Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದುಬಾರೆ ಪ್ರವೇಶವೀಗ ಬಲು ದುಬಾರಿ!

ದೋಣಿ ವಿಹಾರ ಸೇರಿ ಪ್ರವೇಶ ದರ 180 ರೂ.ಗೆ ಏರಿಕೆ; ರಜಾ ದಿನಗಳಲ್ಲಿ 275 ರೂ.
• ಪುನೀತ್ ಮಡಿಕೇರಿ

ಮಡಿಕೇರಿ: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೊಡಗಿನ ಪ್ರಮುಖ ಪ್ರವಾಸಿತಾಣ ದುಬಾರೆಗೆ ಭೇಟಿ ನೀಡಬೇಕು ಎಂದರೆ ಈಗ ಜೇಬು ಗಟ್ಟಿ ಆಗಿರಬೇಕು. ಇಲ್ಲಿನ ಪ್ರವೇಶ ದರವನ್ನು ಅರಣ್ಯ ಇಲಾಖೆ ದುಪ್ಪಟ್ಟು ಏರಿಕೆ ಮಾಡಿದೆ.

ವರ್ಷದ ಹಿಂದೆ ಪ್ರವೇಶ ದರವನ್ನು 150 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಆಗಲೇ ಪ್ರವಾಸಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಅರಣ್ಯ ಇಲಾಖೆ ಮತ್ತೆ ಪ್ರವೇಶ ದರ ಏರಿಕೆ ಮಾಡಿದೆ. ಸಾಮಾನ್ಯ ದಿನಗಳಲ್ಲಿ ಪ್ರವೇಶ ದರವನು ದೋಣಿ ವಿಹಾರ ದರ ಸೇರಿ 180 ರೂ. ಮಾಡಿದ್ದರೆ, ಈ ವರ್ಷದಿಂದ ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ದೋಣಿ ವಿಹಾರಕ್ಕೂ ಸೇರಿ ಬರೋಬ್ಬರಿ 275 ರೂ. ನಿಗದಿಮಾಡಿದೆ.

ಇದಲ್ಲದೆ ಸಾಮಾನ್ಯ ದಿನಗಳಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದನ್ನು ನೋಡಲು ಪ್ರತ್ಯೇಕವಾಗಿ 300 ರೂ. ಪಾವತಿಸಬೇಕು. ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ಇದಕ್ಕೆ 500 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಕ್ಯಾಮೆರಾದಿಂದ ಫೋಟೋ ತೆಗೆಯಲು 400 ರೂ. ಹೆಚ್ಚುವರಿಯಾಗಿ ಕೊಡಬೇಕು.

ಒಟ್ಟಾರೆಯಾಗಿ ಒಬ್ಬ ವ್ಯಕ್ತಿ ದುಬಾರೆ ಸಾಕಾನೆ ಶಿಬಿರದ ಸಂಪೂರ್ಣ ಅನುಭವ ಪಡೆಯಲು ಕನಿಷ್ಠ ಸಾವಿರ ರೂ. ಇಟ್ಟುಕೊಂಡಿರಬೇಕು. ಈ ಮೂಲಕ ನಾಲ್ವರು ಸದಸ್ಯರ ಕುಟುಂಬ ಇಲ್ಲಿಗೆ ಭೇಟಿ ಕೊಟ್ಟರೆ ಅವರ ಕೊಡಗು ಪ್ರವಾಸದ ಸಂಪೂರ್ಣ ಬಜೆಟ್ ಮೊತ್ತವನ್ನು ದುಬಾರೆ ಸಾಕಾನೆ ಶಿಬಿರವೊಂದಕ್ಕೆ ಕಸಿದುಕೊಳ್ಳುವ ಯೋಜನೆಯನ್ನು ಅರಣ್ಯ ಇಲಾಖೆ ಚಾಲ್ತಿಗೆ ತಂದಂತಿದೆ.

ಸೀಮಿತ ಬಜೆಟ್‌ನಲ್ಲಿ ಪ್ರವಾಸ ಕೈಗೊಳ್ಳುವ ಶಾಲಾ ಮಕ್ಕಳಿಗೆ ದುಬಾರೆ ಸಾಕಾನೆ ಶಿಬಿರ ಇನ್ನು ಮುಂದೆ ಕೈಗೆಟುಕದ ನಕ್ಷತ್ರವೇ ಆಗಲಿದೆ. ನದಿಯ ದಡದಲ್ಲಿ ನಿಂತು ದುಬಾರೆ
ಯನ್ನು ಕಣ್ಣುಂಬಿಸಿಕೊಂಡು ಮರಳುವುದಷ್ಟೇ ಇಂಥವರಿಗೆ ಉಳಿದಿರುವ ದಾರಿ ಎಂಬುದು ಸ್ಥಳೀಯ ಪ್ರವಾಸೋದ್ಯಮಿಗಳ ಅಭಿಪ್ರಾಯ.

ಸಾಕಾನೆ ಶಿಬಿರದ ಬಗ್ಗೆ ಕುತೂಹಲ ಇರುವ ಪ್ರವಾಸಿಗರು ಇದನ್ನು ಕಣ್ತುಂಬಿಸಿಕೊಳ್ಳಲು ದೂರದ ಪ್ರದೇಶಗಳಿಂದ ಬರುತ್ತಾರೆ. ಆದರೆ ಇಲ್ಲಿ ಬಂದಾಗ ಬಹುತೇಕರು ದುಬಾರಿ ಪ್ರವೇಶ ದರವನ್ನು ಕೇಳುತ್ತಿದಂತೆಯೇ ನದಿ ದಾಟಿ ಅತ್ತ ಕಡೆ ಹೋಗುವ ಮನಸ್ಸು ಮಾಡುವುದೇ ಇಲ್ಲ, ಬೇರೆ ಕಡೆಗೆ ವಾಹನ ತಿರುಗಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.

