ಎ.ಎಚ್.ಗೋವಿಂದ
ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯ ಗ್ರಾಮದ ಹಲವು ಮನೆಗಳು ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯದ ಪೌಚ್‌ಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಇದಲ್ಲದೆ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಇವರಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು ಮದ್ಯದ ಚಟಕ್ಕೆ ದಾಸರಾಗಿದ್ದಾರೆ ಎಂಬ ದೂರು ಕೇಳಿಬಂದಿದೆ.
ಕೂಲಿ ಕಾರ್ಮಿಕರು ಸಂಜೆ ವೇಳೆ ಮದ್ಯಪಾನಕ್ಕಾಗಿ ಹಣ ಇಲ್ಲದಿದ್ದಾಗ ಮೀಟರ್ ಬಡ್ಡಿಗೆ ಸಾಲ ಪಡೆಯುತ್ತಾರೆ. ಸಂಜೆ ೯೦ ರೂ. ಪಡೆದು ಬೆಳಿಗ್ಗೆ ಕೂಲಿ ಕೆಲಸ ಮುಗಿಸಿ ಬಂದು ಕೂಲಿ ಹಣದಲ್ಲಿ ವಾಪಸ್ ಕೊಡುವ ವ್ಯವಸ್ಥೆಯಿದೆ.
ಮದ್ಯ ವ್ಯಸನಿಗಳಾದ ಕೂಲಿ ಕಾರ್ಮಿಕರು ಗ್ರಾಮದ ಅಂಗಡಿ ಹಾಗೂ ಮನೆಗಳಲ್ಲಿ ಸಿಗುವ ಮದ್ಯದ ಬಾಟಲಿಗಳನ್ನು ತರುತ್ತಾರೆ. ಬಸ್ ನಿಲ್ದಾಣದ ಜಗುಲಿಕಟ್ಟೆಯ ಮೇಲೆ ಕುಳಿತು ಮದ್ಯ ಸೇವಿಸಿ ಖಾಲಿ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಪೊಲೀಸ್, ಅಬಕಾರಿ, ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಯಾರೊಬ್ಬರೂ ಅಕ್ರಮ ಮದ್ಯ ಮಾರಾಟವನ್ನು ಸ್ಥಗಿತಗೊಳಿ ಸಲು ಮುಂದಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಪಟ್ಟಣದಲ್ಲಿ ಕಳೆದ ವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್.ಮಂಜು ನಾಥ್ ಅವರು ಪ್ರಸ್ತಾಪಿಸಿದ್ದರು. ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ವಹಿಸಿ ಎಂದು ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಅಲ್ಲದೆ ಕೂಲಿ ಕಾರ್ಮಿಕರು ದುಡಿದ ಹಣವನು ಮದ್ಯಕ್ಕೆ ಬಳಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೆ, ಗ್ರಾಮದಲ್ಲಿ ಶಾಸಕರ ಸೂಚನೆಗೂ ಯಾವುದೇ ಕಿಮ್ಮತ್ತು ಇಲ್ಲದೆ ಮೊದಲಿಗಿಂತಲ್ಲೂ ಹೆಚ್ಚಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
” ಅಕ್ರಮವಾಗಿ ಮದ್ಯಮಾರಾಟ ಮಾಡುವವರ ವಿರುದ್ಧ ಗ್ರಾಮ ಪಂಚಾಯಿತಿಯಿಂದ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಆದರೆ, ತಡೆಗಟ್ಟಬೇಕು ಎಂದು ಸಂಬಂಧಪಟ್ಟ ಅಬಕಾರಿ ಇಲಾಖೆಯ ವರಿಗೆ ಪತ್ರ ಬರೆಯಲಾಗಿದೆ.”
-ಜುನೈದ್ ಅಹಮ್ಮದ್, ಪಿಡಿಒ
” ಗ್ರಾಮದ ಕೆಲವು ಅಂಗಡಿಗಳು ಮತ್ತು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದರ ಬಗ್ಗೆ ಸಂಬಂಧ ಪಟ್ಟವರ ಗಮನಕ್ಕೆ ತರಲಾಗಿದೆ. ಆಗೊಮ್ಮೆ ಹೀಗೊಮ್ಮೆ ಅಬಕಾರಿ ಹಾಗೂ ಪೊಲೀ ಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗುತ್ತಿದ್ದಾರೆ. ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಇತ್ತ ಗಮನಹರಿಸಿ ಕೂಲಿ ಕಾರ್ಮಿಕರ ಹಿತ ಕಾಪಾಡಬೇಕು.”
-ಕೃಷ್ಣ, ಪಾಳ್ಯ





