ಪ್ರಶಾಂತ್ ಎಸ್.
ಮೈಸೂರು: ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಮಕ್ಕಳೂ ಸೇರಿದಂತೆ ದಾರಿಹೋಕರ ಮೇಲೆ ದಾಳಿ ಮಾಡಿರುವ ಪ್ರಕರಣಗಳು ನಡೆದಿವೆ.
ಕಳೆದ ವರ್ಷ ಬೀದಿನಾಯಿಗಳ ಕಡಿತದಿಂದ ರೇಬಿಸ್ ರೋಗಕ್ಕೆ ತುತ್ತಾಗಿ ನಾಲ್ವರು ವ್ಯಕ್ತಿಗಳು ಉಸಿರು ಚೆಲ್ಲಿರುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಬೀದಿನಾಯಿಗಳಿಂದ ರಕ್ಷಣೆ ನೀಡುವಂತೆ ಒತ್ತಾಯ ಕೇಳಿಬಂದಿದೆ.
ಜಿಲ್ಲೆ ಹಾಗೂ ನಗರಪ್ರದೇಶದಲ್ಲಿ ೨೦೨೪ರಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ದಾಳಿಗೆ ೨೦,೨೪೨ ಮಂದಿ ಒಳಗಾಗಿದ್ದು, ಅದರಲ್ಲಿ ನಾಲ್ಕು ಮಂದಿ ರೇಬಿಸ್ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ೨೦೨೫ರಲ್ಲಿ ೪,೨೬೨ ಮಂದಿಯನ್ನು ಬೀದಿ ನಾಯಿಗಳು ದಾಳಿ ಮಾಡಿ ಚಿಕಿತ್ಸೆಗೆ ಪಡೆದಿದ್ದಾರೆ.
ಬೀದಿ ನಾಯಿಗಳ ಹಾಳಿಯನ್ನು ನಿಯಂತ್ರಿಸಬೇಕಾದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉದಾಸೀನ ತೋರಿಸುತ್ತಿದ್ದಾರೆ. ಅದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದ್ದರೂ ಇಲ್ಲದ ಪುನರ್ವಸತಿ ಕೇಂದ್ರ: ನಗರದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ರಾಯನ ಕೆರೆ ಸಮೀಪವಿರುವ ಪ್ರದೇಶವೊಂದರಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ ಚಿಕಿತ್ಸೆಯೊಂದಿಗೆ ಅನಾ ರೋಗ್ಯ ಪೀಡಿತ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಲು ಸೂಕ್ತ ಕ್ರಮವನ್ನು ಮಾಡಲಾಗಿದೆ.
೧೦ ಸಾವಿರಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ: ಕೆ.ಆರ್.ಎಸ್.ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಬೀದಿ ನಾಯಿಗಳ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಬೀದಿ ನಾಯಿ ದಾಳಿಗೆ ತುತ್ತಾದ ೧೦ ಸಾವಿರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ೨೦೨೩ನೇ ಸಾಲಿನಲ್ಲಿ ೪,೮೫೯, ೨೦೨೪ನೇ ಸಾಲಿನಲ್ಲಿ ೭,೨೨೫, ೨೦೨೫ನೇ ೪,೨೬೨ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಬೀದಿ ನಾಯಿ ಕೊಲ್ಲುವುದು ಅಪರಾಧ:ಅನಿಮಲ್ ಬರ್ತ್ ಕಂಟ್ರೋಲ್ ನಿಯಮ- ೨೦೨೩ರ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ. ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಮತ್ತು ರೇಬಿಸ್ ಕಾಯಿಲೆ ಲಸಿಕೆಯನ್ನು ಹಾಕಿ ಯಾವ ಜಾಗದಿಂದ ಹಿಡಿದಿರುತ್ತೇವೆಯೋ ಅದೇ ಜಾಗಕ್ಕೆ ಒಯ್ದು ಬಿಡಲಾಗುತ್ತಿದೆ ಎಂಬುದಾಗಿ ಸಂಬಂಧ ಪಟ್ಟ ಅಧಿಕಾರಿಯೊಬ್ಬರು ಹೇಳುತ್ತಾರೆ.
” ಜಿಲ್ಲೆಯಾದ್ಯಂತ ಎಲ್ಲ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿ ಕಡಿತಕ್ಕೆ ತುತ್ತಾದವರಿಗೆ ರೇಬಿಸ್ ತಡೆ ಚುಚ್ಚುಮದ್ದು ನೀಡುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದ್ದು, ಎಲ್ಲಿಯೂ ಲಸಿಕೆ ಕೊರತೆ ಇಲ್ಲ. ನಾಯಿ ಕಡಿತಕ್ಕೆ ಒಳಗಾದವರು ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಸೂಕ್ತ.”
-ಡಾ ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
” ನಗರಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಓಡಾಡುವುದಕ್ಕೂ ಬೈಕ್ ಓಡಿಸುವುದಕ್ಕೂ ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಇನ್ನಾದರೂ ಅಽಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲಿ.”
– ಪೈ.ಅಭಿಷೇಕ್, ಮೈಸೂರು
” ಮೈಸೂರಿನ ರಾಯನ ಕೆರೆ ಸಮೀಪ ಬೀದಿ ನಾಯಿಗಳ ಪುನರ್ವಸತಿಗೆ ಪ್ರತ್ಯೇಕವಾಗಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇನ್ನೂ ಕಾರ್ಯಾರಂಭ ಮಾಡಿಲ್ಲ. ನಿರ್ವಹಣೆಯ ಹೊಣೆ ಹೊರುವುದಕ್ಕೆ ಎನ್‌ಜಿಒ ಸಂಸ್ಥೆಗಳು ಕೂಡ ಮುಂದೆ ಬರುತ್ತಿಲ್ಲ. ಯಾವುದಾದರೂ ಸಂಸ್ಥೆಯವರು ಮುಂದೆ ಬಂದರೆ, ತಕ್ಷಣ ಕೇಂದ್ರವನ್ನು ಕಾರ್ಯ ಪ್ರವೃತ್ತಗೊಳಿಸಲಾಗುವುದು.”
-ಡಾ.ಎನ್.ಪಿ.ವೆಂಕಟೇಶ್, ಆರೋಗ್ಯಾಧಿಕಾರಿ ಪಾಲಿಕೆ





