Mysore
21
broken clouds

Social Media

ಬುಧವಾರ, 18 ಫೆಬ್ರವರಿ 2026
Light
Dark

1.65 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಬೆಳಕು

ಆಂದೋಲನ ವಿಶೇಷ ಸಂದರ್ಶನದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹೆಮ್ಮೆಯ ನುಡಿ

ಆಂದೋಲನ: ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ್ದು, ಈ ನಡುವೆ ಇಂಧನ ಇಲಾಖೆಯ ಸಾಧನೆಗಳೇನು? ನಿಮಗಿದು ಸಮಾಧಾನ ತಂದಿದೆಯೇ?

ಕೆ.ಜೆ.ಜಾರ್ಜ್: ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿರುವುದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಆಗದಂತೆ ಅಗತ್ಯ ವಿದ್ಯುತ್ ಪೂರೈಕೆಗೆ ಕ್ರಮಗಳನ್ನು ಕೈಗೊಂಡಿರುವುದು, ಹಿಂದಿನ ಬಿಜೆಪಿ ಸರ್ಕಾರ ಮಾಡಲು ಸಾಧ್ಯವಾಗದೇ ಇದ್ದ ಕೇಂದ್ರ ಪುರಸ್ಕ ತ ಯೋಜನೆಗಳಾದ ರೈತರಿಗೆ ಸೋಲಾರ್ ಪಂಪ್ ಸೆಟ್ ಒದಗಿಸುವ ಕುಸುಮ್-ಬಿ ಮತ್ತು ಕೃಷಿ ಫೀಡರ್‌ಗಳನ್ನು ಸೌರೀಕರಣಗೊಳಿಸುವ ಕುಸುಮ್ -ಸಿ ಯೋಜನೆಗಳ ಅನುಷ್ಠಾನ, ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಪ್ರಸರಣ ಮತ್ತು ಪೂರೈಕೆ ವಿಭಾಗದಲ್ಲಿ ಮೂಲ ಸೌಕರ್ಯ ಹೆಚ್ಚಳ, ಕೆಪಿಟಿಸಿಎಲ್, ಎಸ್ಕಾಂಗಳು ಸೇರಿದಂತೆ ಇಂಧನ ಇಲಾಖೆಯಲ್ಲಿ ಸಾವಿರಾರು ಖಾಲಿ ಹುದ್ದೆಗಳ ಭರ್ತಿ… ಹೀಗೆ ಸಾಕಷ್ಟು ಸಾಧನೆ ಆಗಿದೆ. ಇದೆಲ್ಲದರಿಂದಾಗಿ ನಮ್ಮ ಸರ್ಕಾರ ಜನರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಮರ್ಪಕ ವಿದ್ಯುತ್ ಪೂರೈಸುವುದರಿಂದ ಇಲಾಖೆಯ ಸಾಧನೆಗಳು ಖಂಡಿತವಾಗಿಯೂ ಸಮಾಧಾನ ತಂದಿದೆ.

ಆಂದೋಲನ: ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಕೊರತೆ ಇತ್ತು. ಸಾವಿರ ದಿನಗಳಲ್ಲಿ ಈ ಕೊರತೆಯನ್ನು ನೀಗಿಸಲಾಗಿದೆಯೇ?

