Mysore
25
clear sky

Social Media

ಗುರುವಾರ, 24 ಏಪ್ರಿಲ 2025
Light
Dark

ಸರ್ಕಾರಿ ದಸರಾದಲ್ಲಿ ಎಷ್ಟೊಂದು ಅವಾಂತರ?

ಸಿರಿ ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಎಂದರೆ ಎಲ್ಲರ ಕಣ್ಣಿನಲ್ಲೂ ಹೊಳಪು ಮೂಡುತ್ತದೆ. ನನಗಂತೂ ಮೈಸೂರು ದಸರಾ ಮನಸ್ಸಿಗೆ ಬಹಳ ಹತ್ತಿರ. ಮೈಸೂರಿನಲ್ಲೇ ಹುಟ್ಟಿ ಬೆಳೆದ ನಾನು ಚಿಕ್ಕ ವಯಸ್ಸಿನಿಂದಲೂ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಆಹಾರ ಮೇಳಕ್ಕೆ ಭೇಟಿ ನೀಡುತ್ತಾ ಬಂದಿದ್ದೇನೆ.

ಆದರೆ ವರ್ಷವರ್ಷಕ್ಕೂ ದಸರಾ ಬದಲಾಗುತ್ತಿದೆ. ಈ ಬಾರಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ ನಡೆಯಿತು. ಜಾಗ ದೊಡ್ಡದಾಗಿರುತ್ತದೆ ಎಂದರೆ ಬಹಳಷ್ಟು ರೀತಿಯ ಆಹಾರವೂ ಇರುತ್ತದೆ ಎಂಬ ಆಸೆಗಣ್ಣಿನಿಂದ ಹೋಗಿದ್ದೆ. ಒಳಗೆ ಮಾತ್ರ ಕಾಲಿಡಲೂ ಆಗದಷ್ಟು ಜನರು. ಆದದ್ದಾಗಲಿ ಒಂದು ಕೈ ನೋಡಿಯೇ ಬಿಡೋಣ ಎಂದು ಒಂದೆರಡು ಮಳಿಗೆಗಳಿಗೆ ಹೋದೆ. ಆದರೆ ಕಂಡದ್ದು ಮಾತ್ರ ಬಹುಪಾಲು ಅಶುದ್ಧತೆ. ಒಬ್ಬರು ಕೈಗವಸು ಸಹ ಹಾಕದೆ ಬಜ್ಜಿ ಹಿಟ್ಟು ಕಲೆಸುತ್ತಿದ್ದರೆ ಇನ್ನೊಂದೆಡೆ ಗಲೀಜು ಪಾತ್ರೆಯೊಂದರಲ್ಲಿ ಚುರುಮುರಿ ಮಿಶ್ರಣ ಮಾಡುತ್ತಿದ್ದರು. ಕಾಫಿ-ಟೀ, ಜ್ಯೂಸ್, ಚಾಟ್ಸ್. . . ಆಹಾ! ಏನೆಲ್ಲಾ ಇತ್ತು.

ಆದರೆ ಕೆಲವು ಮಾತ್ರ ಶುದ್ಧವಾಗಿ, ತಿನ್ನಲು ಅರ್ಹವಾಗಿ ಕಾಣಿಸುತ್ತಿತ್ತು. ಇದರ ಸಹವಾಸವೇ ಬೇಡ ಎಂದು ಸುಮ್ಮನೆ ಹೊರಗೆ ಬಂದಿದ್ದಾಯ್ತು. ಇನ್ನು ಇಲಾಖೆಗಳು ಇವೆ ಎಂಬ ಒಂದೇ ಕಾರಣಕ್ಕೆ ಆಯೋಜನೆಯಾಗುವ ಕೆಲವು ಕಾರ್ಯಕ್ರಮಗಳಿವೆ. ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಈ ಕಾರ್ಯಕ್ರಮಗಳಲ್ಲಿ ಏನಾಗುತ್ತದೆ, ಕಾರ್ಯಕ್ರಮ ಎಲ್ಲಿ ನಡೆಯುತ್ತದೆ, ಇದಕ್ಕೆ ಯಾರು ಹಾಜರಾಗಬಹುದು, ಹಾಜರಾಗುವುದರಿಂದ ಆಗುವ ಪ್ರಯೋಜನಗಳು ಏನು ಎಂಬುದರ ಬಗ್ಗೆ ಯಾವ ಇಲಾಖೆಯೂ ಎಲ್ಲೂ ತಿಳಿಸಿದ್ದನ್ನು ನಾನು ನೋಡಲೇ ಇಲ್ಲ.

