Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ಹೆಚ್ಚಿದ ಚಳಿ; ಬೆಳೆಗಳಿಗೆ ರೋಗಬಾಧೆ!

ಚಾಮರಾಜನಗರ: ಚಳಿಯ ವಾತಾವರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಾಳೆ, ಸಣ್ಣ ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಮೊದಲಾದ ಬೆಳೆಗಳಿಗೆ ವಿವಿಧ ರೋಗಗಳು ಬಾಧಿಸಲಾರಂಭಿ ಸಿದ್ದು, ರೈತರು ತಾಲ್ಲೂಕಿನ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಮೊರೆ ಹೋಗುತ್ತಿದ್ದಾರೆ.

ರೋಗ ಪೀಡಿತ ಗಿಡಗಳನ್ನು ಕೊಂಡೊಯ್ದು ಕೃಷಿ ವಿಜ್ಞಾನಿಗಳು ಸೂಚಿಸುವ ಔಷಽಯನ್ನು ಸಿಂಪಡಣೆ ಮಾಡುತ್ತಿದ್ದಾರೆ. ರಾಸಾಯನಿಕ/ಸಾವಯವ ಈ ಎರಡರಲ್ಲಿ ಯಾವ ಔಷಽ ಬಳಸಲು ಆಸಕ್ತಿ ವಹಿಸುತ್ತಾರೆಯೋ ಅದನ್ನೇ ರೈತರಿಗೆ ಕೆವಿಕೆ ವಿಜ್ಞಾನಿಗಳು ಬರೆದು ಕೊಡುತ್ತಿದ್ದಾರೆ.

ನೇಂದ್ರ, ಏಲಕ್ಕಿ, ಪಚ್ಚೆ ಬಾಳೆಯನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದ್ದು ಈ ಮೂರೂ ರೀತಿಯ ಬಾಳೆ ಬೆಳೆಗಳನ್ನು ಎಲೆಚುಕ್ಕಿರೋಗ ಕಾಡುತ್ತಿದೆ. ಮಳೆ, ಚಳಿ ಹಾಗೂ ಮೋಡ ಕವಿದ ಶೀತ ವಾತಾವರಣದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎಲೆಚುಕ್ಕಿ ರೋಗಬಾಧಿತ ಎಲೆಯನ್ನು ಕತ್ತರಿಸಿ ಸುಡಬೇಕಿದೆ.

ಗಾಳಿ ಮೂಲಕ ಬೆಳೆಯಿಂದ ಬೆಳೆಗೆ ಬಹಳ ವೇಗವಾಗಿ ಹರಡುವ ರೋಗ ಇದಾಗಿದ್ದು, ೧ ವಾರದಿಂದ ಜಿಲ್ಲೆಯಾದ್ಯಂತ ವ್ಯಾಪಿಸಿದೆ. ಕೂಡಲೇ ಔಷಧಿ ಸಿಂಪಡಣೆ ಮಾಡಿ ರೋಗನಿಯಂತ್ರಣ ಮಾಡದಿದ್ದರೆ ಬಾಳೆ ಇಳುವರಿ ಕುಂಠಿತಗೊಳ್ಳುವ ಜೊತೆಗೆ ಬೆಳೆಯೇ ಪೂರ್ಣ ಹಾಳಾಗುವ ಅಪಾಯ ಇದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಗುಂಡ್ಲುಪೇಟೆ ಭಾಗದ ಬೇಗೂರು, ಭೀಮನ ಬೀಡು, ಸೋಮಹಳ್ಳಿ, ಚಾಮರಾಜನಗರ ತಾಲ್ಲೂಕಿನ ಸಿದ್ದಯ್ಯನಪುರ, ಅಮಚವಾಡಿ, ಕೊಳ್ಳೇಗಾಲದ ಮಧುವನಹಳ್ಳಿ, ಕಾಮಗೆರೆ, ಸಿಂಗಾನಲ್ಲೂರು, ಕೊತ್ತನೂರು ಮೊದಲಾದ ಕಡೆಯ ರೈತರು, ರೋಗ ಪೀಡಿತ ಎಲೆ ಹಿಡಿದು ಔಷಧೋಪಚಾರಕ್ಕೆ ಕೃಷಿ ವಿಜ್ಞಾನಿಗಳ ಬಳಿಗೆ ಬರ ತೊಡಗಿದ್ದಾರೆ.

ಏತನ್ಮಧ್ಯೆ, ಸಣ್ಣ ಈರುಳ್ಳಿ ಬೆಳೆ ಕೂಡ ಎಲೆ ತುದಿ ಸುಟ್ಟಂತೆ ಕಾಣುವ ರೋಗದಿಂದಾಗಿ ನಿರೀಕ್ಷಿತ ಬೆಳವಣಿಗೆ ಕಾಣದೇ ಒದ್ದಾಡುತ್ತಿದೆ. ಗುಂಡ್ಲುಪೇಟೆಯ ಕುಂದಕೆರೆ, ಶಿವಪುರ, ಚಾ.ನಗರದ ಸಿದ್ದಯ್ಯನಪುರ ಇನ್ನಿತರ ಕಡೆ ೩ ತಿಂಗಳ ಅವಧಿಯ ಈ ಬೆಳೆಯನ್ನು ಪ್ರತ್ಯೇಕವಾಗಿ ಮತ್ತು ಅರಿಶಿನದ ನಡುವೆ ಬೆಳೆಯಲಾಗಿದ್ದು, ಮೇಲ್ನೋಟಕ್ಕೆ ಇದು ನುಸಿ ಬಾಧೆಯಂತೆ ಕಾಣುತ್ತದೆ ಎಂದು ಈರುಳ್ಳಿ ಬೆಳೆಗಾರರೊಬ್ಬರು ಮಾಹಿತಿ ನೀಡಿದರು. ರಾಯಲ್ ಬುಲೆಟ್ ಮೆಣಸಿನಕಾಯಿ ಬೆಳೆ ಕೂಡ ಎಳೆಮುರುಟುವ ನಂಜು ರೋಗದಿಂದ ಬಳಲುತ್ತಿದೆ. ನುಸಿ, ನಂಜು, ಬೂದುರೋಗ, ಇನ್ನಿತರ ಬಾಧೆಗಳು

