Mysore
28
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಪೂರ್ಣಗೊಳ್ಳದ ಕುಡಿಯುವ ನೀರಿನ ಯೋಜನೆ

ಕಿಶೋರ್‌ ಕುಮಾರ್‌ ಶೆಟ್ಟಿ

ವಿರಾಜಪೇಟೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರ ಕಾಲೋನಿಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆ ಪೂರ್ಣಗೊಳ್ಳದೆ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ನೀರು ಒದಗಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಪರಿಶಿಷ್ಟ ಪಂಗಡ ಕಾಲೋನಿ ಮತ್ತು ನಾಂಗಾಲ ಶಾಲೆಯ ಬಳಿಯ ಪರಿಶಿಷ್ಟ ಜಾತಿ ವರ್ಗದ ಕಾಲೋನಿಯ ನಿವಾಸಿಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. ಯೋಜನೆಗೆ ಕ್ರಮವಾಗಿ ೩ ಲಕ್ಷ ರೂ. ಮತು ೨ ಲಕ್ಷ ರೂ. ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಕೆಲಸ ಆರಂಭವಾಗಿ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

೨೦೨೩-೨೪ನೇ ಸಾಲಿನ ೧೪ನೇ ಹಣಕಾಸು ಯೋಜನೆಯಡಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಒಟ್ಟು ೧೬,೦೯,೧೭೫ ರೂ. ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಪ್ರಸ್ತಾವನೆ ಸರ್ಕಾರದಿಂದ ಅನುಮೋದನೆಗೊಂಡು ೨೦೨೪ರ ಮಾರ್ಚ್ ೧೧ರಂದು ಅನುದಾನ ಬಿಡುಗಡೆಗೊಂಡಿತ್ತು. ಇದರಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ಮಾತ್ರ ೧೧,೫೭,೫೦೦ ರೂ. ಗಳನ್ನು ಬಿಡುಗಡೆಗೊಳಿಸಲಾಗಿತ್ತು.

ಕಂಡಂಗಾಲ ಗ್ರಾಮದ ಪರಿಶಿಷ್ಟ ಪಂಗಡದ ಮೂವತ್ತುಮಾನಿ ಕಾಲೋನಿಯಲ್ಲಿ ಒಟ್ಟು ೧೮ ಮನೆಗಳಿದ್ದು, ಕುಡಿಯುವ ನೀರು ಯೋಜನೆಗಾಗಿ ೩ ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಯಲ್ಲಿ ಬೋರ್‌ವೆಲ್ ಕೊರೆದು ಮೋಟಾರ್ ಮತ್ತು ಪೈಪ್ ಲೈನ್ ಅಳವಡಿಕೆಗಳು ಸೇರಿವೆ.

ಇಲ್ಲಿ ಸುಮಾರು ಎಂಟು ತಿಂಗಳಿನಿಂದ ಕಾಮಗಾರಿ ನಡೆದು ಇದೀಗ ಕೊಳವೆ ಬಾವಿ ಮಾತ್ರ ಕೊರೆದು ಹಿಂದಕ್ಕೆ ತೆರಳಿದ್ದಾರೆ. ಮೋಟಾರ್, ಪೈಪ್‌ಲೈನ್ ಅಳವಡಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ಸಂಬಂಧ ೨,೮೭,೫೫೪ ರೂ. ಗಳ ಬಿಲ್ಲು ಗುತ್ತಿಗೆದಾರನಿಗೆ ಪಾವತಿಸಲಾಗಿದೆ.

