Mysore
25
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ನಂಜನಗೂಡು: ಹುಳು ಹಿಡಿಯುತ್ತಿರುವ ಬಿಸಿಯೂಟದ ಅಕ್ಕಿ

ಶ್ರೀಧರ್ ಆರ್.ಭಟ್ಟ

ಚಿಕ್ಕಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಘಟನೆ

ಹುಳು ಹಿಡಿದ ಅಕ್ಕಿಯನ್ನೇ ಬಳಸುತ್ತಿದ್ದಾರೆ ಎಂಬ ಆರೋಪ

ಪೋಷಕರ ಆಕ್ರೋಶಕೆ ಮುಖ್ಯ ಶಿಕ್ಷಕರ ತಗಾದೆ

ನಾವು ಅಕ್ಕಿ-ಬೇಳೆ ಖರೀದಿದಾರರಲ್ಲ ಎಂದ ಮುಖ್ಯ ಶಿಕ್ಷಕರು

 

ನಂಜನಗೂಡು: ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಸರಬರಾಜು ಮಾಡಿದ ಅಕ್ಕಿ ಹುಳು ಹಿಡಿಯಲಾರಂಭಿಸಿದ್ದು, ಹುಳು ಹಿಡಿದ ಅಕ್ಕಿಯಲ್ಲಿ ಮಾಡಿದ ಅನ್ನವನ್ನೇ ಮಕ್ಕಳಿಗೆ ಉಣಬಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶನಿವಾರ ಬೆಳಿಗ್ಗೆ ತಯಾರಿಸಿದ ಉಪಾಹಾರದಲ್ಲಿ ಹುಳುಗಳನ್ನು ಕಂಡ ತಾಲ್ಲೂಕಿನ ಚಿಕ್ಕಹೊಮ್ಮ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಆಕ್ರೋಶ ವ್ಯಕ್ತಪಡಿಸಿ, ತಮ್ಮ ಪೋಷಕರನ್ನು ಕರೆ ತಂದು ತೋರಿಸಿದ್ದಾರೆ.

ನಂತರ ಪೋಷಕರು ಮುಖ್ಯಶಿಕ್ಷಕರಲ್ಲಿ ಹುಳು ಹಿಡಿದ ಆಹಾರನ್ನೇಕೆ ಮಕ್ಕಳಿಗೆ ತಿನ್ನಿಸುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ, ಮುಖ್ಯಶಿಕ್ಷಕರು ಹಾಗೂ ಪೋಷಕರ ಮಧ್ಯೆ ವಾಗ್ವಾದ ನಡೆದಿದೆ.

ನಮಗೆ ನೀಡಿದ ದವಸ-ಧಾನ್ಯಗಳಿಂದ ನಾವು ಮಕ್ಕಳಿಗೆ ಆಹಾರ ಸಿದ್ಧಪಡಿಸಿ ನೀಡುತ್ತೇವೆ. ನಾವು ಅಕ್ಕಿ, ಬೇಳೆ ಖರೀದಿದಾರರಲ್ಲ ಎಂದು ಮುಖ್ಯಶಿಕ್ಷಕರು ವಾದಿಸಿದರು. ಆಗ ಪೋಷಕರು ನಿಮ್ಮ ಮಕ್ಕಳಿಗಾದರೆ ಹುಳು ಹಿಡಿದ ಅಕ್ಕಿಯ ಆಹಾರವನ್ನೇ ಬಡಿಸುತ್ತೀರಾ ಎಂದು ಪ್ರಶ್ನಿಸಿದಾಗ ಮುಖ್ಯಶಿಕ್ಷಕರು ಉತ್ತರಿಸಲಾಗದೆ ತಗಾದೆ ತೆಗೆದರು ಎಂಬುದು ಪೋಷಕರ ಆರೋಪವಾಗಿದೆ.

ಹುಳು ಹಿಡಿದ ಆಹಾರ ಪದಾರ್ಥಗಳ ಕುರಿತು ಮಾಹಿತಿ ನೀಡಲು ಕ್ಷೇತ್ರ ಶಿಕ್ಷಣಾಽಕಾರಿಗಳಿಗೆ ಕರೆ ಮಾಡಿದರೆ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ದೂರಿದ ಚಿಕ್ಕಹೊಮ್ಮ ಗ್ರಾಮದ ಪೋಷಕರು, ನಾವು ಇನ್ಯಾರಿಗೆ ದೂರು ನೀಡಬೇಕು ಎಂದು ಅಲವತ್ತುಕೊಂಡರು.

ತಾಲ್ಲೂಕಿನಾದ್ಯಂತ ಅನೇಕ ಶಾಲೆಗಳಲ್ಲಿ ಈಗ ಲಭ್ಯವಿರುವ ಅಕ್ಕಿ, ಗೋಧಿ, ಬೇಳೆಗಳು ಹುಳು ಹಿಡಿಯಲಾರಂಭಿಸಿದ್ದು, ಇದು ಆಗಲೇ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದರೂ ಆಹಾರ ಸರಬರಾಜು ಮಾಡುವವರೊಡನೆ ಶಾಮೀಲಾಗಿರುವುದರಿಂದ ನಾವೇನೂ ಮಾಡಲಾಗುತ್ತಿಲ್ಲ ಎಂದು ಮತ್ತೊಂದು ಶಾಲೆಯ ಮುಖ್ಯೋಪಾಧ್ಯಾಯರು ಪತ್ರಿಕೆಯೊಂದಿಗೆ ತಮ್ಮ ದುಗುಡವನ್ನು ಹಂಚಿಕೊಂಡರು.

ಶಾಲೆಗಳಿಗೆ ಈ ಬಾರಿ ಮಾರ್ಚ್ ತಿಂಗಳ ಕೊನೆಯಲ್ಲಿ ೩ ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೇಸಿಗೆ ರಜೆ ಇದ್ದುದರಿಂದ ಮತ್ತು ಮಳೆ ಬಂದದ್ದರಿಂದ ದವಸ-ಧಾನ್ಯಗಳು ಹುಳು ಹಿಡಿದಿವೆ ಎನ್ನುವ ತಾಲ್ಲೂಕಿನ ಅನೇಕ ಶಾಲೆಗಳ ಮುಖ್ಯೋಪಾಧ್ಯಾಯರು, ಈ ಬಗ್ಗೆ ಪೋಷಕರಷ್ಟೆ ಧ್ವನಿ ಎತ್ತಬೇಕು ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

” ಹುಳು ಹಿಡಿದ ಪದಾರ್ಥಗಳಿಂದ ಸಿದ್ಧಪಡಿಸಿದ ಆಹಾರವನ್ನು ಮಕ್ಕಳಿಗೆ ನೀಡುತ್ತಿರುವುದು ನಿಮ್ಮಿಂದಾಗಿ ನನ್ನ ಗಮನಕ್ಕೆ ಬಂದಿದೆ. ಅವುಗಳನ್ನು ವಾಪಸ್ ಮಾಡುವಂತೆ ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಆದೇಶಿಸುತ್ತೇನೆ.”

-ಜವರೇಗೌಡ, ಡಿಡಿಪಿಐ

Tags:
error: Content is protected !!