Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿಗೆ ಹೆಚ್ಚಿದ ಒತ್ತಡ

ಕೆ.ಬಿ.ರಮೇಶನಾಯಕ

ರೈತರು ಬೆಳೆದ ಹಣ್ಣು-ತರಕಾರಿ ಮಾರಾಟಕ್ಕೆ ತೊಂದರೆ,ಆದಾಯಕ್ಕೆ ಹೊಡೆತ

ಸಫಾರಿಯನ್ನು ನಂಬಿರುವ ಹಲವು ಕುಟುಂಬಗಳು ಅತಂತ್ರ

ಮೈಸೂರು: ಮಾನವ-ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಸಫಾರಿಯೇ ಪ್ರಮುಖ ಕಾರಣ ಎಂದು ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸ್ಥಗಿತಗೊಳಿಸಿರುವ ಸಫಾರಿಯನ್ನು ಪುನರಾರಂಭಿಸಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.

ಸಫಾರಿ ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು, ಕಾಡಿನಿಂದ ಹೊರ ಬಂದಿರುವ ಹುಲಿಗಳ ಸುರಕ್ಷಿತ ಸೆರೆ ಕಾರ್ಯಾಚರಣೆ ಕಡೆ ಗಮನ ಕೇಂದ್ರೀಕರಿಸಿದ್ದಾರೆ. ಈ ನಡುವೆ ಸಫಾರಿ ಬಂದ್ ಮಾಡಿರುವುದರಿಂದ ಆದಾಯದ ಮೇಲೆ ಹೊಡೆತ ಬಿದ್ದಿದ್ದು, ಪ್ರವಾಸೋದ್ಯಮ ಹಾಗೂ ಸ್ಥಳೀಯ ರೈತರು ಬೆಳೆದ ಹಣ್ಣು-ತರಕಾರಿ ಮಾರುಕಟ್ಟೆಗೆ ಪುನಶ್ಚೇತನ ನೀಡಬೇಕೆಂಬ ವ್ಯಾಪಕ ಒತ್ತಾಯ ಕೇಳಿ ಬರಲಾರಂಭಿಸಿದೆ.

ಸರಗೂರು ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಕೆಲ ಗ್ರಾಮಗಳಲ್ಲಿ ಸಂಭವಿಸಿದ ನಾಲ್ಕು ಪ್ರತ್ಯೇಕ ಹುಲಿ ದಾಳಿ ಪ್ರಕರಣಗಳಲ್ಲಿ ಮೂವರು ಮೃತಪಟ್ಟು, ಓರ್ವ ರೈತ ಗಂಭೀರವಾಗಿ ಗಾಯಗೊಂಡಿದ್ದರು. ಹುಲಿ ದಾಳಿಗೆ ವೈಜ್ಞಾನಿಕ ಕಾರಣ ಪತ್ತೆ ಮಾಡುವ ಮುನ್ನವೇ ಕೆಲವರು ಸಫಾರಿ ವಾಹನಗಳಿಂದಾಗಿ ಹುಲಿಗಳು ಕಾಡಿನಿಂದ ಗ್ರಾಮಗಳೆಡೆಗೆ ಬರುತ್ತಿವೆ ಎಂದು ಆರೋಪ ಮಾಡಿದ್ದರು.

ಬಂಡೀಪುರ ಹಾಗೂ ನಾಗಹೊಳೆ ಅಭಯಾರಣ್ಯಗಳಲ್ಲಿ ನ.೮ರಿಂದ ಜಾರಿಗೆ ಬರುವಂತೆ ಸಫಾರಿಯನ್ನು ಸ್ಥಗಿತಗೊಳಿಸಲು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದೆ. ಅಲ್ಲದೇ, ಗುಂಡ್ಲುಪೇಟೆ, ಎಚ್.ಡಿ.ಕೋಟೆ, ಹುಣಸೂರು ಹಾಗೂ ಸರಗೂರು ತಾಲ್ಲೂಕುಗಳ ರೈತರು ಬೆಳೆದ ಹಣ್ಣು,ತರಕಾರಿ ಮಾರಾಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಸಫಾರಿ ಪುನರಾರಂಭ ಮಾಡಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

ಸಾವಿರಾರು ಕುಟುಂಬಗಳು ಅತಂತ್ರ: ಸಫಾರಿ ಬಂದ್ ಆಗಿರುವುದರಿಂದ ಅರಣ್ಯಇಲಾಖೆ ವಸತಿ ಗೃಹ ಹಾಗೂ ಸಮೀಪದ ರೆಸಾರ್ಟ್‌ಗಳು ಅದರಲ್ಲೂ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಸ್ವಾಮ್ಯದ ಜೆಎಲ್‌ಆರ್ ವಸತಿ ಗೃಹಗಳು ಭಣಗುಟ್ಟುತ್ತಿವೆ. ಈ ವಸತಿ ಗೃಹಗಳಲ್ಲಿ ಸುಮಾರು ಎರಡು ಸಾವಿರ ಕುಟುಂಬಗಳ ಸದಸ್ಯರು ಕೆಲಸ ಮಾಡುತ್ತಿದ್ದು, ಸಫಾರಿ ಸ್ಥಗಿತಗೊಂಡಿರುವ ಕಾರಣ ದಿನದ ಸಂಪಾದನೆಯೂ ಇಲ್ಲದೆ ಅತಂತ್ರವಾಗಿದ್ದಾರೆ. ಈ ಕುಟುಂಬಗಳೂ ಸಫಾರಿಗೆ ಬರುವ ಪ್ರವಾಸಿಗರನ್ನೇ ಅವಲಂಬಿಸಿರುವುದರಿಂದ ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಅರಣ್ಯದಲ್ಲಿ ಸಫಾರಿ ಮಾಡುವುದು ಮೋಜು-ಮಸ್ತಿಗೆ ಎಂಬ ಆರೋಪವಿದೆ. ಅರಣ್ಯದಲ್ಲಿ ಸಫಾರಿ ಮಾಡುವುದರ ಜತೆಗೆ ವನ್ಯಜೀವಿ ಸಂರಕ್ಷಣೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸುವ ವ್ಯವಸ್ಥೆಯೂ ಇದೆ. ಇದರಿಂದ ಅರಣ್ಯದಲ್ಲಿ ಜೀವ ವೈವಿಧ್ಯತೆ, ಅರಣ್ಯ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.

