ಪ್ರಶಾಂತ್ ಎಸ್.
ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆ
೨೦೦ ರಿಂದ ೨೫೦ ರೂ. ಹೆಚ್ಚಳ; ಗ್ರಾಹಕರಿಗೆ ತೊಂದರೆ
ಮೇ ತಿಂಗಳವರೆಗೂ ಬೆಲೆ ಏರಿಕೆಯಾಗುವ ನಿರೀಕ್ಷೆ
ಮೈಸೂರು: ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸುವ ವೀಳ್ಯದೆಲೆಯ ಬೆಲೆ ಗಗನಕ್ಕೇರಿದೆ. ೨೦೦ ಎಲೆಗಳುಳ್ಳ ಒಂದು ಕಟ್ಟು ವೀಳ್ಯದೆಲೆಯ ಬೆಲೆ ೧೨೫ ರಿಂದ ೧೫೦ ರೂ.ಗೆ ಹೆಚ್ಚಳವಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಗುಣಮಟ್ಟದ ವೀಳ್ಯದೆಲೆ ಸಿಗುವುದು ಕಷ್ಟವಾಗಿದೆ. ಮೇ ತಿಂಗಳಿನವರೆಗೂ ಬೆಲೆ ಏರಿಕೆ ಇಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ದರ ಏರಿಕೆಗೆ ಹವಾಮಾನ ವೈಪರೀತ್ಯ ಒಂದೆಡೆ ಕಾರಣವಾದರೆ, ಬೇಡಿಕೆ ಹೆಚ್ಚಾಗಿರುವುದೂ ಪ್ರಮುಖ ಕಾರಣವಾಗಿದೆ.
ಗ್ರಾಹಕರಿಗೆ ಹೊರೆ: ಒಂದು ವಾರದಲ್ಲಿ ಒಂದು ಕಟ್ಟಿನ ಬೆಲೆ ೫೦ ರಿಂದ ೬೦ ರೂ. ಹೆಚ್ಚಳ ಆಗುವ ಮೂಲಕ ಗ್ರಾಹಕರಿಗೆ ಹೊರೆಯಾಗಿದೆ. ಒಂದು ಕಟ್ಟಿನಲ್ಲಿ ೧೦೦ ವೀಳ್ಯದೆಲೆಗಳು ಇರುತ್ತವೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಎಲೆ ಸರಾಸರಿ ೨ ರೂ.ಗೆ ಮಾರಾಟ ಆಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರಿಂದ ಎಲೆಗೆ ಸಾಕಷ್ಟು ಬೇಡಿಕೆ ಇದೆ.
ಎಲ್ಲೆಲ್ಲಿ ಪೂರೈಕೆ?: ಪ್ರಮುಖವಾಗಿ ವ್ಯಾಪಾರಿಗಳೇ ಖರೀದಿದಾರರಾಗಿದ್ದು, ಬೆಳೆಗಾರರಿಂದ ಕೊಂಡುಕೊಂಡ ಒಂದು ಪಿಂಡಿ ಎಲೆಯನ್ನು ಮೈಸೂರು, ಗುಂಡ್ಲುಪೇಟೆ, ಕೆ.ಆರ್.ನಗರ, ಎಚ್.ಡಿ.ಕೋಟೆ, ಮಂಡ್ಯ, ಬೆಂಗಳೂರು, ಕೊಡಗು ಜಿಲ್ಲೆ ಮತ್ತಿತರ ಸ್ಥಳಗಳಿಗೂ ಸಾಗಿಸಲಾಗುತ್ತದೆ.