ಕೆ.ಜೆ.ಜಾರ್ಜ್: ನಮಗಿಂತ ಮುಂಚೆ ಇದ್ದ ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದೆನೆಗೆ ಆದ್ಯತೆ ನೀಡದ ಕಾರಣ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ವಿದ್ಯುತ್ ಕೊರತೆ ಸಾಕಷ್ಟು ಪ್ರಮಾಣದಲ್ಲಿತ್ತು. ಹೀಗಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಅಗತ್ಯ ವಿದ್ಯುತ್ ಪೂರೈಕೆಗೆ ಆದ್ಯತೆ ಕೊಟ್ಟೆವು. ಜತೆಗೆ ವಿದ್ಯುತ್ ಉತ್ಪಾದನೆಗೆ ಇದ್ದ ವಿವಿಧ ಅವಕಾಶಗಳನ್ನು ಬಳಸಿಕೊಂಡೆವು. ಏಕಾಏಕಿ ವಿದ್ಯುತ್ ಬೇಡಿಕೆ ೧೨ ಸಾವಿರ ಮೆಗಾವ್ಯಾಟ್‌ನಿಂದ ೧೫-೧೬ ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿದ ಕಾರಣ ವಿನಿಮಯ ಆಧಾರದ ಮೇಲೆ ಹೊರ ರಾಜ್ಯಗಳಿಂದ ವಿದ್ಯುತ್ ತರಿಸಿ ಕೊರತೆ ಬಗೆಹರಿಸಿದೆವು. ಬಳಿಕ ವಿದ್ಯುತ್ ಉತ್ಪಾದನೆ ಹೆಚ್ಚಳ, ಪೂರೈಕೆಯಲ್ಲಿ ಆಗುತ್ತಿದ್ದ ಲೋಪ ಸರಿಪಡಿಸುವುದು, ಲಿಂಕ್ ಲೈನ್ ಮೂಲಕ ಹೆಚ್ಚು ಬೇಡಿಕೆ ಇರುವ ಕಡೆ ಹೆಚ್ಚುವರಿ ವಿದ್ಯುತ್ ಪೂರೈಕೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ.

ಆಂದೋಲನ: ಕಳೆದ ಸಾವಿರ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಕೈಗೊಂಡ ಕ್ರಮಗಳೇನು?

ಕೆ.ಜೆ.ಜಾರ್ಜ್: ವಿದ್ಯುತ್ ಉತ್ಪಾದನೆಗೆ ಇರುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು ಉತ್ಪಾದನೆ ಹೆಚ್ಚಳಕ್ಕೆ ಕ್ರಮ ವಹಿಸಲಾಗುತ್ತಿದೆ. ಗ್ಯಾಸ್, ತ್ಯಾಜ್ಯದ ಮೂಲಕ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲಾಗಿದೆ. ಕೆಪಿಟಿಸಿಎಲ್‌ನ ಉಷ್ಣ ವಿದ್ಯುತ್ ಮತ್ತು ಜಲ ವಿದ್ಯುತ್ ಸ್ಥಾವರಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಣೆ ಮಾಡಿ ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಜತೆಗೆ ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನ ಮೂಲಗಳಿಂದಲೂ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಇದರಿಂದ ರಾಜ್ಯವು ವಿದ್ಯುತ್ ಸ್ವಾಲಂಬನೆಯತ್ತ ಮುಂದಡಿ ಇಡುತ್ತಿದೆ.

ಆಂದೋಲನ: ರಾಜ್ಯದಲ್ಲಿ ಪ್ರತಿ ವರ್ಷ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆಗಳು ಹೇಗಿರಬೇಕು ಅನ್ನಿಸುತ್ತದೆ?