ಹಾರಂಗಿ ಅಣೆಕಟ್ಟೆ ಬಳಿ ಜಲಾಶಯದ ಹಿನ್ನೀರು ಪ್ರದೇಶದಲ್ಲೂ ಸಾಕಾನೆ ಶಿಬಿರವೊಂದು ಕಾರ್ಯಾಚರಿಸುತ್ತಿದೆ. ಇಲ್ಲಿಯ ಪ್ರವೇಶ ದರ 50 ರೂ ಮಾತ್ರ. ದುಬಾರೆಗೆ ಹೋಲಿಸಿದರೆ ಇದು ಕಡಿಮೆ ಮೊತ್ತವಾಗಿದೆ. ಹಾರಂಗಿ ಸಾಕಾನೆ ಶಿಬಿರ 2 ವರ್ಷಗಳ ಹಿಂದೆ ಆರಂಭವಾಗಿದ್ದು, ಇತ್ತ ಕಡೆಗೆ ಪ್ರವಾಸಿಗರನ್ನು ಸೆಳೆಯಲು ದುಬಾರೆಯಲ್ಲಿ ಪ್ರವೇಶ ದರ ಹೆಚ್ಚು ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

ಮಂಗಳವಾರ ರಜಾಕ್ಕೆ ವಿರೋಧ: ಮತ್ತೊಂದು ಕಡೆ ದುಬಾರೆ ಸಾಕಾನೆ ಶಿಬಿರ ಮಂಗಳವಾರ ರಜೆ ಕೊಡುತ್ತಿರುವುದಕ್ಕೂ ಪ್ರವಾಸೋದ್ಯಮಿಗಳಿಂದ ವಿರೋಧ ವ್ಯಕ್ತವಾಗಿದೆ. ದುಬಾರೆಯ ಇತಿಹಾಸದಲ್ಲೇ ಇಲ್ಲದಿದ್ದ ರಜೆಯ ಸಂಪ್ರದಾಯ ಈಗ ಶುರುಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ದುಬಾರೆ ಸಾಕಾನೆ ಶಿಬಿರದ ಪ್ರವೇಶ ದರವನ್ನು ದುಪ್ಪಟ್ಟು ಹೆಚ್ಚಳ ಮಾಡುವ ಮೂಲಕ ಅರಣ್ಯ ಇಲಾಖೆ ಹಗಲು ದರೋಡೆಗೆ ಇಳಿದಿದೆ. ಹಾರಂಗಿ ಸಾಕಾನೆ ಶಿಬಿರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಈ ಹುನ್ನಾರ ನಡೆಸಿರುವ ಸಾಧ್ಯತೆ ಇದೆ. ಆನೆ ಶಿಬಿರಕ್ಕೆ ವಾರದ ರಜೆ ಘೋಷಣೆಯ ಸಂಪ್ರದಾಯ ಇರಲಿಲ್ಲ. ಈಗ ಇದೂ ಶುರುವಾಗಿದೆ. ಹಾಗಾಗಿ ಇದನ್ನು ವಿರೋಧಿಸಿ ಮುಂದಿನ ವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
-ಸಿ.ಎಲ್.ವಿಶ್ವ, ಗ್ರಾಪಂ ಅಧ್ಯಕ್ಷ, ನಂಜರಾಯಪಟ್ಟಣ

ಪ್ರತಿ ವರ್ಷವೂ ದುಬಾರೆ ಸಾಕಾನೆ ಶಿಬಿರದ ಪ್ರವೇಶ ದರ ಹೆಚ್ಚಳ ಮಾಡಿ ಕೊಂಡು ಬರಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಉಚಿತವಾಗಿ ಬಿಡಲಾಗುತ್ತದೆ. ಉಳಿದ ಮಕ್ಕಳಿಗೆ ಅರ್ಧ ದರ ತೆಗೆದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾರಂಗಿ ಸಾಕಾನೆ ಶಿಬಿರಕ್ಕೂ ಪ್ರವೇಶ ದರ ಹೆಚ್ಚಳ ಮಾಡಲಾಗುವುದು.
ರತನ್‌ ಕುಮಾರ್‌, ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ

ದುಬಾರೆ ಆನೆ ಶಿಬಿರಕ್ಕೆ ಕಾಲಿಡಲು ಮೊದಲಿಗಿಂತ ಎರಡರಷ್ಟು ಹಣ ಪಾವತಿ ಮಾಡಬೇಕು. ಅರಣ್ಯ ಇಲಾಖೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವುದನ್ನು ಬಿಟ್ಟು ನೇರವಾಗಿ ಅವರ ಜೇಬಿಗೆ ಕೈ ಹಾಕಿದೆ. ಇದು ಸ್ಥಳೀಯ ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.
-ಕೆ.ಜಿ.ಮನು, ಸಾಮಾಜಿಕ ಕಾರ್ಯಕರ್ತ, ಕುಶಾಲನಗರ

Tags: