ಕಾಂಗೀರ ಬೋಪಣ್ಣ
ಸೂಕ್ತ ತನಿಖೆಗೆ ಪರಿಸರವಾದಿಗಳ ಒತ್ತಾಯ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ವಿರಾಜಪೇಟೆ: ಅಚ್ಚ ಹಸಿರಿನ ಸುಂದರ ಪರಿಸರ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಅರಣ್ಯವನ್ನು ನಾಶ ಮಾಡಿ ಎಗ್ಗಿಲ್ಲದೆ ರೆಸಾರ್ಟ್, ವಿಲ್ಲಾಗಳ ನಿರ್ಮಾಣ ಮಾಡಲಾಗುತ್ತಿದ್ದು, ಕೊಡಗು-ಕೇರಳ ಗಡಿಭಾಗದಲ್ಲಿ ನಿಯಮ ಉಲ್ಲಂಸಿ ಸುಮಾರು ೩೦ ಎಕರೆ ಪ್ರದೇಶದಲ್ಲಿ ವಿಲ್ಲಾ ನಿರ್ಮಿಸುತ್ತಿರುವ ಆರೋಪ ಕೇಳಿ ಬಂದಿದೆ.
ವಿರಾಜಪೇಟೆಯ-ಕೇರಳ ಗಡಿಭಾಗದ ಬಾಳುಗೋಡು ವ್ಯಾಪ್ತಿಯಲ್ಲಿ ನಿಯಮ ಬಾಹಿರ ರೆಸಾರ್ಟ್, ಹೋಟೆಲ್, ಬಾರಿ ವಿಲ್ಲಾಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಬ್ರಹ್ಮಗಿರಿ ವನ್ಯಜೀವಿ ವಲಯ ಅರಣ್ಯ ಬಫರ್ ಜೋನ್ ಆಗಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಇಂತಹ ಕಾಮಗಾರಿ ನಡೆಸಲಾಗುತ್ತಿರುವ ಬಗ್ಗೆ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ರಮ ಕಟ್ಟಡಗಳಿಂದ ಪರಿಸರ ಹಾಗೂ ವನ್ಯಜೀವಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದು ಇದೀಗ ಸುಮಾರು ೩೦ ಎಕರೆ ಪ್ರದೇಶದಲ್ಲಿ ಮೈಸೂರು ಮುಡಾದ ಅನುಮತಿ ಇದೆ ಎಂದು ಹೇಳಿಕೊಂಡು ಬೃಹತ್ ವಿಲ್ಲಾಗಳನ್ನು ನಿರ್ಮಿಸಲು ನಿವೇಶನ ಸಿದ್ಧ ಮಾಡಿಕೊಳ್ಳುತ್ತಿದೆ. ಇದೇ ರೀತಿ ನಿಯಮ ಬಾಹಿರ ಅಕ್ರಮ ಕಟ್ಟಡ ನಿರ್ಮಾಣಗಳು ಮುಂದುವರಿದರೆ ಕೊಡಗಿನ ಜಲ ಮೂಲ, ಪರಿಸರಕ್ಕೆ ಭಾರೀ ಧಕ್ಕೆಯಾಗಲಿದೆ. ಮುಂದೆ ಕಾವೇರಿಯ ಒಡಲು ಬರಿದಾಗಿ ಮೈಸೂರು, ಮಂಡ್ಯ ಭಾಗದ ಜನರಿಗೆ ನೀರು ಅಲಭ್ಯವಾಗಲಿದೆ ಎಂದು ಕೊಡಗು ವನ್ಯಜೀವಿಗಳ ಸಂಘದ ಅಧ್ಯಕ್ಷ ಕರ್ನಲ್ ಮುತ್ತಣ್ಣ ಹೇಳಿದ್ದಾರೆ.
ನಿಯಮಬಾಹಿರ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಕೆಲ ಅಧಿಕಾರಿಗಳು ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ಜನ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
” ನಾವು ಕೇರಳದಲ್ಲಿ ಒಂದು ಸ್ಥಳ ಖರೀದಿ ಮಾಡುವುದಾಗಲಿ, ಅಂಗಡಿ ತೆರೆಯುವುದಾಗಲಿ ಸಾಧ್ಯವಾಗುವುದಿಲ್ಲ. ಆದರೆ ಅಲ್ಲಿನವರು ಇಲ್ಲಿ ಬಂದು ಕಾಫಿ ತೋಟ, ಗದ್ದೆಗಳನ್ನು ಖರೀದಿಸಿ, ನಿಯಮ ಬಾಹಿರವಾಗಿ ಬೃಹತ್ ವಿಲ್ಲಾಗಳನ್ನು ನಿರ್ಮಿಸಿ, ಪರಿಸರ ನಾಶ ಮಾಡುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು.”
-ಪದ್ಮಿನಿ ಶೇಖರ್, ಪರಿಸರವಾದಿ
” ಕೆಲ ಅಧಿಕಾರಿಗಳು ಪರಿಸರ ನಾಶಕ್ಕೆ ಮೂಲ ಕಾರಣಕರ್ತರಾಗಿದ್ದಾರೆ. ಈ ಬಗ್ಗೆ ಆಗತ್ಯ ತನಿಖೆ ನಡೆಸಿದರೆ ಈ ಅಕ್ರಮಗಳ ಮೂಲ ಹೊರ ಬರುತ್ತದೆ. ನಾಂಗಾಲದಲ್ಲಿ ಈ ರೀತಿ ಬೆಟ್ಟವನ್ನು ಅಗೆದು ವಿಲ್ಲಾಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇತ್ತ ಬಾಳುಗೋಡುವಿನಲ್ಲಿ ೩೦ ಎಕರೆ ಕಾಫಿ ತೋಟ, ಗದ್ದೆಯ ಜಾಗದಲ್ಲಿ ಬೃಹತ್ ವಿಲ್ಲಾ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಂತಹ ಪ್ರಕೃತಿ ವಿರೋಧಿ, ನಿಯಮ ಬಾಹಿರ ಕೆಲಸಗಳ ವಿರುದ್ಧ ಪರಿಸರ, ನೆಲ, ಜಲ ಉಳಿಸಲು ಉಗ್ರ ಹೋರಾಟ ಅನಿವಾರ್ಯ”
-ರಘು ಮಾಚಯ್ಯ, ಕಾರ್ಯದರ್ಶಿ, ಕಾವೇರಿ ಸೇನೆ
” ತಮ್ಮ ಗ್ರಾಮದ ಅಳಿವು ಉಳಿವಿನ ಜೊತೆಗೆ ಬ್ರಹ್ಮಗಿರಿ ವನ್ಯಜೀವಿ ಅರಣ್ಯದ ಉಳಿವಿನ ಪ್ರಶ್ನೆ ಎದುರಾಗಿದೆ. ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ. ತನಿಖೆ ನಡೆಸಿ ನಿಯಮ ಉಲ್ಲಂಘನೆಯಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.”
-ಪುಚ್ಚಿಮಂಡ ಮಾಚಯ್ಯ, ಸ್ಥಳೀಯರು
” ನಿಯಮಬಾಹಿರವಾಗಿ ವನ್ಯಜೀವಿ ಅರಣ್ಯದ ಸಮೀಪವೇ ಬೃಹತ್ ವಿಲ್ಲಾ ನಿರ್ಮಾಣ ಕೆಲಸ ನಡೆಯುತ್ತಿದೆ. ಇಂತಹ ಕಾಮಗಾರಿಗಳಿಂದ ಪರಿಸರದ ಮೇಲೆ ನೇರ ಪರಿಣಾಮ ಬೀರಲಿದೆ. ಜಿಲ್ಲಾಧಿಕಾರಿಗಳು, ಕ್ಷೇತ್ರದ ಶಾಸಕರು, ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಎಲ್ಲರನ್ನೂ ಸಂಘಟಿಸಿ ಉಗ್ರ ಹೋರಾಟ ನಡೆಸಲಾಗುವುದು.”
– ಕರ್ನಲ್ ಮುತ್ತಣ್ಣ, ಅಧ್ಯಕ್ಷ,ಕೊಡಗು ವನ್ಯ ಜೀವಿಗಳ ಸಂಘ




