ಅತಿಯಾದ ಒತ್ತಡ, ಮೊಬೈಲ್ ಬಳಕೆಯಿಂದ ಖಿನ್ನತೆಗೆ ಸಿಲುಕಿದೆ ಯುವ ಸಮೂಹ
ಚಿರಂಜೀವಿ ಸಿ. ಹುಲ್ಲಹಳ್ಳಿ
ಮೈಸೂರು: ಬದಲಾದ ಜೀವನ ಕ್ರಮ, ಮೊಬೈಲ್ ಗೀಳು, ಕೆಲಸದ ಒತ್ತಡ, ಉನ್ಮಾದದಂತಹ ಕಾರಣ ಗಳಿಂದ ಜಿಲ್ಲೆಯಲ್ಲಿ ಮಾನಸಿಕ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಿರುವ ಆತಂಕಕಾರಿ ಸಂಗತಿ ಬೆಳಕಿ ಬಂದಿದೆ.
ಜಿಲ್ಲೆಯ ಯುವ ಸಮೂಹ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಸಿಲುಕಿ ಖಿನ್ನತೆಯಿಂದ ಬಳಲುತ್ತಿರುವುದು ಪಾಲಕರ ಜೊತೆಗೆ ಆರೋಗ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸದ್ದಿಲ್ಲದೆ ನಡೆಸಿದೆ. ೨೦ರಿಂದ ೩೫ ವರ್ಷದವರೆಗಿನ ಯುವ ಸಮೂಹಕ್ಕೆ ಕೆಲಸದೊತ್ತಡ, ಓದಿನ ಒತ್ತಡ, ಸ್ಪರ್ಧಾತ್ಮಕತೆ, ಹೆಚ್ಚು ಮೊಬೈಲ್ ಬಳಕೆಯಿಂದ ಖಿನ್ನತೆಗೆ ಒಳಗಾದರೆ ೩೫ ರಿಂದ ೭೦ರವರೆಗೆ ವಯೋಮಾನದವರು ಕೌಟುಂಬಿಕ ಸಮಸ್ಯೆಗಳು, ಮದ್ಯಪಾನ ವ್ಯಸನಿಗಳಾದವರು, ಮಕ್ಕಳ ಪೋಷಣೆ ಸಿಗದ ವೃದ್ಧರು ಖಿನ್ನತೆಗೆ ಒಳಗಾಗಿದ್ದಾರೆ. ಇಂತಹವರನ್ನು ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಸ್ಪತ್ರೆ ವತಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆಶಾ ಕಾರ್ಯಕರ್ತೆರು, ಸಿಎಚ್‌ಒಗಳು ಕ್ಷೇತ್ರ ವೀಕ್ಷಣೆ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಹಾತೊರೆಯುವವರನ್ನು ಗುರುತಿಸಿ ಪ್ರತಿ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುವ ಮನೋ ಚೈತನ್ಯ ಕ್ಲಿನಿಕ್ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಬೇಕಾದವರಿಗೆ ಪ್ರತಿ ಶುಕ್ರವಾರ ಲಭ್ಯವಾಗುವ ಮನೋರೋಗ ತಜ್ಞರಿಗಾಗಿ ತಾಲ್ಲೂಕು ಅಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ನಿರ್ದೇಶಿಸಲಾಗುತ್ತಿದೆ.
ಮಾನಸಿಕ ಕಾಯಿಲೆ ರೋಗಿಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್‌ವರೆಗೆ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ೨,೨೫೬ ಮಂದಿ ಚಿಕಿತ್ಸೆಗೆ ಒಳಗಾದರೆ, ಸಾಮಾನ್ಯ ಮಾನಸಿಕ ಅಸ್ವಸ್ಥತೆಯಿಂದ ೫,೮೮೧ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದರಲ್ಲಿ ಎಲ್ಲ ವಯೋಮಾನದವರೂ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹವಿರುವುದು ಕಳವಳ ಕಾರಿಯಾಗಿದೆ. ಈಗಾಗಲೇ ಯೋಜನೆಯ ಕುರಿತು ಹಲವಾರು ತಾಲ್ಲೂಕು, ಹೋಬಳಿಗಳಲ್ಲಿ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸಲಾಗಿದೆ. ಚಿಕಿತ್ಸೆಗೆ ಒಳಗಾದವರನ್ನು ಇ-ಮಾನಸ್ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಲಾಗಿದೆ. ಈ ಅಂಕಿ ಅಂಶಗಳ ಪ್ರಕಾರ ತಿಂಗಳಿಂದ ತಿಂಗಳಿಗೆ ಮಾನಸಿಕ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಒಳಗಾಗು ವವರ ಸಂಖ್ಯೆ ಹೆಚ್ಚಾಗಿದೆ.
ಏನೇನು ಮಾಡಬೇಕು?
ಪ್ರತಿನಿತ್ಯ ವ್ಯಾಯಾಮದಿಂದ ನಿಮ್ಮ ದೈಹಿಕ ಆರೋಗ್ಯವನ್ನಷ್ಟೆ ಅಲ್ಲ, ಮಾನಸಿಕ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು. ಧ್ಯಾನವು ನಿಮ್ಮೊಳಗಿನ ಒತ್ತಡವನ್ನು ಹೋಗಲಾಡಿಸುತ್ತದೆ. ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಸಾಧ್ಯವಾದಷ್ಟು ಸಾಮಾಜಿಕವಾಗಿ ನಿಮ್ಮನ್ನು ತೆರೆದುಕೊಳ್ಳಿ. ಜನರ ಜತೆ ಹೆಚ್ಚು ಬೆರೆಯಿರಿ. ಮನೆಯ ವಾತಾವರಣದಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವ ಬದಲು ಹೊರಾಂಗಣದಲ್ಲಿ ಪ್ರಕೃತಿಯೊಂದಿಗೆ ನಿಮ್ಮನ್ನು ತೆರೆದುಕೊಳ್ಳಬೇಕು. ನಿಮ್ಮ ಕೆಲಸದ ಒತ್ತಡದ ನಡುವೆಯೂ ನಿಮಗೆ ಖುಷಿ ಕೊಡುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು.
ಇಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ವತಿಯಿಂದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಸಪ್ತಾಹವನ್ನು ಆಯೋಜಿಸಿದ್ದು, ಅ. ೨೯ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಪಂಚಾಯಿತಿ ಆವರಣದ ಅಬ್ದುಲ್ ನಜಿರ್‌ಸಾಬ್ ಸಭಾಂಗಣದಲ್ಲಿ ಚಾಲನೆ ದೊರೆಯಲಿದೆ.
ಮಾನಸಿಕ ಆರೋಗ್ಯದ ಚಿಕಿತ್ಸೆಯು ದೀರ್ಘಾವಧಿಯದ್ದಾಗಿರುವ ಕಾರಣ ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಸಲಹೆಗಳನ್ನು ನೀಡುವರು. ಇದರಲ್ಲಿ ಯಾವುದೇ ಅಂಜಿಕೆ, ಕೀಳರಿಮೆ ಬೇಡ. ಸಾರ್ವಜನಿಕರು ಸೌಲಭ್ಯ ಬಳಸಿಕೊಳ್ಳಬೇಕು.
– ಡಾ. ಬಿ. ಬೃಂದಾ, ಕಾರ್ಯಾಕ್ರಮಾನುಷ್ಠಾನಾಧಿಕಾರಿ, ಜಿಲ್ಲಾ ಮಾನಸಿಕ ಆರೋಗ್ಯ.



