Mysore
18
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

‘ಹನೂರು: ನೀರಿನ ಅಭಾವ ನಿವಾರಿಸಲು ಶಾಶ್ವತ ಪರಿಹಾರ’

Hanur Villagers struggle for drinking water

ಆಂದೋಲನಕ್ಕೆ ನೀಡಿದ ಸಂದರ್ಶನದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭರವಸೆ 

ಮೈಸೂರು: ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಜಲ ಸಂಕಷ್ಟ ಎದುರಾಗಿರುವುದಕ್ಕೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟ ದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಳ್ಳಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ  ಕೆ.ವೆಂಕಟೇಶ್ ಹೇಳಿದರು.

ಚಾಮರಾಜನಗರ ಜಿಲ್ಲೆಯಹನೂರು ತಾಲ್ಲೂಕಿನ ಹಲವು ಗ್ರಾಪಂ ವ್ಯಾಪ್ತಿಗಳಲ್ಲಿ ಜಲಕ್ಷಾಮ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಮಾಪುರ ಗ್ರಾಪಂನ ಕೆಂಪಯ್ಯನ ಹಟ್ಟಿ (ಪಳನಿ ಮೇಡು)ಯ ಐವರು ವಿದ್ಯಾರ್ಥಿಗಳು ನೀರಿನ ಬರ ನೀಗಿಸಲು ಕ್ರಮವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ವಿಡಿಯೋ ಮೂಲಕ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ‘ಆಂದೋಲನ’ಕ್ಕೆ ಸಚಿವ ಕೆ.ವೆಂಕಟೇಶ್ ಅವರು ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಹನೂರು ತಾಲ್ಲೂಕಿನಲ್ಲಿ ಹಲವೆಡೆ ಕೃಷಿಗೂ ನೀರಿಲ್ಲದೆ ಸಮಸ್ಯೆಯಾಗಿದೆ. ಈ ತಾಲ್ಲೂಕಿನ ಕೆಲ ಮಕ್ಕಳು ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಪತ್ರ ಹಾಗೂ ವಿಡಿಯೋ ಮೂಲಕ ನೀರಿನ ಬವಣೆಯನ್ನು ನೀಗಿಸುವಂತೆ ಮನವಿ ಮಾಡಿದ್ದಾರೆ. ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಲು ಆಲೋಚಿಸಿದ್ದೀರಿ?

ಕೆ.ವೆಂಕಟೇಶ್: ೨-೩ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಅಽಕಾರಿಗಳು ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುತ್ತಿದ್ದಾರೆ. ಎಷ್ಟು ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರು ಬರುವುದಿಲ್ಲ ಎಂದು ಅಽಕಾರಿಗಳು ಹೇಳಿದ್ದಾರೆ. ಎಲ್ಲಿ ನೀರು ಬರುತ್ತದೆಯೋ ಅಲ್ಲಿಂದಲೇ ಪೈಪ್‌ಲೈನ್ ಹಾಕಬೇಕು ಎಂದು ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಒಟ್ಟಾರೆ ನೀರು ಪೂರೈಕೆ ಸಂಬಂಧ ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಸದ್ಯಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ಕ್ರಮವಹಿಸಿದ್ದಾರೆ. ಸಮರ್ಪಕವಾಗಿ ಮಳೆ ಆಗಿಲ್ಲ, ಹಾಗಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅಧಿಕಾರಿಗಳು ಸಮ ಜಾಯಿಷಿ ನೀಡಿದ್ದಾರೆ.

ಮಳೆ ಬಂದರೂ, ಬಾರದಿದ್ದರೂ ಜನರಿಗೆ ನೀರಿಗೆ ತತ್ವಾರ ಎದುರಾಗದಂತೆ ಶಾಶ್ವತ ಯೋಜನೆ ರೂಪಿಸಿ ಎಂದು ಸೂಚಿಸಿದ್ದೇನೆ. ಅಂತರ್ಜಲ ಲಭ್ಯ ಇರುವ ಜಾಗದಲ್ಲಿಯೇ ಬೋರ್‌ವೆಲ್ ಕೊರೆಯಿಸಿ ಶಾಶ್ವತವಾಗಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.

ಆಂದೋಲನ: ಅಂತರ್ಜಲ ಮಟ್ಟ ಕುಸಿದಿದೆ ಎನ್ನಲಾಗಿದೆ. ಅಂತರ್ಜಲ ವೃದ್ಧಿಗೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು?

ವೆಂಕಟೇಶ್: ಮುಖ್ಯವಾಗಿ ನೈಸರ್ಗಿಕವಾಗಿ ಸಮೃದ್ಧ ಮಳೆಯಾಗಬೇಕು. ಅಂತಹ ಸಂದರ್ಭದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಚೆಕ್ ಡ್ಯಾಂ, ಕೃಷಿ ಹೊಂಡಗಳ ನಿರ್ಮಾಣ ಮತ್ತಿತರ ಕ್ರಮಗಳ ಮೂಲಕ ಸಂರಕ್ಷಣೆ ಮಾಡುವುದು ಅಗತ್ಯ. ನಮ್ಮ ಜಿಲ್ಲೆಯಲ್ಲಿ ಚೆಕ್ ಡ್ಯಾಂ, ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ.

