ಸಫಾರಿಗೆ ಬಳಸುತ್ತಿದ್ದ ಸಿಬ್ಬಂದಿ ಬಳಕೆ; ಗ್ರಾಮಗಳಿಗೆ ತೆರಳಿ ವನ್ಯಜೀವಿಗಳಿಂದ ಪಾರಾಗುವ ಕುರಿತು ಜಾಗೃತಿ
ಗುಂಡ್ಲುಪೇಟೆ: ಹುಲಿ ದಾಳಿಯಿಂದ ಕಂಗಾಲಾಗಿರುವ ಹೆಡಿಯಾಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಚಾಲಕರು ಹಾಗೂ ಗೈಡ್ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಗೆ ನಾಲ್ವರು ಬಲಿಯಾಗಿರುವ ಘಟನೆಗಳಿಂದ ಈ ಭಾಗದ ಜನರಲ್ಲಿ ವನ್ಯಜೀವಿಗಳ ಭೀತಿ ಹೆಚ್ಚಾಗಿದೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಕಾರ್ಮಿಕರು ಕೂಲಿ ಕೆಲಸಕ್ಕೆ ಹೋಗಲಾಗದೆ ಜೀವನ ನಿರ್ವಹಣೆಗೆ ಬವಣೆಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ವನ್ಯಜೀವಿಗಳ ದಾಳಿಯಿಂದ ತೊಂದರೆ ಎದುರಿಸುತ್ತಿರುವ ಗ್ರಾಮಗಳು, ಜಮೀನುಗಳಿಗೆ ತೆರಳಿ ಸಾರ್ವ ಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ದಾಳಿ ತಪ್ಪಿಸಿಕೊಳ್ಳುವ ಬಗ್ಗೆ ಜಾಗೃತಿ: ಸಫಾರಿ ವಾಹನಗಳ ೧೪ ಚಾಲಕರು ಹಾಗೂ ೧೫ ಗೈಡ್ ಗಳನ್ನು ಜಾಗೃತಿ ಕಾರ್ಯಕ್ರಮಕ್ಕೆ ಬಳಕೆ ಮಾಡಲಾಗುತ್ತಿದೆ. ಎರಡು ಪ್ರತ್ಯೇಕ ತಂಡಗಳಾಗಿ ರಚಿಸಿ, ಗ್ರಾಮಗಳ ಮನೆಗಳು ಹಾಗೂ ಜಮೀನುಗಳಿಗೆ ತೆರಳಿ, ವನ್ಯಜೀವಿಗಳ ದಾಳಿಯಿಂದ ಪಾರಾಗುವ ವಿಧಾನಗಳನ್ನು ಪ್ರತಿಯೊಬ್ಬರಿಗೂ ತಿಳಿಸಲಾಗುತ್ತಿದೆ.
ರೈತರು ಮೂರು ನಾಲ್ಕು ಜನರ ತಂಡಮಾಡಿಕೊಂಡು ತಮ್ಮ ಜಮೀನುಗಳಿಗೆ ಬೆಳಿಗ್ಗೆ ೯ರ ನಂತರ ಹೋಗಬೇಕು. ಸಂಜೆ ಕತ್ತಲಾಗುವ ಮೊದಲೇ ೫ ಗಂಟೆ ಒಳಗೆ ಮನೆಗಳಿಗೆ ಮರಳಬೇಕು. ರಾತ್ರಿ ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಹೊರಗೆ ಹೋಗಬಾರದು ಎಂದು ಮನವರಿಕೆ ಮಾಡುತ್ತಿದ್ದಾರೆ. ಯಾವುದೇ ಜಮೀನು ಇಲ್ಲವೇ ರಸ್ತೆಗಳಲ್ಲಿ ಹುಲಿ ಹೆಜ್ಜೆಗಳು ಕಂಡುಬಂದಲ್ಲಿ ತಕ್ಷಣ ಇಲಾಖೆಯ ಗಮನಕ್ಕೆ ತರುವಂತೆ ತಿಳಿಸುತ್ತಿದ್ದಾರೆ.
ಜಮೀನು ಕೆಲಸಗಳಿಗೆ ಭದ್ರತೆ: ತೋಟಗಳಲ್ಲಿ ಬಾಳೆ ಮುಂತಾದ ಬೆಳೆ ಕಟಾವು ಮಾಡಬೇಕಾದರೆ ಅಲ್ಲಿಗೆ ಅರಣ್ಯ ಸಿಬ್ಬಂದಿ ಮುಂಚಿತವಾಗಿ ತೆರಳಿ ಕೂಂಬಿಂಗ್ ನಡೆಸಿ ಅಲ್ಲಿ ಯಾವುದೇ ವನ್ಯಜೀವಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಡುತ್ತಿದ್ದಾರೆ. ಇದರಿಂದ ರೈತರು ನಿರಾತಂಕವಾಗಿ ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
” ವನ್ಯಜೀವಿಗಳು ಅನಿರೀಕ್ಷಿತವಾಗಿ ದಾಳಿ ನಡೆಸುವುದರಿಂದ ಪಾರಾಗಲು ರೈತರು ಒಬ್ಬೊಬ್ಬರೇ ಜಮೀನುಗಳಿಗೆ ಹೋಗದಂತೆ, ಕತ್ತಲಾಗುವುದರೊಳಗೆ ಮನೆಗಳಿಗೆ ವಾಪಸಾಗುವಂತೆ ಜಾಗೃತಿ ಮೂಡಿಸಲಾಗುತ್ತಿದೆ.”
-ಎನ್.ಪಿ.ನವೀನ್ ಕುಮಾರ್, ಎಸಿಎಫ್, ಬಂಡೀಪುರ ಉಪವಿಭಾಗ
ಮುಖವಾಡ ವಿತರಣೆ: ಹಿಂದೆ ಪಶ್ಚಿಮ ಬಂಗಾಳದ ಸುಂದರಬನ ಉದ್ಯಾನ ವ್ಯಾಪ್ತಿಯಲ್ಲಿ ಹುಲಿಗಳು ಮನುಷ್ಯರನ್ನು ಹಿಂದಿನಿಂದ ದಾಳಿ ಮಾಡಿ ಕೊಲ್ಲುತ್ತಿದ್ದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಮನುಷ್ಯರ ತಲೆಯ ಹಿಂಭಾಗಕ್ಕೆ ಮುಖವಾಡ ಧರಿಸುವಂತೆ ಮಾಡುವ ಮೂಲಕ ಹುಲಿಗಳಿಗೆ ಗೊಂದಲ ಮೂಡಿಸಿ ಹುಲಿ ದಾಳಿಯಿಂದ ಪಾರು ಮಾಡಲಾಗುತ್ತಿತ್ತು. ಅದೇ ರೀತಿ ಅರಣ್ಯ ಇಲಾಖೆಯು ಹೆಡಿಯಾಲ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಅದೇ ವಿಧಾನ ಅಳವಡಿಸಿಕೊಂಡಿದೆ. ಪ್ರತಿಯೊಬ್ಬರಿಗೂ ಮುಖವಾಡವನ್ನು ಹಂಚುತ್ತಿದೆ.