ಕೆ.ಜೆ.ಜಾರ್ಜ್: ನಮ್ಮ ಸರ್ಕಾರ ೨೦೨೩ರಲ್ಲಿ ಅಧಿಕಾರಕ್ಕೆ ಬಂದಾಗ ಬೇಸಿಗೆಯಲ್ಲಿ ರಾಜ್ಯದ ವಿದ್ಯುತ್ ಬೇಡಿಕೆ ೧೨ರಿಂದ ೧೩ ಸಾವಿರ ಮೆಗಾವ್ಯಾಟ್‌ನಷ್ಟಿತ್ತು. ಈ ವರ್ಷ ಅದು ೧೯ ಸಾವಿರ ಮೆಗಾವ್ಯಾಟ್ ತಲುಪುವ ನಿರೀಕ್ಷೆಯಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಜಲ ವಿದ್ಯುತ್, ಉಷ್ಣ ವಿದ್ಯುತ್ ಸ್ಥಾವರಗಳಿಂದ ಸಾಧ್ಯವಿಲ್ಲ. ಹೀಗಾಗಿ ನವೀಕರಿಸಬಹುದಾದ ಇಂಧನ ಮೂಲಗಳು, ಅದರಲ್ಲೂ ಮುಖ್ಯವಾಗಿ ಸೌರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಆ ಮೂಲಕ ಬೇಡಿಕೆ ಸರಿದೂಗಿಸಲು ಕ್ರಮ ವಹಿಸಲಾಗುತ್ತಿದೆ. ಆದರೆ, ಸೌರ ವಿದ್ಯುತ್ ರಾತ್ರಿ ಸಿಗುವುದಿಲ್ಲ. ಹೀಗಾಗಿ ಪಂಪ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸುವ ಮೂಲಕ ಹಗಲಿನಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್ತನ್ನು ಸಂಗ್ರಹಿಸಿ ರಾತ್ರಿ ವೇಳೆ ಪೂರೈಸಲು ಯೋಚಿಸಲಾಗಿದೆ. ಅದಕ್ಕೆ ಪೂರಕವಾಗಿ ಶರಾವತಿ ಮತ್ತು ವರಾಹಿಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ಯೋಜನೆಗಳು ಅನುಷ್ಠಾನವಾದರೆ ಬೇಡಿಕೆಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ.

ಆಂದೋಲನ: ರಾಜ್ಯದ ಜನರಿಗೆ ೨೦೦ ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆಯ ಅನುಷ್ಠಾನ ನಿಮಗೆ ತೃಪ್ತಿ ತಂದಿದೆಯೇ?

ಕೆ.ಜೆ.ಜಾರ್ಜ್: ರಾಜ್ಯಾದ್ಯಂತ ೧.೬೫ ಕೋಟಿಗೂ ಹೆಚ್ಚು ಕುಟುಂಬಗಳು ಗೃಹಜ್ಯೋತಿ ಯೋಜನೆಯ ಅನುಕೂಲ ಪಡೆದುಕೊಳ್ಳುತ್ತಿವೆ. ಸಾಕಷ್ಟು ಕುಟುಂಬಗಳು ಗೃಹಜ್ಯೋತಿಯಿಂದ ಉಳಿತಾಯವಾಗುವ ಹಣದಲ್ಲಿ ಮುಖ್ಯವಾಗಿ ಮಕ್ಕಳ ಶಿಕ್ಷಣದಂತಹ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಿವೆ ಎಂದರೆ ಅದಕ್ಕಿಂತ ತೃಪ್ತಿ ಇನ್ನೇನಿದೆ? ೨೦೦ ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಶೂನ್ಯ ಬಿಲ್ ಬರುತ್ತದೆ. ಇದರಿಂದ ಆ ಕುಟುಂಬಗಳಿಗೆ ಆಗಿರುವ ಪ್ರಯೋಜನ ಅಪಾರ. ವರ್ಷಕ್ಕೆ ಸಾವಿರಾರು ರೂಪಾಯಿ ಉಳಿತಾಯವಾಗುತ್ತಿದೆ. ಬಡವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೋಗಿ ನೋಡಿದರೆ ಈ ಯೋಜನೆಯಿಂದ ಆಗಿರುವ ಅನುಕೂಲಗಳ ಬಗ್ಗೆ ಸಾಕಷ್ಟು ಯಶೋಗಾಥೆಗಳು ಸಿಗುತ್ತವೆ.

ಆಂದೋಲನ: ಗೃಹಜ್ಯೋತಿ ಯೋಜನೆಯಿಂದ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ (ಎಸ್ಕಾಂ) ಸಮಸ್ಯೆ ಆಗಿದೆಯೇ? ಅದನ್ನು ಯಾವ ರೀತಿ ನಿಭಾಯಿಸಿದ್ದೀರಿ?

