ಕೆ.ಆರ್.ನಗರ-ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಒಂದೇ ರಾತ್ರಿ ಸುರಿದ ಮಳೆ ಅವಾಂತರದಿಂದ ರೈತರು ಕಂಗಾಲು
ಭೇರ್ಯ ಮಹೇಶ್
ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಹಿಂಗಾರು ಮಳೆಯ ಅಬ್ಬರ ದಿಂದ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾದರೆ, ಹಲವೆಡೆ ಅನ್ನದಾತರಿಗೆ ನಷ್ಟವುಂಟು ಮಾಡಿದೆ.
ಮಂಗಳವಾರ ರಾತ್ರಿಯಿಡೀ ಸುರಿದ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ, ಕೆರೆಗಳಂತಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಿರ್ಲೆ ಭಾಗದಲ್ಲಿ ಸರಾಸರಿ 55 ಮಿ.ಮೀ. ಮಳೆಯಾಗಿದ್ದು, ಗಂಧನಹಳ್ಳಿ ಗ್ರಾಮದ ಕಪ್ಪಡಿ ಕ್ಷೇತ್ರಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಂತೆ ಇರುವ ಗಂಧನಹಳ್ಳಿ ಬಳಿ ಹಂಪಾಪುರ ಹಳೇ ನಾಲೆಗೆ 7ನೇ ಮೈಲಿಯ ಬಳಿ ಧಾರಾಕಾರವಾಗಿ ಸುರಿದ ಮಳೆಯ ನೀರು ನುಗ್ಗಿದ ಪರಿಣಾಮ ನಾಲೆಯ ಏರಿ ಒಡೆದು ನೀರು ರೈತರ ಜಮೀನುಗಳಿಗೆ ನುಗ್ಗಿದ ಪರಿಣಾಮದಿಂದಾಗಿ ಭತ್ತದ ಬೆಳೆ, ಬಾಳೆ, ನಾಟಿ ಮಾಡಿದ ಅಡಕೆ, ವಿವಿಧ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಇತ್ತ ಕೆ.ಆರ್.ನಗರ ಪಟ್ಟಣದಲ್ಲಿ ಹಿಂಗಾರು ಮಳೆಯ ಆರ್ಭಟಕ್ಕೆ ಜನರು ತತ್ತರಿಸಿದರೆ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ತಹಸಿಲ್ದಾರ್ ಭೇಟಿ: ಗಂಧನಹಳ್ಳಿ ಬಳಿ ಹಂಪಾಪುರ ಹಳೇ ನಾಲೆ 7ನೇ ಮೈಲಿ ಬಳಿ ಒಡೆದು ರೈತರ ಜಮೀನಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ. ಕಸಬಾ ಹೋಬಳಿಯ ಮೂಡಲಕೊಪ್ಪಲು ಬಳಿಯ ರಾಮ
ಸಮುದ್ರ ನಾಲೆಯ 36.00ನೇ ಕಿ.ಮೀ. ನಲ್ಲಿ ನಾಲೆಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದು ನಾಲೆ ಒಡೆದು ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನುಗ್ಗಿ ರೈತರು ಬೆಳೆದ ಬೆಳೆ ಹಾನಿಯಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು
ಕೊಂಡ ಕೆ.ಆರ್.ನಗರ ತಾಲ್ಲೂಕಿನ ತಹಸಿಲ್ದಾರ್ ಜಿ.ಸುರೇಂದ್ರಮೂರ್ತಿ, ರಾಜಸ್ವ ನಿರೀಕ್ಷಕ ಶಶಿಕುಮಾರ್ ಹಾಗೂ ಹಾರಂಗಿ ನೀರಾವರಿ ನಿಗಮದ ಕೆ.ಆರ್.ನಗರ ವಿಭಾಗದ ಎಇಇ ಅಯಾಜ್ ಪಾಷ, ಎಇ ಕಿರಣ್ ಎಇ, ಬಿಂದು ಭೇಟಿ ನೀಡಿ ಪರಿಶೀಲಿಸಿದರು.
ಕೂಡಲೇ ಒಡೆದು ಹೋಗಿರುವ ನಾಲೆ ಏರಿಯನ್ನು ತಾತ್ಕಾಲಿಕವಾಗಿ ಮರಳು ಮೂಟೆಯಿಂದ ಮುಚ್ಚಿ ನೀರು ಹರಿಯದಂತೆ ತಡೆ ನಿರ್ಮಾಣ ಮಾಡಲಾಗಿದೆ. ಬಳಿಕ ಬೆಳೆ ಹಾನಿ ಬಗ್ಗೆ ವರದಿ ಪಡೆದುಕೊಳ್ಳಲಾಯಿತು.
ರೈತರ ಬೇಡಿಕೆ: ಅತಿ ಹೆಚ್ಚು ಮಳೆಯಾದಾಗ ಮಿರ್ಲೆ ಶ್ರೇಣಿ ನಾಲೆಗಳಾದ ಹಂಪಾಪುರ ನಾಲೆ, ಹಳೇ ಹೊಸನಾಲೆ, ನಾಯಿನಾಲೆ, ಹಿರಿನಾಲೆ ಹಾಗೂ ಗೋವಿನ ನಾಲೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಾಗಿ ಹೆಚ್ಚುವರಿ ನೀರು ನಾಲೆಗೆ ಹರಿದು ಬಂದಿದೆ. ಹಂಪಾಪುರ ನಾಲೆಯ 7ನೇ ಮೈಲಿ ಬಳಿ ನಾಲೆ ಒಡೆದು ಬೆಳೆ ಹಾನಿಯಾದರೆ ರೈತರಿಗೆ ಕಷ್ಟವಾಗಲಿದೆ. ಅದ್ದರಿಂದ ತಾಲ್ಲೂಕಿನ ಇತರೆ ನಾಲೆಗಳಾದ ಚಾಮರಾಜ ಎಡದಂಡೆ ಮತ್ತು ಬಲದಂಡೆ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಂಡಂತೆ ಈ ಕಾಲುವೆಗಳ ಕಾಂಕ್ರೀಟ್ ಲೈನಿಂಗ್ ಕಾಮಗಾರಿ ಕೈಗೊಳ್ಳಬೇಕೆಂದು ರೈತರು ಜನಪ್ರತಿನಿಧಿಗಳಿಗೆ, ಸಂಬಂಧ ಪಟ್ಟ ಇಲಾಖೆಯವರಿಗೆ ಮನವಿ ಮಾಡಿದ್ದಾರೆ.
ಹೋಬಳಿಗಳಲ್ಲಿ ಮಂಗಳವಾರ (ಅ.22) ರಾತ್ರಿ ಸುರಿದ ಮಳೆ ಪ್ರಮಾಣ
ಕಸಬಾ: 54.8 ಮಿ.ಮೀ
ಹೆಬ್ಬಾಳು: 54.0 ಮಿ.ಮೀ
ಚುಂಚನಕಟ್ಟೆ: 24.6 ಮಿ.ಮೀ
ಹನಸೋಗೆ: 70.0 ಮಿ.ಮೀ
ಸಾಲಿಗ್ರಾಮ: 42.6 ಮಿ.ಮೀ
ಮಿರ್ಲೆ : 55.0 ಮಿ.ಮೀ.
ಭೇರ್ಯ: 28.8 ಮಿ.ಮೀ
ಒಟ್ಟು ಮಳೆ : 329.8 ಮಿ.ಮೀ.
ಸರಾಸರಿ: 47.1 ಮಿ.ಮೀ ಮಳೆ