ಗಿರೀಶ್ ಹುಣಸೂರು
ಸ್ವೆಟರ್, ಟೋಪಿ, ಉಣ್ಣೆ ದಿರಿಸು ಇತ್ಯಾದಿಗಳ ಮೊರೆ ಹೋದ ಜನರು
ಮೈಸೂರು: ಚಳಿಗಾಲ ಮುಗಿಯುತ್ತಾ ಬಂದರೂ ಶೀತಗಾಳಿಯ ಪರಿಣಾಮ ಜನತೆ ಇನ್ನೂ ಚಳಿಯ ಬಾಧೆ ಯಿಂದ ಹೊರಬರಲಾಗುತ್ತಿಲ್ಲ. ಅದರಲ್ಲಿಯೂ ಭಾನು ವಾರ ನಗರಾದ್ಯಂತ ಮಧ್ಯಾಹ್ನವಾದರೂ ತಣ್ಣಗಿನ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಇನ್ನೂ ಹೆಚ್ಚಳವಾಗಿ, ಸಾರ್ವಜನಿಕ ಚಟುವಟಿಕೆಗಳಿಗೂ ಮಂಕು ಕವಿದಂತೆ ಭಾಸವಾಗಿತ್ತು.
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಶ್ರೀಲಂಕಾ ಬಳಿ ವಾಯುಭಾರ ಕುಸಿತದಂತಹ ತಿರುವಿಕೆಯ ಪರಿಣಾಮದಿಂದ ಬಂಗಾಳ ಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಭಾವದಿಂದ ರಾಜ್ಯದಲ್ಲಿ ಚಳಿ ಕಡಿಮೆಯಾಗಿ ಮೋಡ ಹಾಗೂ ಅಲ್ಲಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದೆ.
ಇದರ ಪ್ರಭಾವದಿಂದ ಉತ್ತರ ಭಾರತದ ಕಡೆಯಿಂದ ದಕ್ಷಿಣದ ಕಡೆಗೆ ಈಗ ಬೀಸುತ್ತಿರುವ ಶೀತಗಾಳಿಯು ಕಡಿಮೆಯಾಗಿ ಬಂಗಾಳಕೊಲ್ಲಿಯ ಕಡೆಯಿಂದ ಗಾಳಿ ಬೀಸಲು ಆರಂಭವಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿ ಅಲ್ಲಲ್ಲಿ ಮೋಡದ ವಾತಾವರಣ ಉಂಟಾಗುವ ಮುನ್ಸೂಚನೆ ಇದೆ.
ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದ್ದು, ಇದರೊಂದಿಗೆ ಈ ಸಾಲಿನ ಚಳಿಗಾಲವು ಅಂತ್ಯವಾಗುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ತಿಳಿಸಿದ್ದಾರೆ.
ಚಳಿಯ ತೀವ್ರತೆ ಕಡಿಮೆಯಾಗುತ್ತಾ ಬಂದಿದ್ದರೂ ಮೋಡದ ವಾತಾವರಣ ಮತ್ತು ಶೀತಗಾಳಿಯ ಪರಿಣಾಮ ಜನತೆ ಬೆಚ್ಚನೆಯ ಉಡುಪು, ಟೀ-ಕಾಫಿ, ಮೈಕಾಯಿಸಿಕೊಳ್ಳಲು ಎಳೆಬಿಸಿಲು, ಮುಂಜಾನೆ ಮತ್ತು ಸಂಜೆ ವೇಳೆ ಬೆಂಕಿಯ ಮೊರೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಅಯ್ಯೋ ಇಷ್ಟು ಬೇಗ ಯಾಕಾದ್ರೂ ಬೆಳಗಾಯ್ತೊ? ವಾಕ್ ಹೋಗೋಣವೆಂದರೆ ವಿಪರೀತ ಚಳಿ, ಮಂಜು ಬೇರೆ ಸುರೀತಿದೆ. ಈಗಲೇ ಮನೆಯಿಂದ ಹೊರಗೆ ಹೋಗುವುದಕ್ಕಂತೂ ಆಗುವುದಿಲ್ಲ. ಇನ್ನೂ ಸ್ವಲ್ಪ ಹೊತ್ತು ಬಿಟ್ಟು ನೋಡೋಣ ಎಂದು ತಲೆ ತುಂಬಾ ಹೊದಿಕೆ ಎಳೆದರೆ ಬೆಚ್ಚನೆಯ ಅನುಭವ! ಅಬ್ಬಾ… ಹೀಗೇ ದಿನ ಕಳೆಯಬಾರದೆ ಎಂದು ಮನಸ್ಸು ಅಂದುಕೊಂಡರೂ, ಕಾರ್ಯಭಾರದ ಒತ್ತಡದ ಅರಿವಾಗಿ ಕಿಟಕಿಯ ಆಚೆಗೆ ಕಣ್ಣು ಹಾಯಿಸಿದರೆ ಆಗಲೇ ಸೂರ್ಯ ನೆತ್ತಿಯ ಮೇಲೆ ಬಂದಂತೆ ಭಾಸವಾಗಿದ್ದರಿಂದ ಹೊದಿಕೆ ಬಿಸಾಕಿ ದಡಬಡ ಎದ್ದು ಮನೆಯಿಂದ ಹೊರಬಂದರೆ ಎಳೆ ಬಿಸಿಲಿನಿಂದ ಮೈ ಬೆಚ್ಚಗಾಗಿಸಿಕೊಳ್ಳಬೇಕೆಂಬ ಮನಸ್ಸಾಗುತ್ತದೆ.
