ಮಹಾದೇಶ್ ಎಂ ಗೌಡ
ಮಾ.೯ರಿಂದ ೫ ದಿನಗಳ ಕಾಲ ನಡೆಯಲಿರುವ ಹಬ್ಬ; ಸಾವಿರಾರು ಜನರು ಸೇರುವ ನಿರೀಕ್ಷೆ
ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಮಾರ್ಚ್ ೯ರಿಂದ ಐದು ದಿನಗಳ ಕಾಲ ನಡೆಯಲಿದ್ದು, ಸಾವಿರಾರು ಭಕ್ತಾದಿಗಳು ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜಾತ್ರೆ ಅಂಗವಾಗಿ ಮಾ.೯ರಂದು ಜಾಗರ ಸಮರ್ಪಣೆ, ೧೦ರಂದು ರಥೋತ್ಸವ, ತಂಪು ಜ್ಯೋತಿ, ೧೧ರಂದು ದೊಡ್ಡಬಾಯಿ ಬೀಗ, ೧೨ ರಂದು ಬೆಳಿಗ್ಗೆ ಅಗ್ನಿಕುಂಡ ದರ್ಶನ,೧೩ ರಂದು ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ತೆಪ್ಪೋತ್ಸವ, ಉಯ್ಯಾಲೋತ್ಸವ ನಡೆಯಲಿದೆ. ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಪಟ್ಟಣದ ಜನತೆ ಗ್ರಾಮ ದೇವತೆಯಾಗಿ ಪೂಜಿಸುತ್ತಿದ್ದಾರೆ. ಈ ಜಾತ್ರೆ ಕೋಮು ಸಾಮರಸ್ಯದ ಸಂಕೇತವಾಗಿದೆ.
ಈಗಾಗಲೇ ಪಟ್ಟಣದಲ್ಲಿ ಕಳೆದ ಮಂಗಳವಾರದಿಂದಲೇ ಮಾಂಸ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಸಾಂಬಾರ ಪದಾರ್ಥಗಳ ಒಗ್ಗರಣೆ, ಗೋಬಿಮಂಚೂರಿ ಹಾಗೂ ಮಾಂಸಾಹಾರಿ ಹೋಟೆಲ್‌ಗಳು ಮುಚ್ಚಿವೆ. ಪಟ್ಟಣದಲ್ಲಿ ವಾಸವಿರುವ ಮುಸ್ಲಿಂ ಸಮುದಾಯದವರೂ ಮಾಂಸಾಹಾರವನ್ನು ತ್ಯಜಿಸಿದ್ದು ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.
ಮೊದಲ ದಿನವಾದ ಮಾರ್ಚ್ ೯ರಂದು ತಡರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಜಾಗರ ಸಮರ್ಪಣೆಗೆ ಜನರು ಒಂದು ವಾರದ ಮುಂಚೆ ಅವರೆ, ಜೋಳ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಮೊಳಕೆ ಬರಿಸಿ ಪ್ರತಿನಿತ್ಯ ನೀರುಣಿಸಿ ಪೂಜೆ ಸಲ್ಲಿಸುವುದರ ಮೂಲಕ ಬೆಳೆಸಿದ ಧಾನ್ಯಗಳ ಪೈರುಗಳನ್ನು (ಜಾಗರ) ದೇವಾಲಯಕ್ಕೆ ಸಮರ್ಪಿಸುತ್ತಾರೆ. ಜಾಗರ ವನ್ನು ಮಕ್ಕಳು, ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಮಧ್ಯರಾತ್ರಿ ದೇವಸ್ಥಾನಕ್ಕೆ ಆಗಮಿಸಿ, ಜಾಗರವನ್ನು ದೇವಿಗೆ ಸಮರ್ಪಣೆ ಮಾಡುತ್ತಾರೆ.
ಎರಡನೇ ದಿನವಾದ ಮಂಗಳವಾರ ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ ಜರುಗಲಿದ್ದು, ಇದೇ ದಿನ ತಂಪು ಜ್ಯೋತಿಯನ್ನು ಸಮರ್ಪಿಸುತ್ತಾರೆ. ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ಚಿಕ್ಕಬಾಯಿ ಬೀಗ, ೩೦ ಅಡಿ ಉದ್ದದ ಸರಳಿನ ದೊಡ್ಡಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಲಿದ್ದಾರೆ.
ನಾಲ್ಕನೆಯ ದಿನ ಗುರುವಾರ ಬೆಳಿಗ್ಗೆ ಮುಂಜಾನೆಯಿಂದಲೇ ಶ್ರೀ ಬೆಟ್ಟಳ್ಳಿ ಮಾರಮ್ಮನಿಗೆ ವಿಽ-ವಿಧಾನಗಳ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ ಅಗ್ನಿಕುಂಡವನ್ನು ಎತ್ತಿ ಈ ವರ್ಷದ ಮಳೆ ಬೆಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಐದನೇ ದಿನ ಶುಕ್ರವಾರ ಪಟ್ಟಣ ವ್ಯಾಪ್ತಿಯ ಆರ್‌ಎಸ್ ದೊಡ್ಡಿ ಗ್ರಾಮಕ್ಕೆ ಉತ್ಸವಮೂರ್ತಿಯನ್ನು ಕೊಂಡೊಯ್ದು ಮೆರವಣಿಗೆ, ತೆಪ್ಪೋತ್ಸವ ನಡೆಸಲಿದ್ದು ನಂತರ ಜಾತ್ರೆಗೆ ತೆರೆ ಬೀಳಲಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಮಂದಿಗೆ ದೇವಸ್ಥಾನದ ವತಿಯಿಂದಲೇ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ದೇವಾಲಯದ ರಾಜಗೋಪುರ ಮತ್ತು ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
” ಐದು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ದೇವಸ್ಥಾನದ ವತಿಯಿಂದ ಒಂದು ವಾರದಿಂದಲೇ ವಿಶೇಷ ಪೂಜೆಗಳು ಪ್ರಾರಂಭವಾಗಿವೆ. ಮಂಗಳವಾರ ಮೂರನೇ ವರ್ಷದ ರಥೋತ್ಸವ ನೆರವೇರಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.”
ರಾಜು ರಾವ್, ಅರ್ಚಕರು, ಬೆಟ್ಟಳ್ಳಿ ಮಾರಮ್ಮ ದೇವಸ್ಥಾನ
” ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಎಸ್‌ಐ, ಎಎಸ್‌ಐ, ಮುಖ್ಯಪೇದೆ, ಮಹಿಳಾ ಪೇದೆಗಳನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ.”
ಆನಂದಮೂರ್ತಿ, ಇನ್‌ಸ್ಪೆಕ್ಟರ್




