ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ ಕಾಳಪ್ಪ ತಿಳಿಸಿದರು. ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಕಾಳಪ್ಪರವರ ಜಮೀನಿನಲ್ಲಿ ನಡೆದ ದೇಸಿ ಬೀಜ ತಳಿಗಳ ಕ್ಷೇತ್ರ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಮನೆಯಲ್ಲೂ ರೈತರು ದೇಸಿ ಬಿತ್ತನೆ ಬೀಜಗಳ ಸಂಗ್ರಹ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರಿಗೆ ತೊಂದರೆ ಎದುರಾಗಲಿದೆ. ಖಾಸಗಿ ಕಂಪೆನಿಗಳು ಬಿತ್ತನೆ ಬೀಜದ ಜೊತೆಗೆ ಔಷಧಿ, ರಸಗೊಬ್ಬರಗಳನ್ನು ನೀಡಿ ಹಣ ಮಾಡಿಕೊಂಡು ವಿಷಯುಕ್ತ ಆಹಾರವನ್ನು ಉತ್ಪಾದಿಸಲು ಪ್ರೋತ್ಸಾಹ ನೀಡುತ್ತಿವೆ. ಇದರಿಂದ ಇಂದು ಹಳ್ಳಿಗಳಲ್ಲಿ ಗೊಬ್ಬರ ಔಷಧಿ ಅಂಗಡಿಗಳ ಜೊತೆಜೊತೆಗೆ ಆಸ್ಪತ್ರೆಗಳು ತೆರೆಯಲಾರಂಭಿಸಿವೆ. ಆದ್ದರಿಂದ ಇದನ್ನು ಅರಿತುಕೊಂಡು ದೇಸಿ ಬೀಜಗಳ ಸಂರಕ್ಷಣೆ ಮಾಡುವುದರೊಂದಿಗೆ ಸಾವಯವ ಕೃಷಿ ಮೂಲಕ ವಿಷಮುಕ್ತ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಿ ಬದುಕಬೇಕು ಎಂದು ತಿಳಿಸಿದರು.
ಗೋಪಾಲ್ ಸಂಸ್ಥೆಯ ಸಂದೀಪ್ ಮಾತನಾಡಿ, ದೇಸಿ ಬೀಜಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವುದರ ಮೂಲಕ ರೋಗ ನಿರೋಧಕ ಸಸ್ಯಗಳನ್ನು ಅಭಿವೃದ್ಧಿಪಡಿಸಬಹುದು. ಬೀಜಗಳ ಸಂರಕ್ಷಣೆ ಮತ್ತು ವೈಜ್ಞಾನಿಕ ವಿಧಾನವನ್ನು ಅರಿತು ಬೀಜಗಳ ಸಂರಕ್ಷಣೆಗೆ ಮುಂದಾಗಬೇಕು. ಆಗ ಮಾತ್ರ ಉತ್ತಮ ಬಿತ್ತನೆ ಬೀಜಗಳು ಲಭ್ಯವಾಗುತ್ತವೆ ಎಂದು ತಿಳಿಸಿದರು.
ಕೆ.ಪಿ.ಆಶಾ ಕುಮಾರಿ ಮಾತನಾಡಿ, ತಂಬಾಕು ಬೆಳೆಯುತ್ತಿದ್ದ ಕಾಳಪ್ಪ, ತಮ್ಮ ಕಡಿಮೆ ಜಮೀನಿನಲ್ಲಿ ಸಾವಯವ ಕೃಷಿಗೆ ಮುಂದಾಗಿದ್ದು, ಇಂದು ರಾಜ್ಯಾದ್ಯಂತ ದೇಸಿ ಬೀಜಗಳನ್ನು ಸಂರಕ್ಷಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಈ ಕೆಲಸ ಅವರಿಗೆ ಆರ್ಥಿಕ ಅಭಿವೃದ್ಧಿಯ ಜೊತೆಗೆ ಉತ್ತಮ ಹೆಸರನ್ನು ಕೂಡ ತಂದುಕೊಟ್ಟಿದೆ. ಅನ್ನ ಇಕ್ಕುವ ತಾಯಿಗೆ ರಾಸಾಯನಿಕ ವಿಷಯವನ್ನು ಹಾಕುವ ಪದ್ಧತಿಯನ್ನು ಕೈಬಿಟ್ಟು ಭೂಮಿಯ ಉತ್ಕ ಷ್ಟತೆಯನ್ನು ಕಾಪಾಡಿಕೊಂಡು ಬರಬೇಕು ಎಂದು ತಿಳಿಸಿದರು.
ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ಮಾತನಾಡಿ, ಜನರು ಇಂದು ಕಾರ್ಪೊರೇಟ್ ಸೆಕ್ಟರ್‌ನಿಂದ ವ್ಯವಸಾಯದ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಸೂಕ್ತ ಸಲಹೆ ಮತ್ತು ಮಾರ್ಗದರ್ಶನದ ಅಗತ್ಯತೆ ಎಲ್ಲರಿಗೂ ಇದೆ. ಮುಂದಿನ ದಿನಗಳಲ್ಲಿ ಆಹಾರ ಬೇಳೆಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ದೊರಕಲಿದೆ ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಲೋಕನಾಥ್, ದೇಶಿತಳಿ ಸಂರಕ್ಷಕ ಶಂಕರ್, ಹರ್ಷ, ರವಿ, ಕಾವ್ಯ, ಮತ್ತಿತರರು ಹಾಜರಿದ್ದರು.
ಸನ್ಮಾನ, ಮಾಹಿತಿ: ವಿಜ್ಞಾನ ಲೇಖಕಿ ಸುಧಾ ಸಂದೀಪ್, ಕೆ.ಪಿ.ಆಶಾಕುಮಾರಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರಿಗೆ ದೇಸಿ ಬಿತ್ತನೆ ಬೀಜಗಳ ಮಾರಾಟ, ಪ್ರದರ್ಶನ, ದೇಸಿ ತಳಿಗಳ ಸಂರಕ್ಷಣೆಯ ಪ್ರಾತ್ಯಕ್ಷಿತೆಯ ಮಾಹಿತಿ ನೀಡಲಾಯಿತು.




