ಮಂಜು ಕೋಟೆ
ಅರಣ್ಯದೊಳಗಿನ ಸಫಾರಿಗೆ ನಿರ್ಬಂಧ ಹೇರಿದ ಬಳಿಕ ಪ್ರವಾಸಿಗರನ್ನು ಸೆಳೆಯಲು ರೆಸಾರ್ಟ್‌ನವರ ಕಸರತ್ತು
ಎಚ್.ಡಿ.ಕೋಟೆ: ಅರಣ್ಯದಲ್ಲಿ ಈಗ ಸಫಾರಿ ಸ್ಥಗಿತಗೊಂಡಿರುವುದರಿಂದ ಪ್ರವಾಸಿಗರನ್ನು ಸೆಳೆಯಲು ವಿವಿಧ ರೆಸಾರ್ಟ್‌ನವರು ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೋಟ್ ಸ-ರಿಗಳನ್ನು ನಡೆಸುತ್ತಿದ್ದಾರೆ.
ತಾಲ್ಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಗಳ ಹಾವಳಿ ಮತ್ತು ದಾಳಿಯಿಂದ ಮೂವರು ರೈತರು ಸಾವನ್ನಪ್ಪಿ, ಒಬ್ಬರು ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ದಮ್ಮನ ಕಟ್ಟೆ ಸಫಾರಿಯನ್ನು ಸ್ಥಗಿತಗೊಳಿಸುವಂತೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಆದೇಶಿಸಿದ್ದರು.
ನಂತರ ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿ ಕಾಡಿನಿಂದ ಹೊರಗೆ ಬಂದಿದ್ದ ೨೨ ಹುಲಿಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅರಣ್ಯ ಇಲಾಖೆಯವರು ಸೆರೆಹಿಡಿದಿದ್ದಾರೆ.
ದಮ್ಮನಕಟ್ಟೆ ಮತ್ತು ಕಾರಾಪುರ ಜಂಗಲ್ ಲಾಡ್ಜ್ ಸಫಾರಿ ಎರಡು ತಿಂಗಳಾದರೂ ನಡೆಯದೇ ಇರುವ ಹಿನ್ನೆಲೆಯಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿರುವ ರೆಸಾರ್ಟ್‌ಗಳು, ಹೋಂಸ್ಟೇಗಳು ಮತ್ತು ಕೆಲ ಅರಣ್ಯ ಅಧಿಕಾರಿಗಳಿಗೆ ಆತಂಕ ಎದುರಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.
ಹೀಗಾಗಿ ರೆಸಾರ್ಟ್‌ಗಳಿಗೆ ಬರುತ್ತಿದ್ದ ಪ್ರವಾಸಿಗರು ಮತ್ತು ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಬಹುತೇಕ ರೆಸಾರ್ಟ್ ನವರು ಬೋಟ್ ಸಫಾರಿಯನ್ನು ನಡೆಸಿ ಕಾಡಂಚಿನಲ್ಲಿರುವ ವನ್ಯಪ್ರಾಣಿಗಳನ್ನು ತೋರಿಸುವ ಕೆಲಸವನ್ನು ದಿನಕ್ಕೆ ೪-೫ ಬಾರಿ ಪೈಪೋಟಿ ಮೇಲೆ ಮಾಡುತ್ತಿದ್ದಾರೆ.
೨-೩ ತಿಂಗಳುಗಳ ಹಿಂದೆ ಹಿನ್ನೀರಿನಲ್ಲಿ ಬೆರಳೆಣಿಕೆಯಷ್ಟು ಬೋಟ್‌ಗಳು ಮಾತ್ರ ಸಫಾರಿ ಮಾಡಿಸುತ್ತಿದ್ದವು. ಕೆಲ ವೊಂದು ರೆಸಾರ್ಟ್‌ನವರು ಬೋಟ್ ಸಫಾರಿ ನಡೆಸಲು ನೀರಾವರಿ ಇಲಾಖೆ ಮೂಲಕ ಅನುಮತಿ ಪಡೆದಿದ್ದರೆ ಮತ್ತೆ ಅನೇಕರು ಅನುಮತಿಯನ್ನೇ ಪಡೆಯದೆ ನಿಯಮಬಾಹಿರ ವಾಗಿ ಸಫಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಾಲ್ಲೂಕಿನಲ್ಲಿ ಹಿನ್ನೀರಿನ ಬೋಟ್ ಸಫಾರಿಯಿಂದ ಯಾರಿಗೆ ಅನುಕೂಲ, ಅನನುಕೂಲ ಎಂಬುದಕ್ಕಿಂತ ಹೆಚ್ಚಾಗಿ ಪರಿಸರ, ನೀರು, ವನ್ಯಪ್ರಾಣಿಗಳು, ಕಾಡು, ರೈತರು, ಕೂಲಿ ಕಾರ್ಮಿಕರ ಮೇಲೆ ಉಂಟಾಗುವ ಪರಿಣಾಮಗಳ ಕುರಿತೂ ಯೋಚಿಸಬೇಕಿದೆ.
ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಮ್ಮನಕಟ್ಟೆಯ ಸಫಾರಿ ಮತ್ತು ಬಂಡೀಪುರದ ಸಫಾರಿಗಳನ್ನು ಹಂತ ಹಂತವಾಗಿ ಆರಂಭಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಕರ್ನಾಟಕ ವನ್ಯಜೀವಿ ಮಂಡಳಿಯ ೨೦ನೇ ಸಭೆಯಲ್ಲಿ ಸೂಚಿಸಿದ್ದಾರೆ. ವರದಿ ಬಂದ ಬಳಿಕ ತಾಲ್ಲೂಕಿನಲ್ಲಿ ಹಂತ ಹಂತವಾಗಿ ನಿಯಮಾನುಸಾರವಾಗಿ ಅರಣ್ಯ ಸಫಾರಿ ಪ್ರಾರಂಭವಾಗುವುದು ಖಚಿತವಾಗಿರುವುದರಿಂದ ರೆಸಾರ್ಟ್ಗಳು, ಪ್ರವಾಸಿಗರು ಮತ್ತು ಅರಣ್ಯ ಇಲಾಖೆಯವರಲ್ಲಿ ಸಂತಸ ಮೂಡಿದೆ.
” ಕಬಿನಿ ಹಿನ್ನೀರಿನಲ್ಲಿ ನಿಯಮ ಉಲ್ಲಂಘಿಸಿ ಬೋಟ್ ಸಫಾರಿ ನಡೆಸುವ ರೆಸಾರ್ಟ್‌ನವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಲಾಖೆಯ ನಿಯಮಗಳನ್ನು ಉಲ್ಲೇಖಿಸಿ ರೆಸಾರ್ಟ್ ಮಾಲೀಕರಿಗೆ ಮಾಹಿತಿ ನೀಡಲಾಗಿದೆ.”
ಗಣೇಶ್, ಎಇಇ, ಕಬಿನಿ ಜಲಾಶಯ