೧೦೦ ಕಿ.ಮೀ. ದೂರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಿಂದ ಹುಲಿ ದಾಳಿ ನಡೆಸಿದ ಸರಗೂರು ತಾಲ್ಲೂಕಿನ ನುಗು, ಹೆಡಿಯಾಲ ವಲಯದ ಸ್ಥಳಕ್ಕೆ ಸುಮಾರು ೧೦೦ ರಿಂದ ೧೨೦ ಕಿಮೀ ದೂರವಿದೆ. ಅಲ್ಲಿ ಸಫಾರಿ ವಾಹನದಿಂದ ಹುಲಿಗಳು ಇಷ್ಟು ದೂರ ಕ್ರಮಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹುಲಿ ದಾಳಿಗೂ ಸಫಾರಿ ವಾಹನಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ವನ್ಯಜೀವಿ ಪ್ರೇಮಿಗಳ ವಾದವಾಗಿದೆ.

ಸೀಮಿತ ಸ್ಥಳದಲ್ಲಿ ಮಾತ್ರ ಸಫಾರಿ: ಬಂಡೀಪುರ ಅರಣ್ಯ ಪ್ರದೇಶ ೧,೨೦೦ ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ೧೩ ವಲಯಗಳಲ್ಲಿ ವಿಸ್ತಾರಗೊಂಡಿದೆ. ಆದರೆ, ಅಭಯಾರಣ್ಯದ ಒಟ್ಟು ಪ್ರದೇಶದಲ್ಲಿ ಕೇವಲ ೮೦ ಚದರ ಕಿಮೀ ವ್ಯಾಪ್ತಿಯನ್ನು ಮಾತ್ರ ಸಫಾರಿ ವಲಯವಾಗಿ ಗುರುತಿಸಲಾಗಿದೆ. ಈ ವಲಯ ಊಟಿ ರಸ್ತೆಯ ಎರಡೂ ಬದಿಗಳಲ್ಲೂ ಚಾಚಿಕೊಂಡಿದೆ. ಈ ರಸ್ತೆಯಲ್ಲಿ ಬೆಳಿಗ್ಗೆ ೬ ರಿಂದ ರಾತ್ರಿ ೯ ಗಂಟೆಯವರೆಗೆ ನಿರಂತರವಾಗಿ ಸಾವಿರಾರು ವಾಹನಗಳು ಸಂಚರಿಸಿದರೂ ಅಲ್ಲಿನ ವನ್ಯಜೀವಿಗಳಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಸಫಾರಿ ವಾಹನಗಳಿಂದ ತೊಂದರೆ ಆಗಿದೆ ಎಂಬುದನ್ನು ನಂಬಲು ಅಸಾಧ್ಯ ಎಂದು ಸಫಾರಿ ಪ್ರಿಯರೊಬ್ಬರು ಹೇಳುತ್ತಾರೆ.

” ಸಫಾರಿ ಪುನರಾರಂಭಿಸಿ ಮೈಸೂರಿಗೆ ಬರುವ ಪ್ರವಾಸಿಗರು ಬಂಡೀಪುರ ಹಾಗೂ ನಾಗರಹೊಳೆ ಅರಣ್ಯಕ್ಕೆ ಭೇಟಿ ನೀಡಲು ಬಯಸುತ್ತಾರೆ. ಸಫಾರಿಗೆಂದೇ ಕೆಲಸ ಮಾಡುವ ಸಾವಿರಾರು ಜನರ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ಸಫಾರಿ ಇಲ್ಲದಿದ್ದರೆ ಈ ಕುಟುಂಬಗಳಿಗೆ ಬೇರೆ ದಿಕ್ಕು ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಫಾರಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು.”

ಬಿ.ಎಸ್.ಪ್ರಶಾಂತ್, ಅಧ್ಯಕ್ಷ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್

ರೈತರ ಆದಾಯ ಖೋತಾ: 

ಸಫಾರಿಗೆ ಬರುವ ಪ್ರವಾಸಿಗರು ರೈತರು ಬೆಳೆದ ಹಣ್ಣು- ತರಕಾರಿಯನ್ನು ಖರೀದಿಸುತ್ತಿದ್ದರು.ಸೂರ್ಯಕಾಂತಿ, ಚೆಂಡು ಮಲ್ಲಿಗೆ ಹೂವು ಹಾಗೂ ಸೇವಂತಿಗೆ ತೋಟಕ್ಕೆ ಭೇಟಿ ನೀಡಿ ಫೋಟೋ ತೆಗೆದುಕೊಂಡು ಹಣ ನೀಡುತ್ತಿದ್ದರು. ಸಫಾರಿಗೆ ಬರುವ ಪ್ರವಾಸಿಗರಿಗಾಗಿಯೇ ರೈತರು ರಸ್ತೆ ಬದಿ ಹಣ್ಣು, ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಈಗ ಅಂತಹ ರೈತರಿಗೆ ತೊಂದರೆಯಾಗಿದೆ.

Tags:
error: Content is protected !!