ಕಾರ್ಯಕ್ರಮದ ಸ್ಥಳ ಕೂಡ ಕೊನೆಯ ದಿನಗಳಲ್ಲಿ ನಿರ್ಧಾರವಾಗಿದ್ದು ಎಂಬುದನ್ನು ನೆನೆದರೆ ದಸರಾಗೆ ಬರುತ್ತಿರುವ ಭರಪೂರ ಅನುದಾನ ಹಾಗೂ ನೀರಲ್ಲಿ ಮಾಡುವ ಹೋಮ ಎರಡೂ ಒಂದೇ ಎಂದು ಎಂತಹ ಸಾಮಾನ್ಯ ಮನುಷ್ಯನಿಗಾದರೂ ಅನಿಸಿದರೆ ಅದರಲ್ಲಿ ಮಾತ್ರ ಯಾವುದೇ ಆಶ್ಚರ್ಯವಿಲ್ಲ. ಒಂದೊಂದು ಕಾರ್ಯಕ್ರಮ ಜನರೇ ಇಲ್ಲದೆ ಖಾಲಿ ಹೊಡೆಯುತ್ತಿದ್ದರೆ ಇನ್ನೊಂದಷ್ಟು ಕಾರ್ಯಕ್ರಮಗಳಿಗೆ ಕಾಲಿಡಲು ಸಹ ಅವಕಾಶ ಇರುವುದಿಲ್ಲ. ಯುವ ದಸರಾದಂತಹ ದೊಡ್ಡ ಕಾರ್ಯಕ್ರಮಗಳನ್ನು ವೀಕ್ಷಿಸಲು ಜನರು ಸಾವಿರಾರು ರೂ. ಗಳನ್ನು ಪಾವತಿಸಿ ಟಿಕೆಟ್ ಖರೀದಿ ಮಾಡಿರುತ್ತಾರೆ.

ಆದರೆ ಅಲ್ಲಿ ಹೋದರೆ ವೇದಿಕೆಗೂ ಇವರ ಖುರ್ಚಿಗಳಿಗೂ ಅದೆಷ್ಟು ದೂರವಿರುತ್ತದೆ ಎಂದರೆ, ದೂರದೃಷ್ಟಿಯ ದೋಷ ಇರುವವರು ಕನ್ನಡಕ ತಂದಿಲ್ಲ ಎಂದರೆ ಏನು ಕಾಣುವುದೂ ಅನುಮಾನ. ಸಾವಿರಾರು ರೂಪಾಯಿ ನೀಡಿ ಟಿಕೆಟ್ ಪಡೆದವರು ಹೀಗೆ ಪರದಾಡುತ್ತಾ ನಿಂತರೆ ಮತ್ತೊಂದು ಕಡೆ ಸುಮ್ಮನೆ ಕಾಲೇಜು ಮುಗಿಸಿ ಜಾಲಿ ರೈಡ್‌ಗೆಂದು ಬರುವ ಯುವಜನತೆ ಯಾವುದರ ಪರಿವೆಯೂ ಇಲ್ಲದೆ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಕೆಲವರು ಕುಳಿತು ಸಭ್ಯತೆಯಿಂದ ಕಾರ್ಯಕ್ರಮ ನೋಡಿದರೆ ಇನ್ನು ಕೆಲವರು ಅನುಚಿತವಾಗಿ ನಡೆದುಕೊಳ್ಳಲೆಂದೇ ಅಲ್ಲಿಗೆ ಬಂದಂತಿರುತ್ತಾರೆ. ಇದನ್ನೆಲ್ಲಾ ನೋಡಿ

