Mysore
21
broken clouds

Social Media

ಬುಧವಾರ, 14 ಜನವರಿ 2026
Light
Dark

ಛಾಯಾಚಿತ್ರದಲ್ಲಿ ಬಾಬಾ ಸಾಹೇಬರು ನಡೆದು ಬಂದು ಹಾದಿ

ಚಿರಂಜೀವಿ ಸಿ. ಹುಲ್ಲಹಳ್ಳಿ

ರಂಗಭೂಮಿ ಕಲಾವಿದ ಶಿವಲಿಂಗಯ್ಯರಿಂದ ಅಪರೂಪದ ಅಂಬೇಡ್ಕರ್ ಛಾಯಾಚಿತ್ರಗಳ ಸಂಗ್ರಹ

ಮೈಸೂರು: ‘ಬಾಬಾ ಸಾಹೇಬ್ ಸಮತೆಯೆಡೆಗೆ ನಡೆಗೆ’ ಆಶಯದ ಬಹುರೂಪಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕಿನ ಮಜಲುಗಳನ್ನು ತೆರೆದಿಡುವ ಅತಿ ಅಪರೂಪದ ಛಾಯಾಚಿತ್ರ ಪ್ರದರ್ಶನವು ಬೆಳ್ಳಿಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.

ಮದುವಣಿಗಿತ್ತಿಯಂತೆ ಸಿಂಗಾರಗೊಂಡಿರುವ ರಂಗಾಯಣದ ಆವರಣದ ಬಿ.ವಿ. ಕಾರಂತರ ರಂಗಚಾವಡಿಯಲ್ಲಿ ಅನಾವರಣಗೊಂಡಿರುವ ಅತಿ ಅಪರೂಪದ ಅಂಬೇಡ್ಕರ್ ಅವರ ಛಾಯಾಚಿತ್ರಗಳ ಮೂಲಕ ಸಂವಿಧಾನ ರಚನೆಯ ದಾರಿ, ಹೋರಾಟದ ಬದುಕು, ಕುಟುಂಬದೊಳಗಿನ ಸಂಬಂಧಗಳನ್ನು ತೆರೆದಿಡುತ್ತ ಕಣ್ಮನ ಸೆಳೆಯುತ್ತಿವೆ.

ಗೂಗಲ್‌ನಲ್ಲಿ ಸರ್ಚ್ ಮಾಡಿದರೂ ಸಿಗದ ಅತಿ ಅಪರೂಪದ ಅಂಬೇಡ್ಕರ್ ಭಾವಚಿತ್ರಗಳು ಬಹುರೂಪಿ ಬೆಳ್ಳಿಹಬ್ಬದ ಆಶಯವನ್ನು ಎತ್ತಿಹಿಡಿಯುತ್ತ ಮೆರುಗು ನೀಡುತ್ತಿವೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯ ರಂಗಭೂಮಿ ಕಲಾವಿದ ಶಿವಲಿಂಗಯ್ಯ ದೇಶದ ಹಲವೆಡೆ ಸುತ್ತಿ ಅಪರೂಪದ ಅಂಬೇಡ್ಕರ್ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುತ್ತಿದ್ದಾರೆ.

ಪುಣೆ, ಮುಂಬೈ, ಔರಂಗಾಬಾದ್, ನಾಸಿಕ್ ಮ್ಯೂಸಿಯಂ, ಪಿಇಎಸ್ ಕಾನೂನು ಕಾಲೇಜು, ನಾಗ್ಪುರಕ್ಕೆ ಭೇಟಿ ನೀಡಿ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪ್ರದ ರ್ಶನ ಮಾಡುತ್ತ ಅಂಬೇಡ್ಕರ್‌ರ ಅವಿರತ ಶ್ರಮ, ಕೊಡುಗೆ, ಜ್ಞಾನದ ವಿದ್ವತ್‌ಅನ್ನು ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಸಂವಿಧಾನ ರಚನೆ ಸಭೆಯಲ್ಲಿ ಅಂಬೇಡ್ಕರ್ ಮಾತನಾಡುತ್ತಿರುವುದು, ರಮಾಬಾಯಿ ಅಂಬೇಡ್ಕರ್ ಮತ್ತು ಮಗನೊಂದಿಗೆ ಕುರ್ಚಿಯಲ್ಲಿ ಕೂತಿರುವ -ಟೋ, ಕಾಶ್ಮೀರದಲ್ಲಿ ಸೈನಿಕರೊಂದಿಗಿನ ಛಾಯಾಚಿತ್ರ, ನಾಗ್ಪುರದಲ್ಲಿ ಭಾರತೀಯ ಬೌದ್ಧ ಧಮ್ಮ ಸಮಿತಿಯೊಂದಿನ, ಸಚಿವ ಸಂಪುಟದಲ್ಲಿನ ಚಿತ್ರ, ಪೂನ ಒಪ್ಪಂದದ ಸಂದರ್ಭದ ಅಪರೂಪದ ೮೪ ಛಾಯಾಚಿತ್ರಗಳು ಬಹುರೂಪಿಯಲ್ಲಿ ಅನಾವರಣಗೊಂಡಿವೆ.

