ಆರ್.ಟಿ.ವಿಠ್ಠಲಮೂರ್ತಿ
ಅಕ್ಟೋಬರ್ ಕ್ರಾಂತಿಗೆ ದಲಿತ ನಾಯಕರು ಸಜ್ಜು
ದಲಿತ ಸಮುದಾಯಗಳು ಒಗ್ಗೂಡಿ ಬಲ ಪ್ರದರ್ಶನ
೩೦ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ
ಮತ್ತೆ ಗರಿಗೆದರಿದ ಸಿಎಂ ಅಧಿಕಾರ ಹಂಚಿಕೆ ಮಾತು
ದಲಿತ ಮುಖ್ಯಮಂತ್ರಿ ಕೂಗಿಗೆ ಸಮಾವೇಶದ ಬಲ
೮ ದಶಕಗಳು ಕಳೆದರೂ ದಲಿತರಿಗೆ ಸಿಗದ ಸಿಎಂ ಹುದ್ದೆ
ಬೆಂಗಳೂರು: ಅಧಿಕಾರ ಹಂಚಿಕೆಯ ಮಾತು ಜೀವಂತವಾಗಿರುವ ಬೆನ್ನಲ್ಲೇ ಅಕ್ಟೋಬರ್ ಕ್ರಾಂತಿಗೆ ದಲಿತ ನಾಯಕರು ಸಜ್ಜಾಗಿದ್ದು, ದಲಿತ ಸಿಎಂ ಕೂಗಿಗೆ ಬಲ ತುಂಬಲು ದಾವಣಗೆರೆಯಲ್ಲಿ ಐತಿಹಾಸಿಕ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ.
ದಲಿತರ ಒಳಮೀಸಲಾತಿ ವಿವಾದವನ್ನು ಮಂಗಳವಾರ ಸಂಪುಟ ಸಭೆ ಇತ್ಯರ್ಥಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯವನ್ನು ಮರೆತು ದಲಿತ ಸಮುದಾಯಗಳು ಒಗ್ಗೂಡಿ ಬಲ ಪ್ರದರ್ಶನ ಮಾಡಲಿದ್ದು, ಸುಮಾರು ಮೂವತ್ತು ಲಕ್ಷ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜನಸಂಖ್ಯೆಯಲ್ಲಿ ರಾಜ್ಯದ ನಂಬರ್ ಒನ್ ಸ್ಥಾನದಲ್ಲಿರುವ ದಲಿತರಿಗೆ ಈ ಬಾರಿ ಮುಖ್ಯಮಂತ್ರಿ ಹುದ್ದೆ ದಕ್ಕಲೇಬೇಕು ಎಂಬ ಘೋಷಣೆಯೊಂದಿಗೆ ನಡೆಯಲಿ ರುವ ಸಮಾವೇಶ ಇಡೀ ದೇಶದ ಗಮನವನ್ನು ತನ್ನತ್ತ ಸೆಳೆಯಲಿದೆ. ಸ್ವಾತಂತ್ರ್ಯೋತ್ತರ ಕರ್ನಾಟಕದ ಇತಿಹಾಸಕ್ಕೆ ಎಂಟು ದಶಕಗಳು ಪೂರ್ಣಗೊಳ್ಳುತ್ತಿದ್ದು, ಇಷ್ಟಾದರೂ ಇದುವರೆಗೆ ಒಬ್ಬನೇ ಒಬ್ಬ ದಲಿತ ನಾಯಕ ರಾಜ್ಯದ ಮುಖ್ಯಮಂತ್ರಿಯಾಗಿಲ್ಲ. ಇದು ಅಸಮಾನತೆಯ ಪರಾ ಕಾಷ್ಠೆ ಎಂದು ಸಮಾವೇಶ ಪ್ರತಿಪಾದನೆ ಮಾಡಲಿದೆ.
೨೦೨೩ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಕೆಳಗಿಳಿಯಲಿದ್ದಾರೆ ಎಂಬ ಮಾತು ಜೀವಂತವಾಗಿರುವುದೇ ದಲಿತ ಸಮಾವೇಶದ ಮೂಲ ಪ್ರೇರಣೆ.
ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿರುವ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬ್ರೇಕ್ ಹಾಕಿದ್ದರಾದರೂ, ಅಧಿಕಾರ ಹಂಚಿಕೆಯ ಮಾತು ಬೂದಿ ಮುಚ್ಚಿದ ಕೆಂಡದಂತೆ ಇದ್ದೇ ಇದೆ.