ಬೇಡಿಕೆ ಕಾಪಿಟ್ಟುಕೊಂಡ ವೀಳ್ಯದೆಲೆ: ಯಾವುದೇ ಧಾರ್ಮಿಕ ಪೂಜೆ ಕಾರ್ಯ, ಶುಭ ಸಮಾರಂಭ, ಮದುವೆ ನಡೆಯಬೇಕಾದರೂ ವೀಳ್ಯದೆಲೆ ಬೇಕು. ಎಲೆ, ಅಡಕೆ ಜಿಗಿಯುವ ಅಭ್ಯಾಸ ಇರುವವರಿಗೂ ಅನಿವಾರ್ಯ. ಕಳೆದ ಒಂದು ತಿಂಗಳಿಂದ ವೀಳ್ಯದೆಲೆ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಳವಾಗಿದೆ. ಕೆಲವರು ಮನೆಗಳಲ್ಲಿ ಪೂಜೆಗಾಗಿ ಹೂಕುಂಡಗಳಲ್ಲಿ ವೀಳ್ಯದೆಲೆ ಬೆಳೆಸುತ್ತಿರುವುದು ಕಂಡುಬರುತ್ತಿದೆ. ತಾಲ್ಲೂಕಿನಲ್ಲಿ ವೀಳ್ಯದೆಲೆ ತೋಟಗಳು ವಿರಳವಾಗಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣಗಳಲ್ಲಿ ಒಂದಾಗಿದೆ ಎಂಬುದು ಗ್ರಾಹಕರ ಅಭಿಪ್ರಾಯ
” ಹವಾಮಾನ ವೈಪರೀತ್ಯ, ರೋಗಬಾಧೆ, ಸಮಸ್ಯೆಯಿಂದ ವೀಳ್ಯದೆಲೆಯ ಇಳುವರಿ ಕುಂಠಿತವಾಗಿ ಬೇಡಿಕೆ ಹೆಚ್ಚಾಗಿದ್ದು, ಒಂದು ಪಿಂಡಿಯಲ್ಲಿ ೧೦,೦೦೦ ಎಲೆಗಳ ೧೦೦ ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತದಲ್ಲಿ ಮಾರುಕಟ್ಟೆಯಲ್ಲಿ ಒಂದು ಪಿಂಡಿಗೆ ೧೨ರಿಂದ ೧೬ ಸಾವಿರ ರೂ. ಬೆಲೆ ಇದೆ. ಅಂದರೆ ಬೆಳೆಗಾರರಿಗೆ ಒಂದು ಎಲೆಗೆ ಎಪ್ಪತ್ತೈದು ಪೈಸೆ ಸಿಗುತ್ತದೆ. ಎರಡು ರೂಪಾಯಿಗೆ ಒಂದು ಎಲೆಯಂತೆ ಚಿಲ್ಲರೆಯಾಗಿ ಮಾರಾಟವಾಗುತ್ತಿದೆ”
” ಬೇಸಿಗೆ ಸಮಯದಲ್ಲಿ ಅಧಿಕ ತೇವಾಂಶದಿಂದಾಗಿ ಎಲೆಯ ಬಳ್ಳಿ ಹಲವು ರೋಗಗಳಿಗೆ ತುತ್ತಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರುತ್ತಿಲ್ಲ. ಸದ್ಯ ಗಾಳಿಗೆ ಮತ್ತಷ್ಟು ಎಲೆಯ ಬಳ್ಳಿಗಳು ಒಣಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.”
-ಸಿದ್ದರಾಜು, ಟಿ.ಕಾಟೂರು
” ಮಾರ್ಬಳ್ಳಿ, ಟಿ.ಕಾಟೂರು, ಗುಮಚನಹಳ್ಳಿ, ಉದ್ಬೂರು, ಅರಸೀಕೆರೆ ಸುತ್ತಮುತ್ತಲಿಂದ ಬೆಳೆಗಾರರು ವೀಳ್ಯೆದೆಲೆಯ ಪಿಂಡಿ ಮಾಡಿಕೊಂಡು ತರುತ್ತಾರೆ. ಈಗ ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ಇರುವುದರಿಂದ ಉತ್ತಮ ಬೇಡಿಕೆಯಿದೆ. ಆದರೆ ಬೆಲೆ ಜಾಸ್ತಿ. ಆದರೂ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ನಮಗೆ ಬೇಡಿಕೆಯಷ್ಟು ವೀಳ್ಯದೆಲೆ ಪೂರೈಕೆಯಾಗುತ್ತಿದೆ.”
-ಕೊಂತಮ್ಮ, ವೀಳ್ಯದೆಲೆ ವ್ಯಾಪಾರಿ, ಅಶೋಕಪುರಂ.
” ದರ ಹೆಚ್ಚಲು ಹವಾಮಾನವೈಪರೀತ್ಯ ಕಾರಣ. ವೀಳ್ಯದೆಲೆ ತೋಟಗಳಲ್ಲಿ ಚಳಿಗೆ ಬಳ್ಳಿಗಳಲ್ಲಿ ಎಲೆ ಚಿಗುರುವುದು ಕಡಿಮೆ. ಈ ಸಮಯದಲ್ಲಿ ಮದುವೆ, ಗೃಹ ಪ್ರವೇಶ, ಜಾತ್ರೆಯಂತಹ ಸಮಾರಂಭಗಳು ಹೆಚ್ಚಾಗಿ ನಡೆಯುವುದರಿಂದ ವೀಳ್ಯದೆಲೆ ದರ ಹೆಚ್ಚಾಗಿದೆ. ಅಂಬುಗಳನ್ನು ಇಳಿಸಿ ಕಟ್ಟಿದ ಮೇಲೆ, ಹೊಸ ಚಿಗುರು ಬಂದ ನಂತರವಷ್ಟೆ ದರ ಇಳಿಕೆಯಾಗಲಿದೆ.”
-ಮಂಜು ಕಿರಣ್, ಪ್ರಗತಿಪರ ರೈತ.





