Mysore
23
broken clouds
Light
Dark

ಸಂಜೆ ವೇಳೆ ಇನ್‌ಸ್ಪೆಕ್ಟರ್‌, ಎಸ್‌ಐಗಳಿಗೆ ಗಸ್ತು

ಗೃಹ ಸಚಿವರು-ಹಿರಿಯ ಅಧಿಕಾರಿಗಳಿಂದ ಸೂಚನೆ; ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ರೌಂಡ್ಸ್

  • ಎಚ್.ಎಸ್.ದಿನೇಶ್ ಕುಮಾರ್

ಮೈಸೂರು: ಗೃಹ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯಂತೆ ಇನ್ನು ಮುಂದೆ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಪೊಲೀಸ್ ಇನ್ ಸ್ಪೆಕ್ಟರ್‌ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿರಬೇಕಾಗಿದೆ.

ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಪೊಲೀಸ್‌ ಮಹಾ ನಿರ್ದೆಶಕರು ಇಂತಹ ತೀರ್ಮಾನ ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಅಪರಾಧ ಪ್ರಕರಣಗಳು ಸಂಜೆ ಹಾಗೂ ರಾತ್ರಿ ವೇಳೆ ಜರುಗುವುದರಿಂದ ಆಯಾ ಠಾಣೆಯ ಮುಖ್ಯಸ್ಥರು ತಮ್ಮ ಠಾಣಾ ವ್ಯಾಪ್ತಿಯ ಸೂಕ್ಷ ಪ್ರದೇಶಗಳಲ್ಲಿ ನಿತ್ಯ ಗಸ್ತು ಮಾಡಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ.

ಕಳೆದ ಒಂದು ವಾರದಿಂದಲೇ ಈ ಆದೇಶ ನಗರದಲ್ಲಿ ಅನುಷ್ಠಾನಕ್ಕೆ ಬಂದಿದೆ. ಅದರಂತೆ ಮೈಸೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲೂ ಆಯಾ ಠಾಣೆಗಳ ಇನ್ ಸ್ಪೆಕ್ಟರ್ ಹಾಗೂ ಎಸ್ಐಗಳು ಸಂಜೆ ವೇಳೆ ಗಸ್ತು ತಿರುಗಲು ಆರಂಭಿಸಿದ್ದಾರೆ.

ತಮ್ಮ ಠಾಣೆಯ ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿ ಯೊಂದಿಗೆ ಗಸ್ತು ನಡೆಸುವ ಪೊಲೀಸರು ವಿನಾಕಾರಣ ರಸ್ತೆಯಲ್ಲಿ ಗುಂಪು ಸೇರುವವರು, ಕುಡಿದು ಸಾರ್ವಜನಿಕ ರೊಂದಿಗೆ ಅಸಭ್ಯವಾಗಿ ವರ್ತಿಸುವವರು, ದ್ವಿಚಕ್ರ ವಾಹನ ಗಳಲ್ಲಿ ವೀಲಿಂಗ್ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆರಂಭಿಸಿದ್ದಾರೆ.

ರೌಡಿ ಶೀಟರ್‌ಗಳ ಮೇಲೆ ನಿಗಾ: ಇದೇ ವೇಳೆ ಆಯಾ ಠಾಣೆಗಳ ರೌಡಿಗಳ ಪಟ್ಟಿಯಲ್ಲಿ ಇರುವವರ ಮೇಲೆ ತೀವ್ರ ನಿಗಾ ವಹಿಸಿರುವ ಪೊಲೀಸರು, ರಾತ್ರಿ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ತಂಡದೊಂದಿಗೆ ಗುಂಪುಗೂಡಿ ನಿಂತಿದ್ದಲ್ಲಿ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿದ್ದಲ್ಲಿ ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಅಲ್ಲದೆ, ಪೊಲೀಸರು ಹಾಗೂ ಸಾರ್ವಜನಿಕರೊಂದಿಗಿನ ಸಂಬಂಧಗಳ ಬಗ್ಗೆ ಠಾಣೆಯ ಸಿಬ್ಬಂದಿಗೆ ಪಾಠ ಹೇಳಬೇಕಿದೆ.

