Mysore
28
clear sky

Social Media

ಭಾನುವಾರ, 04 ಜನವರಿ 2026
Light
Dark

ಅವಧಿ ಮುಗಿದ ಮಾತ್ರೆ ನೀಡಿದ ಆಸ್ಪತ್ರೆ: ರೋಗಿ ಅಸ್ವಸ್ಥ..!

ಕೆ.ಬಿ.ಶಂಶುದ್ದೀನ್

ಆಸ್ಪತ್ರೆ, ಮೆಡಿಕಲ್ ಶಾಪ್‌ಗಳನ್ನು ಪರಿಶೀಲಿಸಿ ಕ್ರಮಕ್ಕೆ ಸಾರ್ವಜನಿಕರ ಆಗ್ರಹ 

ಕುಶಾಲನಗರ: ಖಾಸಗಿ ಆಸ್ಪತ್ರೆಯಲ್ಲಿ ನೀಡಿದ ಅವಧಿ ಮುಗಿದ ಮಾತ್ರೆ ಸೇವಿಸಿ ರೋಗಿ ಒಬ್ಬರು ಅಸ್ವಸ್ಥಗೊಂಡ ಘಟನೆ ಕುಶಾಲನಗರದ ಗೋಪಾಲ್ ಸರ್ಕಲ್‌ನಲ್ಲಿ ನಡೆದಿದೆ.

ಆಸ್ಪತ್ರೆಯ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.  ಗೋಪಾಲ್ ಸರ್ಕಲ್‌ನ ೫೫ ವರ್ಷದ ಮಹಿಳೆಯೊಬ್ಬರು ನಾಲ್ಕು ದಿನಗಳ ಹಿಂದೆ ಕಾಲು ನೋವಿಗಾಗಿ ಕುಶಾಲನಗರದ ಸಾಯಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಕಾಲು ನೋವು ಹೆಚ್ಚಾದ ಹಿನ್ನೆಲೆಯ ಲ್ಲಿ ಶುಕ್ರವಾರ ಮತ್ತೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಂದು ಅವಧಿ ಮುಗಿದ ಮಾತ್ರೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಅದೇ ದಿನ ಶುಕ್ರವಾರ ರಾತ್ರಿ ಮಾತ್ರೆಯನ್ನು ಸೇವಿಸಿದ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ನಂತರ ಮನೆಯವರು ಮಾತ್ರೆಯನ್ನು ಪರಿಶೀಲಿಸಿದಾಗ ಆಸ್ಪತ್ರೆ ನೀಡಿರುವ ಅವಧಿ ಮುಗಿದ ಮಾತ್ರೆಯನ್ನು ಸೇವಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ನಂತರ ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಯ ನಂತರ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಅವಧಿ ಮುಗಿದ ಮಾತ್ರೆ ಸೇವಿಸಿ ಅನಾಹುತ ಸಂಭವಿಸಿದರೆ ಯಾರು ಹೊಣೆ? ಸಾಯಿ ಆಸ್ಪತ್ರೆಯವರು ನಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾರೆ. ಆದರೆ ಜೀವಕ್ಕೆ ಹಾನಿಯಾಗಿದ್ದರೆ, ಕ್ಷಮೆಯಿಂದ ಜೀವ ಹಿಂದಿರುಗುತ್ತದೆಯೇ ಎಂದು ಸಂಬಂಧಿಕರು ಪ್ರಶ್ನಿಸಿದ್ದು, ಸಂಬಂಧಪಟ್ಟವರು ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಸಾರ್ವಜನಿಕರು ಜೀವ ಉಳಿಸಿಕೊಳ್ಳಲು ಆಸ್ಪತ್ರೆಗೆ ತೆರಳುತ್ತಾರೆ. ಆದರೆ ಆಸ್ಪತ್ರೆಗಳಲ್ಲಿ ಅವಧಿ ಮುಗಿದ ಮಾತ್ರೆಗಳನ್ನು ನೀಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವ ಇಂತಹ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಪಡಿಸಬೇಕು. ಇಂತಹ ಬೇಜವಾಬ್ದಾರಿತನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಿನಾಂಕ ಮುಗಿದ ಮಾತ್ರೆಗಳನ್ನು ನೀಡುವ ಆಸ್ಪತ್ರೆ, ಮೆಡಿಕಲ್ ಶಾಪ್‌ಗಳನ್ನು ಪರಿಶೀಲಿಸಿ ಸೂಕ್ರ ಕ್ರಮ ಜರುಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಸಾರ್ವಜನಿಕರು ಎಂದು ಆಗ್ರಹಿಸಿದ್ದಾರೆ.

” ಅವಧಿ ಮುಗಿದ ಮಾತ್ರೆ ನೀಡಿದ್ದಾರೆಂದು ಆರೋಪಿಸಿರುವುದರಿಂದ ದೂರು ಪಡೆದುಕೊಂಡು ಪರಿಶೀಲನೆ ನಡೆಸಲಾಗುವುದು. ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಮಾತ್ರೆಗಳನ್ನು ಸೇವಿಸುವಾಗ ದಿನಾಂಕ ಮುಗಿದಿರುವ ಬಗ್ಗೆ ಪರಿಶೀಲಿಸಿ ಸೇವಿಸಬೇಕು.”

ಡಾ.ಸತೀಶ್ ಕುಮಾರ್, ಡಿ.ಎಚ್.ಒ, ಕೊಡಗು ಜಿಲ್ಲೆ

” ಅವಧಿ ಮುಗಿದ ಮಾತ್ರೆಗಳನ್ನು ನೀಡಿರುವ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೀವ ಅತ್ಯಮೂಲ್ಯವಾದದ್ದು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕುಶಾಲನಗರದ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಮೆಡಿಕಲ್‌ಗಳ ಶಾಪ್‌ಗಳಿಗೆ ಸಂಬಂಧಪಟ್ಟವರು ಭೇಟಿ ನೀಡಿ ಪರಿಶೀಲನೆ ನಡೆಸಬೇಕು.”

ಜಂಜ಼ೀರ್, ಸಾಮಾಜಿಕ ಕಾರ್ಯಕರ್ತ

” ನಮ್ಮ ಆಸ್ಪತ್ರೆಗೆ ಮಹಿಳೆಯೊಬ್ಬರು ಚಿಕಿತ್ಸೆಗೆ ಬಂದಿದ್ದರು. ಅವರಿಗೆ ಔಷಧಿ ನೀಡಲಾಗಿತ್ತು. ಅವರು ನಮ್ಮ ಫಾರ್ಮಸಿಯಿಂದ ಔಷಧಿ ತೆಗೆದುಕೊಂಡು ಹೋಗಿದ್ದಾರೆ. ನಮ್ಮಿಂದ ತಪ್ಪಾಗಿದೆ. ಈ ಬಗ್ಗೆ ಕ್ಷಮೆ ಕೇಳಿದ್ದೇವೆ. ನಮ್ಮ ತಪ್ಪನ್ನು ಒಪ್ಪಿಕೊಂಡಿದ್ದೇವೆ.”

ಡಾ. ಗಯಾ ಕುಶಾಲ್, ವೈದ್ಯರು, ಸಾಯಿ ಆಸ್ಪತ್ರೆ, ಕುಶಾಲನಗರ

Tags:
error: Content is protected !!