Mysore
20
overcast clouds
Light
Dark

ಹುಣಸೂರು: 7 ಏಕೋಪಾಧ್ಯಾಯ ಶಾಲೆಗಳು!: 25 ವರ್ಷ ತುಂಬಿರುವ ಬೀರತಮ್ಮನಹಳ್ಳಿ ಶಾಲೆಗೂ ಒಬ್ಬರೇ ಶಿಕ್ಷಕ

• ದಾ.ರಾ.ಮಹೇಶ್

55- ಕಳೆದ 10 ವರ್ಷಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಮುಚ್ಚಿ, ಹೋದ ಶಾಲೆಗಳ ಸಂಖ್ಯೆ
729- 2023-24ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದವರು
154- 2023-24ನೇ ಸಾಲಿನಲ್ಲಿ ಏಕೋಪಾಧ್ಯಾಯ ಕಿರಿಯ ಪ್ರಾಥಮಿಕ ಶಾಲೆಗಳು
25- 2023-24ನೇ ಸಾಲಿನಲ್ಲಿ ಏಕೋಪಾಧ್ಯಾಯ ಹಿರಿಯ ಪ್ರಾಥಮಿಕ ಶಾಲೆಗಳು
07- 2023-24ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಮಕ್ಕಳು ಪ್ರವೇಶವನ್ನೇ ಪಡೆದಿಲ್ಲ

ವೀರನಹೊಸಹಳ್ಳಿ: ಹುಣಸೂರು ತಾಲ್ಲೂಕಿನಲ್ಲಿ ಒಂದಲ್ಲ ಎರಡಲ್ಲ… 7 ಏಕೋಪಾಧ್ಯಾಯ ಶಾಲೆಗಳಿವೆ. ಅದರಲ್ಲಿಯೂ ಒಂದು ಶಾಲೆ ಆರಂಭವಾಗಿ 25 ವರ್ಷಗಳು ಕಳೆದಿವೆ. ಆದರೆ, ಒಬ್ಬರೇ ಶಿಕ್ಷಕ ಇದ್ದಾರೆ.

ಚಿಕ್ಕಹೆಣ್ಣೂರು, ಉಡುವೆಪುರ, ಹಿರಿಕ್ಯಾತನಹಳ್ಳಿ ಗೇಟ್, ಕೋಣನ ಹೊಸಹಳ್ಳಿ, ಬೀರತಮ್ಮನಹಳ್ಳಿ ಗಿರಿಜನ ಹಾಡಿ, ಹೆಮ್ಮಿಗೆ ಗಿರಿಜನ ಹಾಡಿ ನೇಗತ್ತೂರು ಗ್ರಾಮಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಕೆಲ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಇದ್ದರೂ ಖಾಯಂ ಶಿಕ್ಷಕ ಮಾತ್ರ ಒಬ್ಬರೇ. ಹಾಗಾಗಿ ಇವನ್ನು ಏಕೋಪಾಧ್ಯಾಯ ಶಾಲೆ ಎಂದೇ ಸ್ಥಳೀಯರು ಗುರುತಿಸುತ್ತಾರೆ.

ಹಿರಿಕ್ಯಾತನಹಳ್ಳಿ ಶಾಲೆಯಲ್ಲಿ ಇರುವುದು ಒಬ್ಬ ವಿದ್ಯಾರ್ಥಿ ಮಾತ್ರ. ಅಂದರೆ ವಿದ್ಯಾರ್ಥಿ, ಶಿಕ್ಷಕ ಒಬ್ಬೊಬ್ಬರು ಮಾತ್ರ. ಹಾಗಾಗಿ ಈ ವಿದ್ಯಾರ್ಥಿಗೆ ಸಮೀಪದಲ್ಲಿರುವ ಕೊಳವಿ ಶಾಲೆಯಲ್ಲೇ ಪಾಠ, ಬಿಸಿಯೂಟ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇನ್ನು ಮೂರು ಮಕ್ಕಳು ಇದೇ ಶಾಲೆಗೆ ಸೇರಲಿದ್ದಾರೆ. ನಂತರ ಪಾಠ, ಬಿಸಿಯೂಟ ಎಲ್ಲವೂ ಹಿರಿಕ್ಯಾತನಹಳ್ಳಿ ಶಾಲೆಯಲ್ಲೇ ನಡೆಯಲಿದೆ. ಆದರೆ, ಉಳಿದ 6 ಶಾಲೆಗಳಲ್ಲಿ ಎರಡಂಕಿಗಿಂತ ಹೆಚ್ಚು ಮಕ್ಕಳಿದ್ದಾರೆ ಎಂಬುದು ಸಮಾಧಾನಕರ ಅಂಶ.

ಬೀರತಮ್ಮನಹಳ್ಳಿ ಹಾಡಿ ಶಾಲೆಯು 25 ವರ್ಷಗಳನ್ನು ಪೂರೈಸಿದ್ದರೂ ಒಬ್ಬರೇ ಶಿಕ್ಷಕ ಇರುವುದು ವಿಪರ್ಯಾಸ. ಆದರೆ, 28 ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯ ದಾಸೋಹ ಕಟ್ಟಡ ಶಿಥಿಲವಾಗಿದೆ. ಗ್ರಾಮ ಪಂಚಾಯಿತಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದು, ಅವರು ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರ ಬಿಸಿಯೂಟ, ಉಚಿತ ಸೈಕಲ್, ಸಮವಸ್ತ್ರ, ಪುಸ್ತಕ ವಿತರಣೆ ಮಾಡುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಬರುವುದು ಇಳಿಮುಖವಾಗುತ್ತಿದೆ. ಅದರಲ್ಲಿಯೂ ಕಾಡಂಚಿನ ಪ್ರದೇಶದ ಕೆಲವು ಶಾಲೆಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳಿಲ್ಲದೆ ಕೆಲವು ಶಾಲೆಗಳು ಬೀಗ ಹಾಕಿದ್ದು, ಇನ್ನೂ ಹಲವು ಸರದಿ ಸಾಲಿನಲ್ಲಿವೆ.