ಮತ್ತೊಂದೆಡೆ ನಾಂಗಾಲ ಕಳ್ತೋಡು ಸರ್ಕಾರಿ ಶಾಲೆಯ ಬಳಿಯಲ್ಲಿರುವ ಪರಿಶಿಷ್ಟ ಜನಾಂಗದ ಸುಮಾರು ೨೦ ಕುಟುಂಬಗಳಿವೆ. ಇಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರಿದ ಹಿನ್ನೆಲೆಯಲ್ಲಿ ಕುಡಿಯುವ ನೀರು ಯೋಜನೆಗಾಗಿ ೨ ಲಕ್ಷ ರೂ. ಅನುದಾನ ನೀಡಲಾಗಿತ್ತು. ಯೋಜನೆಯಲ್ಲಿ ಸಾರ್ವಜನಿಕ ಕೊಳವೆ ಬಾವಿ ನಿರ್ಮಾಣ, ಮೋಟಾರ್ ಅಳವಡಿಕೆ, ಪೈಪ್ ಲೈನ್ ಅಳವಡಿಕೆಯನ್ನು ಒಳಗೊಂಡಿದೆ. ಆದರೆ, ಇಲ್ಲಿಯು ಕೊಳವೆ ಬಾವಿ ನಿರ್ಮಾಣ ಮಾಡಿ ಕೆಲಸ ಸ್ಥಗಿತಗೊಳಿಸಲಾಗಿದ್ದು, ಇದೇ ಕಾಮಗಾರಿಗೆ ಒಟ್ಟು ೧,೯೫,೭೪೧ ರೂ. ಗಳ ಬಿಲ್ಲು ಪಾವತಿಯಾಗಿದೆ. ಗ್ರಾಮ ಪಂಚಾಯಿತಿಯು ಸಾರ್ವಜನಿಕರ ಹಿತ ಕಾಪಾಡಬೇಕು. ಕಾಮಗಾರಿ ಗುಣಮಟ್ಟ ನೀಡಿ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು. ಆದರೆ, ಇಲ್ಲಿ ಕಾಮಗಾರಿಗಳು ಮುಗಿಯದೆ ಹಣ ನೀಡಿರುವುದು ಬೆಳಕಿಗೆ ಬಂದಿದೆ. ಉನ್ನತಮಟ್ಟದ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಸುಮಾರು ೪೦ ವರ್ಷಗಳಿಂದ ಕೂಲಿ ಮಾಡಿಕೊಂಡು ನಾವು ಇಲ್ಲಿ ವಾಸವಿದ್ದೇವೆ. ಕೂಲಿ ಕಾರ್ಮಿಕ ಜೀವನ ನಡೆಸುತಿದ್ದೇವೆ. ನೀರಿಗಾಗಿ ದಿನನಿತ್ಯ ಪರದಾಡುವಂತಾಗಿದೆ. ಮಳೆಗಾಲದಲ್ಲಿ ನೀರಿನ ಸಮಸ್ಯೆ ಇಲ್ಲ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಸರ್ಕಾರದಿಂದ ಕುಡಿಯುವ ನೀರು ಯೋಜನೆ ಆರಂಭವಾದರೂ ಯೋಜನೆ ಪೂರ್ಣಗೊಂಡಿಲ್ಲ. ಆದಷ್ಟು ಶೀಘ್ರದಲ್ಲಿ ಕೆಲಸ ಪೂರ್ಣಗೊಳಿಸಿ ಕುಡಿಯುವ ನೀರು ಕಲ್ಪಿಸಬೇಕು. –ಎರವರ ಮುತ್ತ, ಮೂವತ್ತುಮಾನಿ ಕಾಲೋನಿ ನಿವಾಸಿ

ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಗಮನಕ್ಕೆ ಬಂದಿದೆ. ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ವೀಕ್ಷಣೆ ಮಾಡಲಾಗಿದೆ. ತೆರೆದ ಕೊಳವೆ ಬಾವಿಗೆ ಮೋಟಾರ್ ಅಳವಡಿಕೆ ಮಾಡಲು ವಿದ್ಯುತ್ ಸಂಪರ್ಕದಲ್ಲಿ ಅಡಚಣೆಯಾಗಿದೆ. ಇನ್ನೂ ಎರಡು ದಿನಗಳ ಕಾಲಮಿತಿಯಲ್ಲಿ ಕೊಳವೆ ಬಾವಿಗೆ ಮೋಟಾರ್, ಪೈಪ್‌ಲೈನ್ ಅಳವಡಿಸಿ, ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಜರುಗಿಸಲಾಗುವುದು. -ಭಾಸ್ಕರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

 

Tags:
error: Content is protected !!