ಕೆ.ಜೆ.ಜಾರ್ಜ್: ಗೃಹಜ್ಯೋತಿ ಯೋಜನೆ ಜಾರಿಗೆ ಬಂದ ಮೇಲೆ ಎಸ್ಕಾಂಗಳಿಗೆ ಸಮಸ್ಯೆಗಿಂತ ಅನುಕೂಲವೇ ಹೆಚ್ಚು. ಸರ್ಕಾರ ಗೃಹಜ್ಯೋತಿ ಸಬ್ಸಿಡಿಯನ್ನು ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಸುತ್ತದೆ. ಮತ್ತೊಂದೆಡೆ ಬಹುತೇಕ ಶೂನ್ಯ ಬಿಲ್ ಬರುತ್ತಿದೆ. ಹೀಗಾಗಿ ಬಿಲ್ ವಸೂಲಿ ಮಾಡುವ ಪ್ರಮೇಯ ಬರುವುದಿಲ್ಲ. ವಾರ್ಷಿಕ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಸಬ್ಸಿಡಿಯನ್ನು ಸರ್ಕಾರ ಈ ಯೋಜನೆಗೆ ಪಾವತಿಸುತ್ತಿದ್ದು, ಇದು ಎಸ್ಕಾಂಗಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ.

ಆಂದೋಲನ: ವಿದ್ಯುತ್ ಲಭ್ಯವಿದ್ದರೂ ಪ್ರಸರಣ ಮತ್ತು ವಿತರಣೆಯಲ್ಲಿ ತೊಂದರೆಗಳಿರುವುದರಿಂದ ಜನರಿಗೆ ಆಗಾಗ್ಗೆ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಇದನ್ನು ತಡೆಯಲು ಕೈಗೊಂಡಿರುವ ಕ್ರಮಗಳೇನು?

ಕೆ.ಜೆ.ಜಾರ್ಜ್: ಮೂಲ ಸೌಕರ್ಯ ಕೊರತೆ ಕಾರಣದಿಂದಾಗಿ ವಿದ್ಯುತ್ ಪ್ರಸರಣ ಮತ್ತು ವಿತರಣೆಯಲ್ಲಿ ತೊಂದರೆಯಾಗುತ್ತಿತ್ತು. ಇದನ್ನು ಪರಿಗಣಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಉತ್ಪಾದನೆ ಜತೆಗೆ ಮೂಲ ಸೌಕರ್ಯ ಹೆಚ್ಚಿಸಲು ಆದ್ಯತೆ ನೀಡಿತು. ಪ್ರತಿ ವರ್ಷ ೫೦-೧೦೦ ಸಬ್ ಸ್ಟೇಷನ್‌ಗಳನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟು ಹೋದರೆ ಗರಿಷ್ಟ ೭೨ ಗಂಟೆಯೊಳಗೆ ಅದನ್ನು ಬದಲಿಸಲಾಗುತ್ತಿದೆ. ವಿದ್ಯುತ್ ತಂತಿಗಳು ತುಂಡಾದರೆ ತಕ್ಷಣ ಸರಿಪಡಿಸಬೇಕು ಎಂಬ ಕಾರಣಕ್ಕೆ ೩ ಸಾವಿರಕ್ಕೂ ಹೆಚ್ಚು ಲೈನ್‌ಮೆನ್‌ಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ.

ಆಂದೋಲನ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಇದು ಯಾವ ಮಟ್ಟದಲ್ಲಿ ಪರಿಣಾಮ ಬೀರಿದೆ?