ಹುಣಸೂರು ತಾಲ್ಲೂಕಿನ ಹೆಮ್ಮಿಗೆ ಹಾಡಿಯ ಸರ್ಕಾರಿ ಶಾಲೆಯ ಈ ಅವಸ್ಥೆ ಉದಾಹರಣೆ ಅಷ್ಟೆ. ಕಳೆದ 10 ವರ್ಷಗಳಲ್ಲಿ ಅಂದರೆ 2012-13ರಿಂದ 2023-24ನೇ ಸಾಲಿನವರೆಗೆ ಮೈಸೂರು ಜಿಲ್ಲೆಯಲ್ಲಿ 55 ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. 2023-24ನೇ ಸಾಲಿನಲ್ಲಿ 229 ಮಕ್ಕಳು ಶಾಲಾ ಪ್ರವೇಶಕ್ಕೆ ನೋಂದಾಯಿತರಾಗಿದ್ದಾರೆ. ಜಿಲ್ಲೆಯಲ್ಲಿ 25 ಏಕೋಪಾಧ್ಯಾಯ ಸರ್ಕಾರಿ ಶಾಲೆಗಳು ಇವೆ.

ಕೋಟ್ಸ್‌))

ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯ ಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ವಿಧಾನಸಭಾ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿ ಸಚಿವರ ಗಮನ ಸೆಳೆಯುತ್ತೇನೆ.
-ಜಿ.ಡಿ.ಹರೀಶ್ ಗೌಡ, ಶಾಸಕರು, ಹುಣಸೂರು.

ಶಿಕ್ಷಕರ ಕೊರತೆ ನಿವಾರಣೆಯಾಗಲಿ: ಸರ್ಕಾರಿ ಶಾಲೆಗಳಿಂದ ಕನ್ನಡ ಉಳಿದಿದೆ. ಆದರೆ ತಾಲ್ಲೂಕಿನಲ್ಲಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿ ಗಳನ್ನು ನೋಡಿ ಅಯ್ಯೋ ಅನಿಸುತ್ತಿದೆ. ಸರ್ಕಾರ ಕೂಡಲೇ
ಶಿಕ್ಷಕರನ್ನು ತುರ್ತಾಗಿ ನೇಮಕ ಮಾಡಿ ಕನ್ನಡ ಶಾಲೆ ಗಳ ಉಳಿವಿಗಾಗಿ ಶ್ರಮಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಬೀದಿಗಿ ಳಿದು ಹೋರಾಟ ಮಾಡಬೇಕಾಗುತ್ತದೆ.
– ಪುರುಷೋತ್ತಮ್, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ತಾಲ್ಲೂಕು ಘಟಕ.

ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಆತಂಕ: ಖಾಸಗಿ ಶಾಲೆಗಳ ಹಾವಳಿಯ ನಡುವೆ ಗ್ರಾಮೀಣ ಪ್ರದೇಶದಲ್ಲಿ ಬಡ ವರ್ಗದ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು ಸರ್ಕಾರಿ ಶಾಲೆಗ ಳಿಗೆ ಹೋಗುವುದು. ಇಂತಹ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡು ವುದು ಎಷ್ಟು ಸರಿ? ಈಗಲಾದರೂ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು.
-ಚಂದ್ರೇಶ್‌, ಪೋಷಕರು.

ಮೂಲ ಸೌಕರ್ಯಗಳನ್ನು ಒದಗಿಸಿ: ಕಾಡಂಚಿನ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ದೂರದ ಶಾಲೆಗೆ ತೆರಳಲು ಸಾಧ್ಯವಿಲ್ಲ. ಖಾಸಗಿ ಶಾಲೆಗಳಿಗೆ ತೆರಳುವ ಮಂದಿ ವಾಹನದ ವ್ಯವಸ್ಥೆ ಮಾಡಿರುತ್ತಾರೆ. ಸರ್ಕಾರಿ ಶಾಲೆ ಗಳಲ್ಲಿ ಬಹುತೇಕ ಬಡ ವರ್ಗದ ಮಕ್ಕಳೇ ಇದ್ದು, ಅವರು ದೂರದ ಶಾಲೆಗೆ ಹೋಗಲಾಗದೆ ವಿದ್ಯಾಭ್ಯಾಸವನ್ನೇ ಬಿಟ್ಟು ಬಾಲ ಕಾರ್ಮಿಕರಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಕೂಡಲೇ ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು.
-ಗಿರಿಮಾದು, ಅಧ್ಯಕ್ಷರು, ಬೀರತಮ್ಮನಹಳ್ಳಿ ಹಾಡಿ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ

ಖಾಲಿ ಹುದ್ದೆ ಭರ್ತಿಗೆ ಕ್ರಮ: ಎಲ್ಲಾ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡಲು ಎಲ್ಲ ರೀತಿಯ ಪ್ರಯತ್ನ ಗಳನ್ನೂ ಮಾಡಲಾಗುತ್ತಿದೆ. ಆಗಸ್ಟ್ ಅಂತ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಆ ಸಂದರ್ಭದಲ್ಲಿ ಏಕೋಪಾಧ್ಯಾಯ ಶಾಲೆಗಳಿಗೆ ಮೊದಲ ಆದ್ಯತೆಯಲ್ಲಿ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು.
-ಮಹಾದೇವ್‌, ಕ್ಷೇತ್ರ ಶಿಕ್ಷಣಾಧಿಕಾರಿ.