ಟೊಮೆಟೋ ಬೆಳೆಯ ಬೆಳವಣಿಗೆಗೆ ಅಡ್ಡಿಯಾಗಿವೆ. ಈ ಬೆಳೆಯನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯಲಾಗಿದೆ. ಮೇಲಿನ ಬೆಳೆ ಮಾತ್ರವಲ್ಲದೇ ಅರಿಶಿನ ಇನ್ನಿತರ ಬೆಳೆಗಳು ಸಹ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿವೆ. ಚಳಿ ವಾತಾವರಣದಲ್ಲಿ ಬೆಳೆಗಳಿಗೆ ಈ ರೀತಿ ಸಮಸ್ಯೆಗಳು ಮೇಲಿಂದ ಮೇಲೆ ಕಾಡುತ್ತವೆ. ಹಾಗಾಗಿ ಯಾವುದೇ ಬೆಳೆಗಳ ಬಿತ್ತನೆ ಕಾರ್ಯವನ್ನು ಜನವರಿ ೧೫ರ ಸಂಕ್ರಾಂತಿ ನಂತರ ನಡೆಸುವುದು ಸೂಕ್ತ ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

” ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರಕ್ಕೆ ದಿನಾಲೂ ಕನಿಷ್ಠ ೪೦-೫೦ ರೈತರು ರೋಗಪೀಡಿತ ಬೆಳೆಗಳನ್ನು ಹಿಡಿದು ಇವುಗಳ ರೋಗ ನಿಯಂತ್ರಣಕ್ಕೆ ಔಷಧಿ ಬರೆದು ಕೊಡುವಂತೆ ಬರುತ್ತಿದ್ದಾರೆ. ಹಾಗೆಯೇ ಏನಿಲ್ಲಾ ಅಂದರೂ ನಿತ್ಯ ೩೦-೪೦ ರೈತರು ಕರೆ ಮಾಡಿ ರೋಗದ ಲಕ್ಷಣಗಳನ್ನು ತಿಳಿಸಿ ರೋಗ ನಿಯಂತ್ರಣಕ್ಕೆ ತಮ್ಮಿಂದ ಸಲಹೆ ಪಡೆಯುತ್ತಿದ್ದಾರೆ.”

ಡಾ.ಬಿ.ಪಂಪನಗೌಡ, ಹಿರಿಯ ತಾಂತ್ರಿಕ ಅಧಿಕಾರಿ ಹಾಗೂ ಸಸ್ಯ ರೋಗ ತಜ್ಞರು, ಹರದನಹಳ್ಳಿ ಕೆವಿಕೆ

ಮುಂಚೆಯೇ ಸಲಹೆ ಪಡೆಯಿರಿ…:

ಬಾಳೆ ಬೆಳೆಯಲ್ಲಿ ತರಗುಮಾರಿ ರೋಗ ವರ್ಷ ಪೂರ್ತಿ ಅಲ್ಲಲ್ಲಿ ಇರುತ್ತದೆಯಾದರೂ ಚಳಿ ವಾತಾವರಣ ಹಿನ್ನೆಲೆಯಲ್ಲಿ ಈಗ ಆ ರೋಗ ಜಾಸ್ತಿಯಾಗಿದೆ. ಹೂವಿನಹಂತ, ಗೊನೆ ಹಂತದಲ್ಲಿ ಬಂದರೆ ಸಹಜವಾಗಿಯೇ ಇಳುವರಿ ನಷ್ಟವಾಗುತ್ತದೆ. ಬೆಳೆಗಳಿಗೆ ಯಾವುದೇ ರೋಗ ಬಂದಾಗ ಹತ್ತಿರದ ಔಷಧಿ ಅಂಗಡಿಗಳಿಗೆ ಹೋಗುವ ರೈತರು ಅದು ನಿಯಂತ್ರಣಕ್ಕೆ ಬಾರದಿದ್ದಾಗ ಅಥವಾ ರೋಗ ಉಲ್ಬಣ ಆದಾಗ ಕೃಷಿ ವಿಜ್ಞಾನ ಕೇಂದ್ರಕ್ಕೆ ಬರುವ ಪರಿಪಾಠವಿದೆ.ಅದರ ಬದಲು ರೋಗ ಲಕ್ಷಣ ಕಾಣಿಸಿಕೊಂಡಾಗಲೇ ಸಲಹೆ ಪಡೆಯುವುದು ಸೂಕ್ತ ಎಂಬುದು ಕೆವಿಕೆ ಕೃಷಿ ವಿಜ್ಞಾನಿಗಳ ಸಲಹೆ. ಹೆಚ್ಚಿನ ಮಾಹಿತಿಗಾಗಿ ಸಸ್ಯರೋಗ ತಜ್ಞರಾದ ಡಾ.ಬಿ.ಪಂಪನಗೌಡ, ಮೊ.ಸಂ. ೭೪೦೬೧೫೨೮೧೫ ಸಂಪರ್ಕಿಸಬಹುದಾಗಿದೆ.

Tags:
error: Content is protected !!