ಕೆ.ಬಿ.ರಮೇಶನಾಯಕ
ಈ ಬಾರಿಯೂ ಆಡಳಿತಾಧಿಕಾರಿಯಿಂದಲೇ ಬಜೆಟ್ ಮಂಡನೆ
ಯಾವುದೇ ಕ್ಷಣದಲ್ಲಿ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಜಾರಿ
ಮೈಸೂರು: ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆ(ಎಂಸಿಸಿ)ಯನ್ನು ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’(ಬಿಎಂಪಿಪಿ)ಯಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಜನರ ನಿರೀಕ್ಷೆಯೂ ಹೆಚ್ಚಾಗಿದೆ.
‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಎಂದು ಜ.೮ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದ್ದು,ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ನೀಡಿದ್ದ ೩೦ ದಿನಗಳ ಗಡುವು ಮುಗಿದಿದೆ. ಹೀಗಾಗಿ, ಯಾವುದೇ ಕ್ಷಣದಲ್ಲಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದರೆ ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ಯಾಗಿ ರೂಪುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ಮಹಾನಗರ ಪಾಲಿಕೆಗೆ ಸೀಮಿತವಾಗಿ ಬಜೆಟ್ ಮಂಡಿಸುವ ಬದಲಿಗೆ ಬೃಹತ್ ಪಾಲಿಕೆಗೆ ಸೇರ್ಪಡೆಗೊಳ್ಳುವ ಬಡಾವಣೆಗಳು, ಹಳ್ಳಿಗಳನ್ನೂ ಪರಿಗಣಿಸಿ ಬಜೆಟ್ ತಯಾರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಒಂದುವೇಳೆ ಬಜೆಟ್ ಮಂಡಿಸಿದ ನಂತರ ಅಂತಿಮ ಆದೇಶ ಹೊರ ಬಿದ್ದರೆ ಪರಿಷ್ಕೃತ ಬಜೆಟ್ ಮಂಡಿಸಲು ಉದ್ದೇಶಿಸಲಾಗಿದೆ.
೧,೦೦೦ ಕೋಟಿರೂ. ನಿರೀಕ್ಷೆ: ಬಿಎಂ ಪಿಪಿ ವ್ಯಾಪ್ತಿಯಲ್ಲಿರುವ ಹಲವಾರು ಪ್ರದೇಶಗಳು ಇನ್ನೂ ಅಭಿವೃದ್ಧಿಯ ಹಾದಿಯಲ್ಲಿದ್ದು, ಮೂಲಸೌಕರ್ಯ ಕಲ್ಪಿಸಲು ಸಾವಿರಾರು ಕೋಟಿ ರೂ.ಗಳ ಅವಶ್ಯಕತೆ ಇದೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ೧,೦೦೦ ಕೋಟಿ ರೂ. ಮೀಸಲಿಡಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಆದ್ದರಿಂದ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೈಸೂರಿನ ಅಭಿವೃದ್ಧಿಗೆ ಎಷ್ಟು ಅನುದಾನ ದೊರೆಯಲಿದೆ ಎಂಬ ಕುತೂಹಲ ಮೂಡಿದೆ. ರಾಜ್ಯ ಸರ್ಕಾರದ ಘೋಷಣೆಯ ಆಧಾರದ ಮೇಲೆ ನಗರ ಪಾಲಿಕೆಯ ಬಜೆಟ್ ಗಾತ್ರವೂ ಹಿಗ್ಗುವ ನಿರೀಕ್ಷೆ ಇದೆ.
೨೦೨೪-೨೫ನೇ ಸಾಲಿನಲ್ಲಿ ಒಟ್ಟು ೧೨೨೮.೭೨ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಾಗಿತ್ತು. ನಗರದ ಬೆಳವಣಿಗೆಗೆ ಪೂರಕವಾಗಿ ಹೊಸದಾಗಿ ನಗರದ ನಾಲ್ಕು ದಿಕ್ಕುಗಳಲ್ಲಿ ಘನತ್ಯಾಜ್ಯ ಹಾಗೂ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ, ಹೊಸ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಉದ್ಯಾನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಮೂಲಸೌಲಭ್ಯ ಕಲ್ಪಿಸಬೇಕಾಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ.
ನಗರ ಪಾಲಿಕೆಯ ಅಧಿಕಾರಾವಧಿ ಮುಕ್ತಾಯಗೊಂಡು ೨ ವರ್ಷಗಳು ಕಳೆದಿದ್ದು, ಪಾಲಿಕೆ ಆಡಳಿತಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರು ಕಳೆದ ಬಾರಿ ಬಜೆಟ್ ಮಂಡಿಸಿದ್ದರು. ಈ ಬಾರಿಯೂ ಪ್ರಾದೇಶಿಕ ಆಯುಕ್ತರೆ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಮಾಜಿ ಮಹಾಪೌರರು, ಮಾಜಿ ಉಪ ಮಹಾಪೌರರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಗರ ಪಾಲಿಕೆ ಅಧಿಕಾರಿಗಳು ಸಭೆ ನಡೆಸಿ ಸಲಹೆಗಳನ್ನು ಸ್ವೀಕಾರ ಮಾಡಿದ್ದಾರೆ.