ಮೂಲಗಳ ಪ್ರಕಾರ, ಅಧಿಕಾರ ಹಂಚಿಕೆಯ ಒಪ್ಪಂದವಾಗಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರೂ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು, ಅಧಿಕಾರ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡರೆ ಸಿದ್ದರಾಮಯ್ಯ ಅವರು ಇಲ್ಲ ಅನ್ನಲಾರರು.
ಸುಮಾರು ಎರಡು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗಿನಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ತಮ್ಮದಾರಿಗೆ ಯಾವುದೇ ಅಡಚಣೆಯಾಗದಂತೆ ನೋಡಿ ಕೊಂಡಿರುವ ಸೋನಿಯಾ ಗಾಂಧಿ ಅವರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಪಾರ ಗೌರವವಿದ್ದು, ಈ ಹಿನ್ನೆಲೆಯಲ್ಲಿ ಅವರೇ ಕೋರಿಕೊಂಡರೆ ಸಿದ್ದರಾಮಯ್ಯ ಅನಿವಾರ್ಯವಾಗಿ ಒಪ್ಪುತ್ತಾರೆ ಎಂಬುದು ಮೂಲಗಳ ಮಾತು.
ಭವಿಷ್ಯದ ನಾಯಕನ ಆಯ್ಕೆ ಸಿಎಲ್‌ಪಿಯಲ್ಲೇ ಆಗಬೇಕು: ಆದರೆ ಹೀಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಧಿಕಾರ ಬಿಟ್ಟುಕೊಡಲು ಮನವಿ ಮಾಡಿಕೊಂಡಾಗ, ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲೇ ನಡೆಯಬೇಕು. ಇಲ್ಲದಿದ್ದರೆಸರ್ಕಾರಕ್ಕೆ ಅಪಾಯವಿದೆ ಎಂದು ಹೇಳಲು ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದಾರೆ. ಹೀಗೆ ಅವರು ಹೇಳಿದ್ದಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಪ್ಪಿಕೊಂಡರೆ, ಶಾಸಕಾಂಗ ಪಕ್ಷದಲ್ಲಿ ನಡೆಯುವ ಚುನಾವಣೆಯಲ್ಲಿ ದಲಿತ ನಾಯಕರೊಬ್ಬರು ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಬಿ.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆಯ ಸನಿಹ ಬಂದಿದ್ದರೂ ಕೊನೆಯ ಕ್ಷಣದಲ್ಲಿ ವಂಚಿತರಾಗಿದ್ದರು.
ಒಂದು ವೇಳೆ ಭವಿಷ್ಯದ ನಾಯಕನ ಆಯ್ಕೆಗಾಗಿ ಶಾಸಕಾಂಗ ಪಕ್ಷದಲ್ಲಿ ಚುನಾವಣೆ ನಡೆಸುವುದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಇಷ್ಟವಿಲ್ಲದಿದ್ದರೆ ಸರ್ಕಾರಕ್ಕೆ ಅಪಾಯ ಎದುರಾಗಲಿದೆ ಎಂಬುದು ಮೂಲಗಳ ಮಾತು. ಇಂತಹ ಮಾತುಗಳ ನಡುವೆಯೇ ದಲಿತ ಸಿಎಂ ಕೂಗು ಪುನಃ ಮೇಲಕ್ಕೆದ್ದಿದ್ದು, ಇದಕ್ಕೆ ಪೂರಕವಾಗಿ ಅಕ್ಟೋಬರ್ ತಿಂಗಳಲ್ಲಿ ಐತಿಹಾಸಿಕ ಸಮಾವೇಶವನ್ನು ದಾವಣಗೆರೆಯಲ್ಲಿ ನಡೆಸಲು ದಲಿತ ನಾಯಕರು ನಿರ್ಧರಿಸಿದ್ದಾರೆ.
ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯುವುದು ನಿಶ್ಚಿತವಾದರೆ, ಅವರ ಜಾಗಕ್ಕೆ ದಲಿತ ನಾಯಕರೊಬ್ಬರು ಬರಬೇಕು. ರಾಜ್ಯದ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಿರುವ ದಲಿತರಿಗೆ ಯಾವ ಕಾರಣಕ್ಕೂ ಈ ಬಾರಿ ಅವಕಾಶ ತಪ್ಪಬಾರದು ಎಂಬ ಹಕ್ಕೊತ್ತಾಯದೊಂದಿಗೆ ಈ ಐತಿಹಾಸಿಕ ದಲಿತ ಸಮಾವೇಶ ನಡೆಯಲಿದ್ದು, ಆ ಮೂಲಕ ರಾಜ್ಯ ರಾಜಕಾರಣ ಕುತೂಹಲಕಾರಿ ತಿರುವು ಪಡೆಯುವುದು ನಿಶ್ಚಯವಾಗಿದೆ.





