚೀನಾದ ಟ್ಯಾಂಕ್‌ಗಳು ಸಮೀಪಿಸುತ್ತಿದ್ದವು. ರಾತ್ರಿ ೧೦.೩೦ಕ್ಕೆ ರಾಜನಾಥ್ ಸಿಂಗ್ ಅವರಿಂದ ಕರೆ ಬಂತು. “ನಾನು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ, ಅವರಿಂದ ಒಂದೇ ವಾಕ್ಯದ ಆದೇಶ ಬಂದಿದೆ, ‘ಆಪ್ ಜೋ ಉಚಿತ್ ಸಮ್‌ಜೋ, ವೋ ಕರೋ’ (ನಿಮಗೆ ಏನು ಸೂಕ್ತವೆನಿಸುತ್ತದೋ ಅದನ್ನು ಮಾಡಿ) ಎಂಬುದು ಆ ಆದೇಶವಾಗಿದೆ” ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಅದರರ್ಥ ಆಗ ನಾವು ಕೈಗೊಳ್ಳಲಿದ್ದ ತೀರ್ಮಾನ ಸಂಪೂರ್ಣವಾಗಿ ಮಿಲಿಟರಿ ತೀರ್ಮಾನವೇ ಆಗಬೇಕಿತ್ತು. ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸಿ ಎಲ್ಲ ಮಾಹಿತಿಯನ್ನೂ ನೀಡಲಾಗಿತ್ತು. ಅದರೆ, ಅವರು ಕರೆ ಮಾಡಲು ಒಪ್ಪಿರಲಿಲ್ಲ ಎಂದು ಜನರಲ್ ನರವಣೆ ಪುಸ್ತಕದಲ್ಲಿ ಬರೆದಿದ್ದಾರೆ.
(ಮುಂದುವರಿಯುವುದು)
ಕೃಪೆ: ದಿ ಕ್ಯಾರವಾನ್
” ಹತ್ತೇ ಹತ್ತು ನಿಮಿಷಗಳ ನಂತರ ನಾರ್ದರ್ನ್ ಕಮಾಂಡ್‌ನ ದೂರವಾಣಿ ಮತ್ತೆ ರಿಂಗಣಿಸತೊಡಗಿತು. ‘ಚೀನಾ ಮಿಲಿಟರಿಯ ಟ್ಯಾಂಕ್ಗಳು ಇನ್ನೂ ಮುನ್ನುಗ್ಗುತ್ತಲೇ ಇವೆ. ಈಗ ಅವು ರೇಚಿನ್ ಲಾ ಪಾಸ್‌ನಿಂದ ಕೆಳಕ್ಕೆ ಕೇವಲ ಐದು ಮೀಟರ್ ದೂರದಲ್ಲಿವೆ, ಈ ಹಂತದಲ್ಲಿ ಚೀನಿಯರನ್ನು ತಡೆಯುವ ಏಕೈಕ ಮಾರ್ಗವೆಂದರೆ ಈಗಾಗಲೇ ಸಿದ್ಧವಿರುವ ನಮ್ಮ ಮಧ್ಯಮ ಗಾತ್ರದ ಫಿರಂಗಿಗಳನ್ನು ತಕ್ಷಣಕ್ಕೆ ನಿಯೋಜಿಸುವುದು’ ಎಂದು ಜನರಲ್ ಜೋಶಿ ಹೇಳಿದರು ಎಂಬುದನ್ನು ಜನರಲ್ ನರವಣೆ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.”