ಬಿಎಂಪಿಪಿ ವ್ಯಾಪ್ತಿಯ ಪ್ರದೇಶಗಳು:
ಬಿಎಂಪಿಪಿಗೆ ಹಾಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳು ಹಾಗೂ ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ, ಬೋಗಾದಿ ಪಟ್ಟಣ ಪಂಚಾಯಿತಿಗಳು. ಚಾಮುಂಡಿಬೆಟ್ಟ ಗ್ರಾಪಂ(ಪೂರ್ಣ), ಆಲನಹಳ್ಳಿ ಗ್ರಾಪಂ ವ್ಯಾಪ್ತಿಯ ಆಲನಹಳ್ಳಿ, ಲಲಿತಾದ್ರಿಪುರ. ಸಿದ್ದಲಿಂಗಪುರ ಗ್ರಾಪಂ ವ್ಯಾಪ್ತಿಯ ಸಿದ್ದಲಿಂಗಪುರ, ಬೆಲವತ್ತ, ಕೆಸರೆ, ಮೇಟಗಳ್ಳಿ. ಇಲವಾಲ ಗ್ರಾಪಂ ವ್ಯಾಪ್ತಿಯ ಇಲವಾಲ, ಕರಕನಹಳ್ಳಿ, ಮೈದನಹಳ್ಳಿ, ಮೇಗಳಾಪುರ. ಧನಗಳ್ಳಿ ಗ್ರಾಪಂ ವ್ಯಾಪ್ತಿಯ ಧನಗಳ್ಳಿ, ಯಡಹಳ್ಳಿ, ಕೆಂಚಲಗೂಡು, ಹಾಲಾಳು, ಚೌಡಹಳ್ಳಿ (ಕೋಟೆಹುಂಡಿ). ಮಲ್ಲಹಳ್ಳಿ (ಬೀರಿಹುಂಡಿ) ಗ್ರಾಪಂ ವ್ಯಾಪ್ತಿಯ ಮಲ್ಲಹಳ್ಳಿ-ಬೀರಿಹುಂಡಿ, ಗೋಹಳ್ಳಿ, ಕುಮಾರಬೀಡು, ಬಲ್ಲಹಳ್ಳಿ. ನಾಗನಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ಯಾದನಹಳ್ಳಿ ಮತ್ತು ನಾಗವಾಲ ಗ್ರಾಪಂ ವ್ಯಾಪ್ತಿಯ ನಾಗವಾಲ, ಬೊಮ್ಮನಹಳ್ಳಿ, ಹುಯಿಲಾಳು ಗ್ರಾಮಗಳು ಸೇರ್ಪಡೆಗೊಳ್ಳಲಿವೆ
” ೧೪ ಲಕ್ಷ ಜನಸಂಖ್ಯೆ ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು ೬೫ ವಾರ್ಡ್ಗಳು ಇದ್ದು, ೨೦೧೧ರ ಜನಗಣತಿ ಪ್ರಕಾರ ನಗರದಲ್ಲಿ ೯,೨೦,೫೫೦ ಜನಸಂಖ್ಯೆ ಇದೆ. ಪ್ರಸ್ತುತ ೧೧,೪೬,೦೬೯ ಜನಸಂಖ್ಯೆಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಗ್ರೇಟರ್ ಮೈಸೂರು ವ್ಯಾಪ್ತಿಯ ಪ್ರದೇಶದಲ್ಲಿ ೧೪,೧೬,೬೭೧ ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ. ಬಿಎಂಪಿಪಿ ರಚನೆಯ ನಂತರ ೧೪ ಲಕ್ಷ ಜನಸಂಖ್ಯೆ ಹಾಗೂ ಆ ಪ್ರದೇಶಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸುವ ಅವಶ್ಯಕತೆ ಇದೆ.”
” ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಗೆ ಇನ್ನೂ ಅಂತಿಮ ಆದೇಶ ಹೊರಬಿದ್ದಿಲ್ಲದೆ ಇರುವ ಹಿನ್ನೆಲೆಯಲ್ಲಿ ಈ ಬಾರಿಯೂ ಸಹಮೈಸೂರು ಮಹಾನಗರ ಪಾಲಿಕೆಗೆ ಸೀಮಿತವಾಗಿ ಬಜೆಟ್ ಮಂಡಿಸಲಾಗುವುದು.”
-ಶೇಖ್ ತನ್ವೀರ್ ಆಸಿಫ್, ಆಯುಕ್ತರು, ಮೈಸೂರು ಮಹಾ ನಗರಪಾಲಿಕೆ



