Mysore
28
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ನಾಳೆ ಕೋಟೆಯಲ್ಲಿ ೨ ಗಂಟೆಗಳ ಕಾಲ ಹೆಬ್ಬಾಳಯ್ಯ ಜಾತ್ರೆ!

ಮಂಜು ಕೋಟೆ

ಯುಗಾದಿ ಹಬ್ಬದ ಮರುದಿನ ಸಂಜೆ ನಡೆಯುವ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿ

ಎಚ್.ಡಿ.ಕೋಟೆ: ಯುಗಾದಿ ಹಬ್ಬದ ಮರುದಿನ ಸಂಜೆ ೨ ಗಂಟೆಗಳ ಕಾಲ ನಡೆಯುವ ಪಟ್ಟಣದ ಹೆಬ್ಬಾಳಯ್ಯ ಜಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗುವುದು ವಿಶೇಷ.

ಪಟ್ಟಣದ ಹೌಸಿಂಗ್ ಬೋರ್ಡ್‌ನಿಂದ ೧ ಕಿ.ಮೀ. ದೂರದಲ್ಲಿರುವ ಹೆಬ್ಬಾಳದ ನದಿಯ ಹತ್ತಿರದಲ್ಲಿ ಚೋಳರ ಕಾಲದ ಉದ್ಭವಮೂರ್ತಿಗಳಾದ ಹೆಬ್ಬಾಳಯ್ಯ ಬೀರಪ್ಪ, ಹೆಬ್ಬರಗಾಲಯ್ಯ, ಹೆಗ್ಗಡದೇವರಾಯ ಉತ್ಸವ ಮೂರ್ತಿಗಳಿಗೆ ಹೆಬ್ಬಾಳಯ್ಯ ದೇವಸ್ಥಾನದಲ್ಲಿ ಯುಗಾದಿ ಹಬ್ಬವಾದ ಮರುದಿನ ಸಂಜೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆ ನಡೆಸಲಾಗುತ್ತದೆ.

ಈ ಜಾತ್ರೆಯಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ. ದೇವರ ದರ್ಶನ, ಕುಣಿತ ಇತ್ಯಾದಿ ಕಾರ್ಯಕ್ರಮಗಳನ್ನು ನೋಡಲೆಂದೇ ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಂಜೆ ೪ರಿಂದ ೬ರವರೆಗೆ ಜನರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ಹೋಗಲು ಸಮರ್ಪಕವಾದ ರಸ್ತೆ ಇಲ್ಲದಿದ್ದರೂ ಜನಸಾಮಾನ್ಯರು ಇದನ್ನು ಲೆಕ್ಕಿಸದೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಜಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಪಟ್ಟಣದ ಕಾಳಿದಾಸ ರಸ್ತೆಯಲ್ಲಿರುವ ಬೀರಪ್ಪ ದೇವಸ್ಥಾನದ ಸಮಿತಿಯವರು ಹೆಬ್ಬಾಳಯ್ಯ ದೇವಸ್ಥಾನದ ಪೂಜೆ ಕಾರ್ಯಗಳ ಉಸ್ತುವಾರಿಯನ್ನು ಮತ್ತು ಜಾತ್ರಾ ಸಿದ್ಧತೆಗಳನ್ನು ಕುರುಬ  ಸಮಾಜದವರು ಹಾಗೂ ಇನ್ನಿತರ ಸಮುದಾಯದವರು ನೋಡಿಕೊಳ್ಳುತ್ತಾರೆ.

ಮಹಾರಾಜರ ಕಾಲದಲ್ಲಿ ಬೀರಪ್ಪ ದೇವಸ್ಥಾನಕ್ಕೆ ನೀಡಿದ ಪಂಚಲೋಹದ ವಿಗ್ರಹಗಳಾದ ಆನೆ, ಕುದುರೆ, ಒಂಟೆ, ಸೈನಿಕರು ಇನ್ನಿತರ ದೇವರ ವಿಗ್ರಹಗಳನ್ನು ಬಿಗಿ ಬಂದೋಬಸ್ತಿನಲ್ಲಿ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿ ಜನರಿಗೆ ದರ್ಶನಕ್ಕೆ ಅವಕಾಶ ನೀಡಿ, ಮತ್ತೆ ಪಟ್ಟಣದ ಬೀರಪ್ಪ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

ನದಿ ಮತ್ತು ಜಮೀನುಗಳ ಮಧ್ಯದಲ್ಲಿರುವ ಈ ದೇವಸ್ಥಾನ ಪ್ರಶಾಂತವಾದ ವಾತಾವರಣದಲ್ಲಿದ್ದು, ಜಾತ್ಯತೀತವಾಗಿ, ಹಿರಿಯರು, ಕಿರಿಯರು ಎಲ್ಲರೂ ಸೇರುತ್ತಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸುತ್ತಾರೆ. ಜನಸಾಮಾನ್ಯರಿಗೆ ಮಜ್ಜಿಗೆ, ಪಾನಕ, ಮೊಸರನ್ನ, ಬಾತು ಇನ್ನಿತರ ಆಹಾರ ಪದಾರ್ಥಗಳನ್ನು ದಾನಿಗಳು ವಿತರಿಸುತ್ತಾರೆ. ಯುಗಾದಿ ಹಬ್ಬದ ಮರುದಿನ ಎರಡು ಗಂಟೆಗಳ ಕಾಲ ನಡೆಯುವ ಹೆಬ್ಬಾಳಯ್ಯ ಜಾತ್ರೆ ತನ್ನ ವಿಶೇಷತೆಯಿಂದ ಎಲ್ಲರ ಗಮನ ಸೆಳೆಯುತ್ತದೆ.

” ಪ್ರತಿವರ್ಷವೂ ಜಾತ್ರಾ ಮಹೋತ್ಸವಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಚೋಳರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.”

-ಬೀರಪ್ಪ, ಮುಖಂಡರು, ಕಾಳಿದಾಸ ರಸ್ತೆ 

Tags:
error: Content is protected !!