ಇದರ ಜತೆಗೆ ಠಾಣೆ ವ್ಯಾಪ್ತಿಯಲ್ಲಿ ಎಷ್ಟು ಅಪರಾಧ ಪ್ರಕರಣಗಳು ಬಗೆಹರಿದಿವೆ. ಎಷ್ಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂಬುದರ ಪರಿಶೀಲನೆ ಕೆಲಸಕ್ಕೆ ಮುಂದಾಗಿದ್ದಾರೆ.

ಹಾಗೆಯೇ ಅನುಮತಿ ಪಡೆಯದೆ ಧ್ವನಿವರ್ಧಕಗಳನ್ನು ಬಳಸುವುದು, ಸಾರ್ವಜನಿಕವಾಗಿ ಪ್ರಚೋದನಾಕಾರಿ ಭಾಷಣ ಮಾಡುವುದು, ಅಕ್ರಮ ಮದ್ಯ ಮಾರಾಟ, ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟದ ಬಗ್ಗೆಯೂ ಪೊಲೀಸರು ನಿಗಾ ವಹಿಸಲಿದ್ದಾರೆ.


ಶಾಸಕರ ಸ್ವಾಗತ: ಪೊಲೀಸ್ ಇಲಾಖೆಯ ಈ ವಿನೂತನ ಕ್ರಮವನ್ನು ನಗರದ ಶಾಸಕರಾದ ಶ್ರೀವತ್ಸ
ಮತ್ತು ಕೆ.ಹರೀಶ್‌ ಗೌಡ ಅವರು ಸ್ವಾಗತಿಸಿದ್ದಾರೆ. ರಾತ್ರಿ ವೇಳೆ ಹೆಚ್ಚು ಅಪರಾಧ ಪ್ರಕರಣಗಳು ನಡೆಯುವುದರಿಂದ ಪೊಲೀಸ್ ಅಧಿಕಾರಿಗಳು ರಸ್ತೆಯಲ್ಲಿ ಇದ್ದರೆ, ಅಪರಾಧ ಮಾಡುವವರು ಒಮ್ಮೆ ಯೋಚಿಸುತ್ತಾರೆ. ಹೀಗಾಗಿ ಗೃಹ ಸಚಿವರ ಈ ನಡೆ ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಖುದ್ದು ಆಯುಕ್ತರೇ ಭೇಟಿ…
ಇನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಖುದ್ದು ಕಾರ್ಯಾ ಚರಣೆಗೆ ಇಳಿದಿದ್ದಾರೆ. ಪ್ರತಿದಿನ ಅವರು ಒಂದಲ್ಲಾ ಒಂದು ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ, ಠಾಣೆಯ ಆಗು ಹೋಗುಗಳ ಬಗ್ಗೆ ಖುದ್ದು ತಪಾಸಣೆ ನಡೆಸಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ನಾನೇ ಖುದ್ದು ಪ್ರತಿದಿನ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಲು ಆರಂಭಿಸಿದ್ದೇನೆ. ನಮ್ಮ ಡಿಸಿಪಿಗಳು, ಎಸಿಪಿಗಳೂ ಆಯಾ ವ್ಯಾಪ್ತಿಯ ಠಾಣೆ ಗಳಿಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ. ಇದರಿಂದ ಠಾಣೆಯಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ತಿಳಿದಂತಾಗುತ್ತದೆ. ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವಿನ ಸಂಬಂಧ ಹೇಗಿದೆ ಎಂಬುದೂ ಇದರಿಂದ ಗೊತ್ತಾಗುತ್ತದೆ. ಸರ್ಕಾರ ಹಾಗೂ ಮೇಲಧಿಕಾರಿಗಳು ನೀಡುವ ಸೂಚನೆಯನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.

-ಸೀಮಾ ಲಾಟ್ಕರ್, ನಗರ ಪೊಲೀಸ್‌ ಆಯುಕ್ತರು.