‘ಮನೆಯಲ್ಲಿ ಟಿವಿಯಲ್ಲಿ ನೋಡಿದ್ದಿದ್ದರೇನೇ ಚೆನ್ನಾಗಿತ್ತು’ ಎಂದು ಯಾರಿಗಾದರೂ ಅನಿಸಿದರೆ ಆಶ್ಚರ್ಯವೇ ಇಲ್ಲ. ಇನ್ನು ಜಂಬೂಸವಾರಿಯ ದಿನ ಆಗುವುದಂತೂ ದೊಡ್ಡ ಮಟ್ಟದ ಸಮಸ್ಯೆಗಳು. ೫-೬ ಸಾವಿರ ರೂ. ನೀಡಿ ಗೋಲ್ಡ್ ಕಾರ್ಡ್ ಖರೀದಿ ಮಾಡಿದ ಜನರೂ ಬಿಸಿಲ ಬೇಗೆಯಲ್ಲಿ ಬೇಯುತ್ತಾ, ಕುಳಿತುಕೊಳ್ಳಲೂ ಸ್ಥಳವಿಲ್ಲದೇ ಪರದಾಡುವ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಜೀವನದಲ್ಲಿ ಮೊದಲ ಬಾರಿಗೆ ನೇರವಾಗಿ ದಸರಾ ನೋಡಲೆಂದು ಆಸೆ ಇಟ್ಟುಕೊಂಡು ಬಂದವರನ್ನು ಸ್ವತಃ ತಾಯಿ ಚಾಮುಂಡೇಶ್ವರಿಯೇ ಕಾಪಾಡಬೇಕು.

ಅಲ್ಲೂ ಕೂಡ ಮುಂದಿನ ಆಸನಗಳಲ್ಲಿ ಪೊಲೀಸರು, ರಾಜಕಾರಣಿಗಳು ಅವರ ಕುಟುಂಬದವರದ್ದೇ ರಾಜ್ಯಭಾರ. ಅಂದಹಾಗೆ, ಬರುಬರುತ್ತಾ ಇದೊಂದು ರೀತಿ ಸರ್ಕಾರಿ ದಸರಾ ಆಗುತ್ತಿದೆ ಎಂಬುದರಲ್ಲಿ ಮಾತ್ರ ಯಾವುದೇ ಅನುಮಾನವಿಲ್ಲ. ಸ್ತಬ್ಧಚಿತ್ರಗಳು, ಕಲಾತಂಡಗಳ ವಿಷಯದಲ್ಲೂ ದಶಕಗಳಿಂದ ಯಾವ ಬದಲಾವಣೆಯೂ ಇಲ್ಲ ಎಂಬಷ್ಟರ ಮಟ್ಟಕ್ಕೆ ಏಕತಾನತೆಯಿಂದ ದಸರಾ ಹಬ್ಬ ನಡೆಯುತ್ತಿದೆ ಎಂಬುದು ಬೇಸರದ ಸಂಗತಿಯಲ್ಲದೇ ಮತ್ತೇನಾಗಬಹುದು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಕ್ಕಿಲ್ಲ.

ಇಷ್ಟನ್ನೆಲ್ಲಾ ಹೊರತುಪಡಿಸಿ ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ, ಬೀದಿದೀಪಗಳನ್ನು ಸರಿಪಡಿಸುವ ಕೆಲಸ, ಸುಣ್ಣ-ಬಣ್ಣದ ಕೆಲಸವೂ ಕೊನೆಯ ಹದಿನೈದು ದಿನಗಳಲ್ಲಿ ಮಾತ್ರವೇ ನಡೆಯುತ್ತದೆ ಎಂಬುದನ್ನು ನೆನಪು ಮಾಡಿಕೊಂಡರೆ ಮೈಸೂರು ದಸರಾದ ವೈಭವದ ಹಿಂದಿರುವ ದಿವ್ಯನಿರ್ಲಕ್ಷ್ಯದ ಅರಿವಾಗುತ್ತದೆ. ಇನ್ನು ರಸ್ತೆಯ ಡಾಂಬರು ಹಾಕುವ ಸಮಯದಲ್ಲಿ ಮಳೆ ಬಂದರೆ ಅಲ್ಲಿಗೆ ಕಥೆ ಮುಗಿಯಿತು. ಜನರಿಗೆ ರಾಜರೂರಿನಲ್ಲಿ ಅಂಬಾರಿಯ ಮೇಲೆ ಸವಾರಿ ಮಾಡಿದಂತೆ ಅನಿಸುವ ಬದಲು ಪಕ್ಕದ ಪುಟ್ಟ ಊರಿನ ಜಾತ್ರೆ ತಲುಪಿದಂತೆ ಅನಿಸುತ್ತದೆ. ತಂತ್ರಜ್ಞಾನ ಮುಂದುವರಿದಿದೆ, ಸರ್ಕಾರದ ಬೊಕ್ಕಸದಲ್ಲಿ ದಸರಾಗೆಂದೇ ವಿಶೇಷ ಪಾಲಿದೆ, ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಬಲ್ಲ ಇವೆಂಟ್ ಮ್ಯಾನೇಜ್‌ಮೆಂಟ್ ತಂಡಗಳಿವೆ.

