Mysore
18
broken clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಮಳೆಯ ಸಿಂಚನಕ್ಕೆ ಕಂಗೊಳಿಸುತ್ತಿರುವ ನಾಗರಹೊಳೆ ಉದ್ಯಾನ

ದಾ.ರಾ.ಮಹೇಶ್

ಅಚ್ಚ ಹಸಿರಿನಿಂದ ಶೋಭಿಸುತ್ತಿರುವ ಅರಣ್ಯ; ತುಂಬಿದ ಕೆರೆಗಳು; ಸ್ವಚ್ಛಂದವಾಗಿ ವಿಹರಿಸುತ್ತಿರುವ ವನ್ಯಪ್ರಾಣಿಗಳು

ವೀರನಹೊಸಹಳ್ಳಿ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಮರ-ಗಿಡಗಳ ನಡುವೆ ಬೆಳೆದು ನಿಂತ ಹುಲ್ಲು, ಕುರುಚಲು ಗಿಡಗಳೊಳಗೆ ವನ್ಯಪ್ರಾಣಿಗಳು ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ. ಜಿಂಕೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಕಂಡಾಗ ಅಚ್ಚರಿಯಿಂದ ನೆಗೆದು ಓಡುವ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ.

ಬೇಸಿಗೆಯ ಬಿರು ಬಿಸಿಲಿಗೆ ಸಿಲುಕಿ ಒಣಗಿಹೋದ ಗಿಡಮರಗಳಿಗೆ ಮುಂಗಾರು ಮಳೆ ಸುರಿಯಿತೆಂದರೆ ಮರುಹುಟ್ಟಿನ ಅನುಭವ. ಪ್ರಕೃತಿಯಲ್ಲೊಂದು ಪುಳಕ. ಇಡೀ ಅರಣ್ಯಕ್ಕೆ ಹಸಿರು ಸೀರೆಯುಟ್ಟು ನಲಿದಾಡುವ ಸಂಭ್ರಮ. ಬತ್ತಿ ಹೋದ ನದಿ, ತೊರೆಗಳಲ್ಲಿ ಜೀವಜಲದ ಉಸಿರಾಟ. ನಾಗರಹೊಳೆ ಉದ್ಯಾನದಲ್ಲೀಗ ಈ ದೃಶ್ಯಗಳು ಗೋಚರವಾಗುತ್ತಿವೆ.

ಜಿಂಕೆಗಳ ದಂಡು, ಕಾಡುಕೋಣ, ಕಾಡಾನೆ, ನಿರ್ಭಯವಾಗಿ ಹೆಜ್ಜೆಹಾಕುವ ಹುಲಿ, ಆಗೊಮ್ಮೆ ಈಗೊಮ್ಮೆ ಕಾಣುವ ಕರಿಚಿರತೆ ನಾಗರಹೊಳೆಯ ಖ್ಯಾತಿಯನ್ನು ಮತ್ತಷ್ಟು ಪಸರಿಸುವಂತೆ ಮಾಡಿದೆ. ಅರಣ್ಯದಲ್ಲಿರುವ ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರು ಕೆರೆ, ಬಿಲ್ಲೆನಹೊಸಹಳ್ಳಿ ಕೆರೆ, ಭೀಮನಕಟ್ಟೆ, ಬಾಣೇರಿ ಕೆರೆ ಸೇರಿದಂತೆ ಹಲವು ಕೆರೆ- ಕಟ್ಟೆಗಳು ತುಂಬಿದ್ದು, ಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ವನ್ಯಪ್ರಾಣಿಗಳ ವಿಹಾರ ಪರಿಸರ ಪ್ರಿಯರಲ್ಲಿ ಸಂತಸ ಮೂಡಿಸಿದೆ.

” ಬೇಸಿಗೆಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನೀರಿನ ಕೊರತೆಯಾಗದ ರೀತಿಯಲ್ಲಿ ಅಲ್ಲಲ್ಲಿ ಚೆಕ್‌ಡ್ಯಾಮ್ ನಿರ್ಮಾಣ ಮಾಡಿ ನೀರು ಆಚೆ ಹೋಗದಂತೆ ಕಾಪಾಡಿಕೊಂಡಿದ್ದೇವೆ. ಈ ವರ್ಷವೂ ಅದೇ ರೀತಿಯಲ್ಲಿ ನಿರ್ವಹಣೆ ಮಾಡುತ್ತೇವೆ.”

-ಲಕ್ಷ್ಮೀಕಾಂತ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುಣಸೂರು.

” ಕೆಲವು ದಿನಗಳ ಹಿಂದೆ ಮಳೆಯಿಲ್ಲದೆ ಕಾಡು ಪ್ರಾಣಿಗಳು ನೀರಿಗಾಗಿ ಪರಿತಪಿಸುತ್ತಿದ್ದವು. ಆದರೆ ಈಗ ನಾಗರಹೊಳೆ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರು ಸಮೃದ್ಧಿಯಾಗಿದೆ. ಅರಣ್ಯ ಇಲಾಖೆ ಮಳೆಗಾಲದಲ್ಲಿ ತೋಡುಗಳ ಮೂಲಕ ನೀರು ಆಚೆ ಹೋಗದಂತೆ ಅಲ್ಲಲ್ಲಿ ಕೆರೆ ಕಟ್ಟೆಗಳ ಹತ್ತಿರ ಅಡ್ಡಗಟ್ಟಿ ನೀರು ನಿಲ್ಲುವಂತೆ ಮಾಡಬೇಕು. ಇದರಿಂದ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಆಗುವುದಿಲ್ಲ.”

-ಛಾಯ ಸುನಿಲ್, ವನ್ಯಜೀವಿ ಛಾಯಾಗ್ರಾಹಕಿ

Tags:
error: Content is protected !!