ಬಾಬಾ ಸಾಹೇಬರನ್ನು ಕೇವಲ ದಲಿತರ ನಾಯಕ ಎನ್ನುವ ದೃಷ್ಟಿಯಲ್ಲಿ ನೋಡುತ್ತಾರೆ. ಆದರೆ, ದೇಶಕ್ಕೆ ಅವರ ಕೊಡುಗೆ ಪ್ರಾತಃ ಸ್ಮರಣೀಯವಾದದ್ದು. ಇದನ್ನು ನಾಡಿನ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಕಳೆದ ೧೬ ವರ್ಗಳಿಂದ ಛಾಯಾಚಿತ್ರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

‘ಚಾಮರಾಜನಗರದ ನಳಂದ ವಿವಿಯ ಬೋಧಿದತ್ತ ಬಂತೇಜಿ ಅವರೊಂದಿಗೆ ಮುಂಬೈಗೆ ತೆರಳಿದ್ದ ಸಂದರ್ಭದಲ್ಲಿ ಮ್ಯೂಸಿಯಂನಲ್ಲಿನ ಛಾಯಾಚಿತ್ರಗಳನ್ನು ಕಂಡು ನನಗೂ ಛಾಯಾಚಿತ್ರ ಸಂಗ್ರಹಿಸುವ ಆಸಕ್ತಿ ಮೂಡಿತು. ಅಲ್ಲಿಂದ ಇದುವರೆಗೂ ೩೦೦ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದು, ಬೆಂಗಳೂರು ವಿಶ್ವವಿದ್ಯಾನಿಲಯ, ತುಮಕೂರು ವಿಶ್ವವಿದ್ಯಾನಿಲಯಕ್ಕೆ ನೂರಾರು ಛಾಯಾಚಿತ್ರಗಳನ್ನು ನೀಡಿದ್ದೇನೆ’ ಎಂದು ಶಿವಲಿಂಗಯ್ಯ ವಿವರಿಸಿದರು.

ಮೂಲತಃ ರಂಗಭೂಮಿ ಕಲಾವಿದರಾಗಿರುವ ಶಿವಲಿಂಗಯ್ಯ ಗೌತಮಿ ಟ್ರಸ್ಟ್ ಸ್ಥಾಪಿಸಿಕೊಂಡು ಬುದ್ಧ, ಬಸವಣ್ಣ, ಅಂಬೇಡ್ಕರ್ ಆಶಯಗಳಲ್ಲಿ ನಾಟಕ ರಚನೆ ಮಾಡಿ ರಾಜ್ಯಾದ್ಯಂತ ಪ್ರದರ್ಶನ ಮಾಡಿ ತಮ್ಮದೇ ಛಾಪು ಮೂಡಿಸಿದ್ದು, ತಮ್ಮ ಸ್ವಂತ ಹಣ ವ್ಯಯಿಸಿ ಛಾಯಾಚಿತ್ರ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಹೊಸದಿಲ್ಲಿ, ಪಂಜಾಬ್, ಮದ್ರಾಸ್‌ಗಳಲ್ಲಿ ಇನ್ನೂ ವಿರಳವಾದ ಛಾಯಾಚಿತ್ರಗಳಿದ್ದು, ಮುಂದಿನ ದಿನಗಳಲ್ಲಿ ಅಲ್ಲಿಗೂ ತೆರಳಿ ಅಪ ರೂಪದ ಫೋಟೋಗಳನ್ನು ಸಂಗ್ರಹಿಸುವ ಆಶಯವನ್ನು ಶಿವಲಿಂಗಯ್ಯ ವ್ಯಕ್ತಪಡಿಸಿದರು

ಚಿತ್ರಕಲೆಯಲ್ಲಿ ಬಾಬಾ ಸಾಹೇಬರ ಆಶಯ…: ರಂಗಾಯಣದ ಅವರಣಕ್ಕೆ ಕಾಲಿಟ್ಟ ತಕ್ಷಣ ಡಾ.ಬಿ.ಆರ್.ಅಂಬೇಡ್ಕರ್ ಬದುಕು, ಹೋರಾಟ, ಜೀವನ, ಸಂವಿಧಾನದ ಆಶಯವನ್ನು ನಮ್ಮ ಕಣ್ಣೆದುರೆಗೆ ಬರುವಂತೆ ಚಿತ್ರಕಲೆಯ ಮೂಲಕ ಕಟ್ಟಿಕೊಡಲಾಗಿದೆ. ವರ್ಣಾಶ್ರಮ ಪದ್ಧತಿಯು ಜನರನ್ನು ವಿಂಗಡಿಸಿರುವ ಪರಿ ಅದಕ್ಕೆ ಅಂಬೇಡ್ಕರ್ ಹೇಗೆ ಮದ್ದು ಅರೆದರು. ಸಂವಿಧಾನ ರಚನೆಯ ಸಭೆ ನಡೆದ ಮಾದರಿ ಮತ್ತು ದಲಿತರ ವಿಮೋ ಚನೆಗೆ ಬೌದ್ಧ ಧಮ್ಮ ಸ್ವೀಕಾರದ ಹಾದಿಯನ್ನು ರೂಪಕಗಳಲ್ಲಿ ಚಿತ್ರಿಸಿರು ವುದು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಸಂಜೆ ವೇಳೆ ನಾಟಕ ನೋಡಲು ಬಂದ ನೂರಾರು ಮಂದಿ ಚಿತ್ರಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ.”

 

 

Tags:
error: Content is protected !!