ಆಂದೋಲನ: ನಮ್ಮ ವರದಿಗಾರರು, ಫೋಟೋಗ್ರಾಫರ್ ಹನೂರು ತಾಲ್ಲೂಕಿನ ಹಲವು ಗ್ರಾಮಗಳಿಗೆ ಖುದ್ದು ತೆರಳಿ, ಜನತೆ ಅನುಭವಿಸುತ್ತಿರುವ ನೀರಿನ ಬವಣೆಯನ್ನು ಸಮಗ್ರವಾಗಿ ವರದಿ ಮಾಡಿದ್ದಾರೆ. ಕುಡಿಯುವ ನೀರು ಪೂರೈಕೆಗೆ ಸರ್ಕಾರದ ವತಿಯಿಂದ ಕೈಗೊಂಡಿರುವ ಕ್ರಮಗಳು ಯಾವುವು?

ವೆಂಕಟೇಶ್: ಸದ್ಯಕ್ಕೆ ಅಧಿಕಾರಿಗಳು ನೀರು ಪೂರೈಕೆಗೆ ಟ್ಯಾಂಕರ್ ಹೊರತಾಗಿ ಬೇರೆ ವ್ಯವಸ್ಥೆ ಮಾಡಿಲ್ಲ. ಅವರು ಮಳೆಯಾದರೆ ಅಂತರ್ಜಲ ವೃದ್ಧಿಯಾಗುತ್ತದೆ ಎನ್ನುತ್ತಿದ್ದಾರೆ. ಆದರೆ, ಅದು ಒಂದು ಭಾಗ ಮಾತ್ರ. ಜನರಿಗೆ ಶಾಶ್ವತವಾಗಿ ನೀರು ಪೂರೈಕೆಗೆ ಯೋಜನೆ ರೂಪಿಸುವಂತೆ ತಾಕೀತು ಮಾಡಿದ್ದೇನೆ. ಅಂತರ್ಜಲ ಲಭ್ಯ ಇರುವ ಜಾಗ ಮೂರ‍್ನಾಲ್ಕು ಕಿ.ಮೀ. ದೂರ ಇದ್ದರೂ ಬೋರ್ ವೆಲ್ ಕೊರೆಯಿಸಿ, ಪೈಪ್‌ಲೈನ್ ಅಳವಡಿಸುವಮೂಲಕ ನೀರು ಸರಬರಾಜು ಮಾಡುವುದಕ್ಕೆ ತೊಂದರೆ ಆಗುವುದಿಲ್ಲ. ನಗರ ಪ್ರದೇಶಗಳಿಗೆ ೨೦-೩೦ ಕಿ.ಮೀ. ವರೆಗೆ ದೂರದ ಹೊಳೆಯಿಂದ ನೀರು ಪೂರೈಸುತ್ತೇವೆ. ಹಾಗಿರುವಾಗ ಇಲ್ಲಿ ಮೂರ‍್ನಾಲ್ಕು ಕಿ.ಮೀ. ದೂರದಿಂದ ನೀರು ಸರಬರಾಜು ಮಾಡುವುದು ಅಷ್ಟೇನೂ ಕಷ್ಟವಾಗುವುದಿಲ್ಲ. ಹಾಗಾಗಿ ಬೋರ್‌ವೆಲ್ ಕೊರೆಯಿಸಿ ನೀರಿನ ಅಭಾವ ಇರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ. ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಗಳನ್ನು ಕೈಗೊಂಡಿದ್ದಾರೆ.

ಆಂದೋಲನ: ಉಡುತೊರೆ ಹಳ್ಳ ಜಲಾಶಯಕ್ಕೆ ೧೭೦ ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಡಿಪಿಆರ್ ಕೂಡ ಸಲ್ಲಿಕೆಯಾಗಿದೆ. ಇನ್ನೂ ಅನುಮೋದನೆ ಸಲ್ಲಿಕೆಯಾಗಿಲ್ಲ?

ವೆಂಕಟೇಶ್: ಅದೊಂದು ಬಾಕಿ ಇದೆ. ಅದನ್ನು ಮಾಡಿಸಬೇಕು

ಆಂದೋಲನ: ರಾಮನಗುಡ್ಡ, ಹುಬ್ಬೆ ಹುಣಸೆ ಜಲಾಶಯದ ಪೈಪ್‌ಲೈನ್ ಕಾಮಗಾರಿ ಯೋಜನೆ ನನೆಗುದಿಗೆ ಬಿದ್ದಿದೆ. ಇದು ಯಾವಾಗ ಜಾರಿಗೊಳ್ಳಬಹುದು?

ವೆಂಕಟೇಶ್: ಇದಕ್ಕೆಲ್ಲ ಸ್ವಲ್ಪ ಹಣದ ಕೊರತೆ ಇದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಾಗ, ಜಿಲ್ಲೆಗೆ ಹಲವಾರು ಯೋಜನೆಗಳಿಗೆ ಅನುಮೋದನೆದೊರಕಿಸಲಾಗಿದೆ. ಮುಂದಿನ ದಿನಗಳಲ್ಲಿ ಹನೂರು ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಅಭಾವ ಇದೆಯೋ, ಆ ಗ್ರಾಮಗಳಿಗೆ ಶಾಶ್ವತವಾಗಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Tags:
error: Content is protected !!