ರಸ್ತೆಯ ಬದಿಗಳಲ್ಲಿ ಒಂದಷ್ಟು ಜನ ಗುಂಪು ಕಟ್ಟಿಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಾ, ಹೋಟೆಲ್‌ಗಳ ಮುಂದೆ ಟೀ-ಕಾಫಿ ಹೀರುತ್ತಾ ನಿಂತಿರುವ ದೃಶ್ಯ ಕಾಣಸಿಗುತ್ತದೆ. ಸಂಜೆಯಾಗುತ್ತಲೇ ಕುಳಿರ್ಗಾಳಿ ಮೈಕೊರೆಯುವುದರಿಂದ ಜನ ಸ್ವೆಟರ್, ಉಣ್ಣೆಯ ಟೋಪಿ ಮೊದಲಾದ ಬೆಚ್ಚನೆಯ ಉಡುಪುಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣವು ಕಡಿಮೆಯಾಗಿದ್ದು, ಜ.೧೪ರಂದು ಕಾಸರಗೋಡು, ದಕ್ಷಿಣ ಕನ್ನಡ ಜಿಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಉಡುಪಿ ಜಿಲ್ಲೆಯಲ್ಲಿ ೨ ದಿನಗಳ ಕಾಲ ಸ್ವಲ್ಪ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ.ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳನ್ನೊಳಗೊಂಡ ಮಲೆನಾಡು ಭಾಗದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. ಹಾಸನದ ಒಂದೆರಡು ಕಡೆ ಸಣ್ಣ ಪ್ರಮಾಣದ ತುಂತುರು ಮಳೆಯ ಸಾಧ್ಯತೆಯೂ ಇದೆ. ನಂತರ ೨ ದಿವಸಗಳ ಕಾಲ ಸ್ವಲ್ಪ ಮೋಡದ ವಾತಾವರಣ ಇರಬಹುದು.
ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಚಳಿ ಕಡಿಮೆಯಾಗಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಉತ್ತರ ಒಳನಾಡು ಭಾಗ ಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣ ಮುಂದುವರಿ ಯುವ ಲಕ್ಷಣಗಳಿದ್ದು, ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ.
ಜ.೧೩ರಂದು ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ದಕ್ಷಿಣ, ರಾಮನಗರ, ಚಾಮರಾಜನಗರ, ಮೈಸೂರು ಜಿಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಆಮೇಲೆ ಮುಂದಿನ ೨ ಅಥವಾ ೩ ದಿನಗಳ ಕಾಲ ಮೋಡದ ವಾತಾವರಣವಿರುವ ಸಾಧ್ಯತೆ ಇದೆ.
” ಶ್ರೀಲಂಕಾದ ಪೂರ್ವ ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡಿ ರುವ ನೈರುತ್ಯ ಬಂಗಾಳಕೊಲ್ಲಿ ಯಲ್ಲಿ ಚಂಡಮಾರುತದ ಪರಿಚಲನೆ ಮುಂದುವರಿದಿದ್ದು, ಸದ್ಯ ಸಮುದ್ರ ಮಟ್ಟದಿಂದ ಒಂದೂವರೆ ಕಿ.ಮೀ. ವರೆಗೆ ವಿಸ್ತರಿಸಿದೆ. ರಾಜ್ಯದ ದಾವಣಗೆರೆಯಲ್ಲಿ ಭಾನುವಾರ ಅತೀ ಕಡಿಮೆ ಉಷ್ಣಾಂಶ ೧೬ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ರಾಜ್ಯಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದ ಲಾವಣೆಯಾಗಿಲ್ಲ. ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವಿದ್ದು, ರಾಜ್ಯಾದ್ಯಂತ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.”
-ಡಾ.ಎನ್.ಪುನಿಯರಸನ್, ಮುಖ್ಯಸ್ಥರು, ಹವಾಮಾನ ಕೇಂದ್ರ, ಬೆಂಗಳೂರು.
” ರಾಜ್ಯಾದ್ಯಂತ ಚಳಿ ಪ್ರಮಾಣ ಕಡಿಮೆಯಾಗಿ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಇದರೊಂದಿಗೆ ಈ ಸಾಲಿನ ಚಳಿಗಾಲವು ಅಂತ್ಯವಾಗುವ ಸಾಧ್ಯತೆಯೂ ಇದೆ.”
-ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ




