ತಾಲ್ಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆ; ಕಂಗಲಾದ ರೈತರು
ಲಕ್ಷಿ ಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಮೇ ಎರಡನೇ ವಾರದಿಂದ ಕೊಡಗಿನಲ್ಲಿ ನಿರಂತರವಾಗಿ ಮುಂಗಾರು ಮಳೆಯು ಸುರಿಯುತ್ತಿದ್ದು, ಇದರಿಂದಾಗಿ ಕೃಷಿ ಫಸಲಿಗೆ ಭಾರಿ ಹಾನಿಯಾಗಿದೆ. ಈ ಬಾರಿಯೂ ಬೆಳೆಹಾನಿಯಿಂದ ರೈತರು ಕಂಗಲಾಗಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ ೨,೩೬೭.೯೨ ಮಿ.ಮೀ. ಮಳೆಯಾಗಿದೆ.
ವಾರ್ಷಿಕವಾಗಿ ಹೆಚ್ಚು ಮಳೆ ಬೀಳುವ ತಾಲ್ಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆಗೆ ದೊಡ್ಡ ಮಟ್ಟದ ಹಾನಿಯಾಗಿದೆ. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ.
ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳಾದ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಮಂಡ್ಯಾ, ಕುಂಬಾರಗಡಿಗೆ, ಕಿಕ್ಕರಹಳ್ಳಿ, ಸೂರ್ಲಬ್ಬಿ, ಕುಡಿಗಾಣ, ಬೀದಳ್ಳಿ, ಕೊಪ್ಪಳ್ಳಿ, ತಡ್ಡಿಕೊಪ್ಪ, ಹರಗ, ಬೆಟ್ಟದಕೊಪ್ಪ, ನಾಡ್ನಳ್ಳಿ, ಕುಂದಳ್ಳಿ, ಬೇಕಳ್ಳಿ, ನಡ್ಲಕೊಪ್ಪ, ಸಿಂಗನಹಳ್ಳಿ, ಹೆಮ್ಮನಗದ್ದೆ ಗ್ರಾಮಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭತ್ತದ ಸಸಿ ಮಡಿ ಮಳೆಯಲ್ಲಿ ಕೊಚ್ಚಿ ಹೋಗಿವೆ. ಕೆಲ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಸಸಿ ಮಡಿ ತಿಂದಿದ್ದರೆ, ಮತ್ತೆ ಕೆಲವೆಡೆ ನಾಟಿ ಮಾಡಿದ ಭತ್ತದ ಗದ್ದೆಗಳು ನೀರಿನಿಂದ ಆವೃತವಾಗಿವೆ.
ಕೆಲ ಗ್ರಾಮಗಳಲ್ಲಿ ರೈತಾಪಿ ವರ್ಗ ಭತ್ತ ನಾಟಿಗಾಗಿ ಗದ್ದೆಗಳನ್ನು ಹದಗೊಳಿಸಿದ್ದು ಮಳೆ ಎಲ್ಲದಕ್ಕೂ ತಡೆಯೊಡ್ಡಿದೆ. ಇದರಿಂದಾಗಿ ನಾಟಿ ಕಾರ್ಯವೂ ವಿಳಂಬವಾಗುತ್ತಿದ್ದು, ರೈತಾಪಿ ವರ್ಗದಲ್ಲಿ ಆತಂಕ ಮನೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ನದಿ, ಕೊಲ್ಲಿಗಳು ಉಕ್ಕಿ ಹರಿಯುತ್ತಿವೆ. ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಕಲ್ಲುಬಂಡೆಗಳು ಉರುಳುತ್ತಿವೆ. ಬಿರುಗಾಳಿ ಸಹಿತ ಮಳೆಗೆ ಮರ-ಗಿಡ ಬುಡಸಮೇತ ಉರುಳಿ ಬೀಳುತ್ತಿವೆ. ಸೂರ್ಲಬ್ಬಿ ಗ್ರಾಮದಲ್ಲಿ ಜಯಂತಿ ಎಂಬವರಿಗೆ ಸೇರಿದ ಎರಡು ಹಸುಗಳು ಶೀತ ಗಾಳಿಯಿಂದ ಮೃತಪಟ್ಟಿವೆ.
ಪ್ರಸಕ್ತ ವರ್ಷ ಇಲ್ಲಿಯವರೆಗೆ ಶಾಂತಳ್ಳಿಗೆ ಸರಾಸರಿ ೧೫೦ ಇಂಚಿನಷ್ಟು ದಾಖಲೆಯ ಮಳೆಯಾಗಿದೆ. ಬೆಟ್ಟದ ತಪ್ಪಲಿನ ಹೆಗ್ಗಡಮನೆ, ಸೂರ್ಲಬ್ಬಿ, ಮಲ್ಲಳ್ಳಿ, ಕೊತ್ನಳ್ಳಿ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ೨೨೦ರಿಂದ ೨೫೦ ಇಂಚಿನಷ್ಟು ಮಳೆಯಾಗಿದ್ದು, ಸೂರ್ಲಬ್ಬಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೩ ಇಂಚು ಮಳೆಯಾಗಿದೆ.
ಕಳೆದ ವರ್ಷ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಆಗಮಿಸಿ ನಡುವೆ ಕೊಂಚ ಬಿಡುವು ನೀಡಿದ್ದರಿಂದ ಕಾಫಿ ಫಸಲು ಕೈಸೇರಿತ್ತು. ಆದರೆ ಈ ವರ್ಷ ಬಿರುಗಾಳಿ ಸಹಿತ ಮಳೆ ಹಾಗೂ ಶೀತದಿಂದ ಕಾಫಿ ಬೆಳೆಗಾರರು ಭಾರೀ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬಾಧಿಸುತ್ತಿರುವ ಕೊಳೆರೋಗದಿಂದ ಕಾಫಿ ಗಿಡಗಳಲ್ಲಿ ಎಲೆಗಳು ಕೊಳೆಯುತ್ತಿದ್ದು, ಕಾಫಿ ಫಸಲೂ ನೆಲ್ಕಕಚ್ಚುತ್ತಿವೆ. ಕಾಳುಮೆಣಸು ಫಸಲಿನ ನಿರೀಕ್ಷೆಯಲ್ಲಿದ್ದ ಕೃಷಿಕರು ನಿರಂತರ ಮಳೆಯಿಂದ ಅದು ಕೂಡ ಬಳ್ಳಿಯಲ್ಲಿ ಫಸಲುಗಟ್ಟುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪುಷ್ಪಗಿರಿಯಲ್ಲಿ ಹುಟ್ಟಿ ಹರಿಯುವ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ಭೋರ್ಗೆರೆಯುತ್ತಿದೆ. ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ.
” ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಮುಂದುವರಿದಿರುವ ಭಾರೀ ಮಳೆಯಿಂದಾಗಿ ಕಾಫಿ ಇನ್ನಿತರೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸೋಮವಾರ ಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಅರೇಬಿಕಾ ಕಾಫಿ ಬೆಳೆಯುತ್ತಾರೆ. ಆದರೆ ಮಳೆಯಿಂದ ಕಾಫಿಯು ಸಂಪೂರ್ಣವಾಗಿ ನೆಲಕಚ್ಚಿದೆ. ಸರ್ಕಾರ ತಕ್ಷಣವೇ ಪರಿಹಾರ ಪ್ಯಾಕೇಜ್ ಘೋಷಿಸಬೇಕು.”
-ಕೆ.ಎಂ.ದಿನೇಶ್, ಅಧ್ಯಕ್ಷರು, ತಾಲ್ಲೂಕು ರೈತ ಸಂಘ, ಸೋಮವಾರಪೇಟೆ
” ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಮನೆಯಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಕೃಷಿ ಭೂಮಿಯಲ್ಲಿ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ಕಾಫಿ, ಕಾಳುಮೆಣಸು ಫಸಲು ಕೊಳೆರೋಗದಿಂದ ನಾಶವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮನೆಗಳ ಸುತ್ತಮುತ್ತ ಅಂತರ್ಜಲ ಹರಿಯುತ್ತಿದೆ. ಸುಸ್ಥಿತಿಯಲ್ಲಿ ಇಲ್ಲದ ಮನೆಗಳ ಗೋಡೆಗಳು ಕುಸಿಯುತ್ತಿವೆ.”
-ಸಜನ್ ಮಂದಣ್ಣ, ಕೃಷಿಕರು, ಶಾಂತಳ್ಳಿ ಗ್ರಾಮ