ಕೆ.ಜೆ.ಜಾರ್ಜ್: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಅವರು ನೀಡಿದ ಮೊದಲ ನಿರ್ದೇಶನ ಎಂದರೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್ ಪೂರೈಸಬೇಕು ಎಂಬುದಾಗಿತ್ತು. ೨೦೨೩ರಲ್ಲಿ ಬರಗಾಲದಲ್ಲಿ ಒಂದು ತಿಂಗಳು ಬಿಟ್ಟರೆ ಉಳಿದೆಲ್ಲಾಸಂದರ್ಭದಲ್ಲೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಸಲಾಗಿದೆ. ಇದೀಗ ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ ರೈತರಿಗೆ ಹಗಲು ವೇಳೆ ಸತತ ಏಳು ಗಂಟೆ ವಿದ್ಯುತ್ ಪೂರೈಸಲು ಕುಸುಮ್-ಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ೩೯೭ ವಿದ್ಯುತ್ ಸರಬರಾಜು ಉಪ ಕೇಂದ್ರಗಳನ್ನು ಸೌರೀಕರಣಗೊಳಿಸಲಾಗುತ್ತಿದೆ. ೨೫೨೦ ಮೆಗಾವ್ಯಾಟ್ ಸಾಮರ್ಥ್ಯದ ಸೌರಘಟಕಗಳ ಮೂಲಕ ೬,೭೦,೧೮೫ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಪೂರೈಸಲಾಗುತ್ತದೆ. ಜತೆಗೆ ಕುಸುಮ್- ಬಿ ಯೋಜನೆಯಡಿ ೪೦ ಸಾವಿರ ಪಂಪ್ ಸೆಟ್ಗಳನ್ನು ರೈತರಿಗೆ ಒದಗಿಸಲಾಗುವುದು.

ಆಂದೋಲನ: ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ? ಇದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ?

ಕೆ.ಜೆ.ಜಾರ್ಜ್: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದ್ದುದು ವಿದ್ಯುತ್ತಂ ತಿಗಳ ಸಮಸ್ಯೆ ಮತ್ತು ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಒತ್ತಡ ಹೆಚ್ಚಾಗಿ ಅವು ಹಾಳಾಗುತ್ತಿದ್ದುದು. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಲಾಗುತ್ತಿದೆ. ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋದರೆ ತಕ್ಷಣ ಬದಲಾಯಿಸಲಾಗುತ್ತದೆ. ಜತೆಗೆ ನಮ್ಮ ಅಧಿಕಾರಿಗಳು ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಲಹೆ ಪಡೆದು ಸ್ಥಳೀಯ ಮಟ್ಟದಲ್ಲಿ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ಆಯಾ ಉಪವಿಭಾಗದ ಅಧಿಕಾರಿಗಳಿಗೆ ವಹಿಸಲಾಗಿದೆ.

ಆಂದೋಲನ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ರ್ಕಾರಕ್ಕೆ ೧೦೦೦ ದಿನಗಳಾಗಿವೆ. ಸರ್ಕಾರದ ಒಟ್ಟಾರೆ ಸಾಧನೆ ಬಗ್ಗೆ ಏನು ಹೇಳುತ್ತೀರಿ?

ಕೆ.ಜೆ.ಜಾರ್ಜ್: ನುಡಿದಂತೆ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳನ್ನುಸಮರ್ಪಕವಾಗಿ ಅನುಷ್ಠಾನಗೊಳಿಸಲಾ ಗಿದೆ. ಇದರ ಜತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನೂ ಮಾಡಲಾಗಿದೆ. ಪ್ರತಿ ವರ್ಷ ಬಜೆಟ್‌ನಲ್ಲಿ ಘೋಷಿಸಿದ ಬಹುತೇಕ ಕಾರ್ಯ ಕ್ರಮ ಗಳನ್ನು ಅನುಷ್ಠಾನ ಗೊಳಿಸಲಾಗು ತ್ತಿದೆ. ಸಾವಿರ ದಿನಗಳಲ್ಲಿ ಸಾವಿರಾರು ಕೆಲಸಗಳಾಗಿವೆ, ಯಾವುದೇ ಸರ್ಕಾರಗಳು ಮಾಡದ ಸಾಧನೆಗಳನ್ನು ಈ ಸರ್ಕಾರ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡುವತ್ತ ಮುನ್ನಡೆಯುತ್ತಿದೆ

 

 

Tags:
error: Content is protected !!