ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಪ್ರತಿ ಕೆ.ಜಿ. ಬೆಳ್ಳುಳ್ಳಿ ಧಾರಣೆಯು 400 ರೂ.ಗಳನ್ನು ದಾಟಿದೆ. ಫೆಬ್ರವರಿಯಲ್ಲಿ ಬೆಳ್ಳುಳ್ಳಿ ದರವು 500 ರೂ. ದಾಟಿತ್ತು. ಸದ್ಯ ಒಂದೇ ವರ್ಷದಲ್ಲಿ ಸತತ ಎರಡನೇ ಸಲ ಏರಿಕೆಯಾಗಿದ್ದು, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯ ಪೈಕಿ ಮಧ್ಯಪ್ರದೇಶ ಶೇ.70ರಷ್ಟನ್ನು ಹೊಂದಿದ್ದು, ಕರ್ನಾಟಕದ ಹಲವೆಡೆಯೂ ರೈತರು ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. ಕರ್ನಾಟಕಕ್ಕೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಬಾರಿ ಮಳೆಯಿಂದಾಗಿ ಈ ಭಾಗಗಳಲ್ಲಿ ಉತ್ಪಾದನೆ ಕುಸಿತಗೊಂಡಿದ್ದು, ಮಾರುಕಟ್ಟೆಗೆ ಅವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಸದ್ಯ ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಮೊದಲು ಪ್ರತಿದಿನ 5 ಸಾವಿರದಿಂದ 6 ಸಾವಿರ ಚೀಲಗಳು (ಪ್ರತಿ ಚೀಲ 50 ಕೆ.ಜಿ.) ಆವಕವಾಗುತ್ತಿತ್ತು. ಸದ್ಯ ಕೇವಲ 3 ಸಾವಿರ ಚೀಲಗಳು ಆವಕವಾಗಿದ್ದು, ಅಲ್ಲಿಂದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರಿಗೂ ರವಾನೆಯಾಗುತ್ತಿದೆ. ಇತ್ತೀಚೆಗೆ ಯಶವಂತಪುರದ ಮಾರುಕಟ್ಟೆಯಲ್ಲಿ ‘ಎ’ ದರ್ಜೆಯ ಹೈಬ್ರಿಡ್ ಬೆಳ್ಳುಳ್ಳಿಯ ಸಗಟು ಧಾರಣೆ ಕೆ.ಜಿ.ಗೆ 420 ರೂ.ಗಳನ್ನು ತಲುಪಿತ್ತು. ಹಾಗಾಗಿ ಈ ವಾರದಲ್ಲಿ ಚಿಲ್ಲರೆ ಧಾರಣೆಯು 450 ರೂ.ಗಳನ್ನು ದಾಟುವ ಸಾಧ್ಯತೆ ಇದೆ.