ಎಲ್ಲಕ್ಕೂ ಮೀರಿ ಒಂದು ದಸರಾ ಆಯೋಜಿಸಲು ಭರ್ತಿ ಒಂದು ವರ್ಷ ಸಮಯ ಇದೆ. ಮನೆ ಮದುವೆಗೇ ಕನಿಷ್ಠ ಆರು ತಿಂಗಳ ಕಾಲದ ತಯಾರಿ ಬೇಕಾಗುತ್ತದೆ ಎನ್ನುವಾಗ ನಾಡಹಬ್ಬಕ್ಕೆ ಒಂದು ತಿಂಗಳ ತಯಾರಿ ಯಾವ ಮೂಲೆಗೆ ಸಾಕಾಯಿತು? ಮನೆಯವರು ಇರುವ ಗಡಿಬಿಡಿಗಳ ನಡುವೆ ಎಲ್ಲವನ್ನೂ ನಾವೇ ಮಾಡುತ್ತಾ ಕುಳಿತುಕೊಳ್ಳುತ್ತೇವೆಂದರೆ ಆಗುವುದೆಲ್ಲಾ ಎಡವಟ್ಟುಗಳೇ. ಹೀಗೆ ಸರ್ಕಾರವೂ ಕೂಡ ಕಚೇರಿಯಲ್ಲಿ ಕುಳಿತು ಕಡತ ತಿದ್ದುವವರ ಕೈಲಿ ಹಬ್ಬ ಮಾಡಿಸಲು ಹೊರಟು ಪ್ರತಿವರ್ಷ ಬರೀ ಎಡವಟ್ಟುಗಳನ್ನಷ್ಟೇ ಮಾಡುತ್ತಿದೆ. ಇದು ಹೀಗೆಯೇ ಆಗುತ್ತಿದ್ದರೆ ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವು ಉನ್ನತೀಕರಣಗೊಳಿಸಿಕೊಳ್ಳಲು, ಹೆಚ್ಚು ಜನರನ್ನು ನಮ್ಮೂರಿನತ್ತ ಸೆಳೆಯಲು, ನಾಡಹಬ್ಬವನ್ನು ಗತವೈಭವದಿಂದ ನಡೆಸಲು ಅವಕಾಶವಾದರೂ ಎಲ್ಲಿ ಸಿಗುತ್ತದೆ? ದಸರಾಗೆ ವರ್ಷಪೂರ್ತಿ ತಯಾರಿ ನಡೆಯಬೇಕು. ಆಯಾ ವಿಷಯಗಳ ಬಗ್ಗೆ, ಈಗಿನ ತಂತ್ರಜ್ಞಾನದ ಬಗ್ಗೆ ಸಂಪೂರ್ಣವಾಗಿ ತಿಳಿದಿರುವವರ ಬಳಿ ಕೆಲಸ ಮಾಡಿಸಬೇಕು, ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ಬದಲು ಎಲ್ಲವನ್ನೂ ಮುಂಚೆಯೇ ತಯಾರಿಸಿಟ್ಟುಕೊಂಡಿರಬೇಕು. ಇಲ್ಲವಾದರೆ ಊರ ಜಾತ್ರೆಗೂ ದಸರಾ ಹಬ್ಬಕ್ಕೂ ಹೆಸರು ಮಾತ್ರ ವ್ಯತ್ಯಾಸ ಎಂಬಂತೆ ಆಗಿಬಿಡುತ್ತದೆ. ಇದು ಈಗಾಗಲೇ ಆಗಿಲ್ಲ ಎನ್ನುವುದಕ್ಕೆ ಮಾತ್ರ ನನ್ನ ಬಳಿಯೂ ಯಾವ ಪುರಾವೆಯೂ ಇಲ

 

Tags: