ಹೇಮಂತ್‌ಕುಮಾರ್
ರಸ್ತೆ ಬದಿಯ ರೈತರ ಜಮೀನಿನಲ್ಲಿಯೇ ಕಸ ವಿಲೇವಾರಿ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಮಂಡ್ಯ: ನಗರದ ಹೊರವಲಯದ ಸುಮಾರು ೨೨ ಬಡಾವಣೆಗಳ ಪ್ಲಾಸ್ಟಿಕ್ ಘನ ತ್ಯಾಜ್ಯದ ರಾಶಿಯೇ ಹನಿಯಂಬಾಡಿ ರಸ್ತೆಯ ಇಕ್ಕೆಲಗಳಲ್ಲಿ, ಹೆಬ್ಬಳ್ಳ ನಾಲೆಯ ಒಡಲಿಗೆ ಬಂದು ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಈ ಘನತ್ಯಾಜ್ಯವು ಮಣ್ಣಲ್ಲಿ ಕರಗಬೇಕೆಂದರೆ ನೂರು ವರ್ಷಗಳೂ ಸಾಲದು ಎನ್ನಲಾಗಿದೆ. ಮನೆಯ ಉಪಯೋಗಕ್ಕೆ ಬಳಸಲಾಗುವ ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳು, ಅಡುಗೆಗೆ ಬಳಸುವ ವಸ್ತುಗಳ ತ್ಯಾಜ್ಯಗಳು, ಅನುಪಯುಕ್ತ ಕವರ್‌ಗಳು ಸೇರಿದಂತೆ ಅನೇಕ ರೀತಿಯ ಪ್ಲಾಸ್ಟಿಕ್ ಘನತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ.
ರಾತ್ರೋರಾತ್ರಿ ದ್ವಿಚಕ್ರ ವಾಹನ, ಕಾರುಗಳಲ್ಲಿ ಬರುವ ಸುಶಿಕ್ಷಿತ ಜನರು ರಾಮನಹಳ್ಳಿಯ ಗದ್ದೆಗಳ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ. ಪರಿಸರದ ಬಗ್ಗೆ ಅತ್ಯಂತ ಕಾಳಜಿ ವಹಿಸಿ ತಮ್ಮ ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಈ ಸುಶಿಕ್ಷಿತರು, ಹನಿಯಂಬಾಡಿ ರಸ್ತೆಯನ್ನು ಕಸದ ತೊಟ್ಟಿ ಎಂಬಂತೆ ಪರಿಗಣಿಸಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಈ ವ್ಯಾಪ್ತಿಯ ಹೊಸ ಬಡಾವಣೆಗಳು ನಗರಸಭೆಯ ವ್ಯಾಪ್ತಿಗೆ ಬಾರದಿದ್ದರೂ ವಾರಕ್ಕೆ ಎರಡು-ಮೂರು ಬಾರಿ ನಗರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳು ಬರುತ್ತವೆ. ನಿವಾಸಿಗಳು ಒಣಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿದರೆ ಕಸ ಸಂಗ್ರಹದ ಸಿಬ್ಬಂದಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಹೀಗಿದ್ದರೂ ಇಲ್ಲಿನ ನಿವಾಸಿಗಳು ಕಸವನ್ನು ವಾಹನಕ್ಕೂ ಕೊಡಲಾಗದಷ್ಟು ಸೋಮಾರಿಗಳಾಗಿದ್ದಾರೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರ ಮನೆಯಂಗಳ ಸ್ವಚ್ಛವಾಗಿದ್ದರೆ ಸಾಕು. ಊರಿನ ರೈತರ ಜಮೀನು, ಗದ್ದೆ, ಹೊಲ, ನಾಲಾ ಬದಿ ಹೇಗಾದರೂ ಹಾಳಾಗಿ ಹೋಗಲಿ ಎಂಬ ಮನೋಭಾವನೆ ತಾಳಿರುವುದು ಅತ್ಯಂತ ನೋವಿನ ಸಂಗತಿ ಎಂದು ಹನಿಯಂಬಾಡಿ ಜಮೀನಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮರಿಗೌಡ ಬಡಾವಣೆಯಿಂದ ಬೇಲೂರು ತನಕ ಸಾಗುವ ವಿತರಣಾ ನಾಲೆಯನ್ನು ಈ ಬಡಾವಣೆಯ ಕೆಲವರು ಪ್ಲಾಸ್ಟಿಕ್ ತ್ಯಾಜ್ಯಗಳಿಂದಲೇ ಮುಚ್ಚಿದ್ದರು. ‘ಆಂದೋಲನ’ ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡ ನೀರಾವರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇಡೀ ನಾಲೆಯನ್ನು ಸ್ವಚ್ಛಗೊಳಿಸಿ ಮಾನವೀಯತೆ ಮೆರೆದಿದ್ದರು. ಕೆಲ ದಿನಗಳನ್ನು ಮರೆಸಿದ ಬಳಿಕ ಮತ್ತೆ ಇದೇ ಚಾಳಿ ಮುಂದುವರಿಸಿದ್ದಾರೆಂದು ಪ್ರಜ್ಞಾವಂತ ನಾಗರಿಕರು ಸಿಟ್ಟಾಗಿದ್ದಾರೆ.
ರಾಮೇನಹಳ್ಳಿ ಜಮೀನುಗಳಲ್ಲಿನ ರೈತರು ತಮ್ಮ ಸ್ವಂತ ಗಳಿಕೆಯಲ್ಲಿ ಸಾವಿರಾರು ರೂ. ಖರ್ಚು ಮಾಡಿ ಟ್ರಾಕ್ಟರ್‌ಗಳಲ್ಲಿ ಪ್ಲಾಸ್ಟಿಕ್ ಘನ ತ್ಯಾಜ್ಯವನ್ನು ಸಾಗಿಸಿ, ಸ್ವಚ್ಛಗೊಳಿಸಿದ್ದಾರೆ.ಮ ಆ ಮೂಲಕ ತಮ್ಮ ಜಮೀನುಗಳತ್ತ ಮತ್ತೆ ಯಾರೂ ಕಸ ಹಾಕದಂತೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ. ಈ ಜಾಗದಲ್ಲಿ ಕಸ ಹಾಕುವವರು ಮೂರ್ಖರು ಎಂದು ಬೋರ್ಡ್ ಹಾಕಿಸಿದ್ದರೂ ರಾತ್ರೋರಾತ್ರಿ ಕಸ ಎಸೆಯುವವರು ಹೌದು ನಾವು ಮೂರ್ಖರು ಎಂಬುದನ್ನು ಒಪ್ಪಿಕೊಂಡಂತಾಗಿದೆ. ರಾತ್ರಿಯ ವೇಳೆ ಇದೇ ಕೆಲಸ ಮುಂದುವರಿಸಿದ್ದಾರೆ ಎಂದು ಗ್ರಾಮಸ್ಥರು, ರೈತರು ಕಿಡಿಕಾರಿದರು.
ಎಲ್ಲೆಲ್ಲಿ ಕಸ ಹಾಕುತ್ತಿದ್ದರೋ ಅಲೆಲ್ಲ ಬೇಲೂರು ಗ್ರಾಮ ಪಂಚಾಯಿತಿಯು ಎಚ್ಚರಿಕೆಯ ಫಲಕಗಳನ್ನು ಹಾಕಿ ದಂಡ ವಿಧಿಸುವ ಮತ್ತು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ನೀಡಿದೆ. ಆದರೂ ಇದ್ಯಾವುದನ್ನು ಪರಿಗಣಿಸದ ಕೆಲವರು, ಕತ್ತಲಾಗುತ್ತಿದ್ದಂತೆ ವಾಹನಗಳಲ್ಲಿ ಬಂದು ಕಸ ಎಸೆದು ಹೋಗುತ್ತಿರುವುದು ಮಾಮೂಲಾಗಿದೆ. ಈ ಬಗ್ಗೆ ಕೆಲವೊಮ್ಮೆ ಕಸ ಹಾಕುವವರನ್ನು ತಡೆದು ನಿಲ್ಲಿಸಿ ಕೇಳಿದಾಗ ದರ್ಪ, ಉಡಾಫೆಯಿಂದ ಮಾತನಾಡುತ್ತಾರೆ. ನಾನು ಸರ್ಕಾರದ ಜಾಗದಲ್ಲಿ ಕಸ ಹಾಕಿದ್ದೇನೆ ಏನು ಮಾಡುತ್ತಿಯೋ ಮಾಡಿಕೊ ಎನ್ನುತ್ತಾರೆ. ಇಂಥವರಿಗೆ ತಿಳಿ ಹೇಳಲು ಪ್ರಯತ್ನಿಸಿದ ನಮ್ಮ ಪ್ರಯತ್ನವೆಲ್ಲ ವ್ಯರ್ಥವಾಗಿದೆ ಎಂದು ರೈತ ಅನ್ನದಾನಿ ಬೇಸರ ವ್ಯಕ್ತಪಡಿಸಿದರು.
” ಈ ವ್ಯಾಪ್ತಿ ನಗರಸಭೆಗೆ ಸೇರಿಲ್ಲ. ಬೇಲೂರು ಗ್ರಾಮ ಪಂಚಾಯಿತಿಗೆ ಸೇರಿದೆ. ಆದರೂ ನಗರಸಭೆಯವರು ಕಸ ವಿಲೇವಾರಿಗೆ ವಾಹನ ಮತ್ತು ಸಿಬ್ಬಂದಿಯನ್ನು ಕಳಿಸುತ್ತಾರೆ. ನಗರದ ಹೊರವಲಯದಲ್ಲಿರುವ ಹೊಸ ಬಡಾವಣೆಗಳ ನಿವಾಸಿಗಳು ಕಸದ ವಾಹನಕ್ಕೆ ಕಸ ಹಾಕದಷ್ಟು ನಿರ್ಲಕ್ಷ ತಾಳಿದ್ದಾರೆಂದರೆ ಅಂತಹವರನ್ನು ನಾಗರಿಕರೆನ್ನಲು ಸಾಧ್ಯವೇ?.”
-ಅನ್ನದಾನಿ, ರಾಮನಹಳ್ಳಿ ಜಮೀನಿನ ರೈತ
” ಬೇಲೂರು ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ಆದ್ಯ ಗಮನ ನೀಡಬೇಕಿದೆ. ಕೇವಲ ಬೋರ್ಡ್ ಹಾಕಿ ಕುಳಿತರೆ ಪ್ರಯೋಜನವಿಲ್ಲ. ಕಸ ಎಸೆಯುವವರನ್ನು ಕಂಡು ಹಿಡಿದು ದಂಡ ವಿಧಿಸುವ ಕೆಲಸವಾಗಬೇಕು. ಆಗ ಬೇರೆಯವರೂ ಎಚ್ಚೆತ್ತುಕೊಳ್ಳುತ್ತಾರೆ. ನಾಗರಿಕರು ಕೂಡ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಅಪಾಯಗಳನ್ನು ಅರಿತು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು.”
-ಎಚ್.ಆರ್.ಅಶೋಕ್‌ಕುಮಾರ್, ಅಧ್ಯಕ್ಷರು, ನಗರದ ಹೊರವಲಯದ ಬಡಾವಣೆಗಳ ಅಭಿವೃದ್ಧಿ ಸಂಘ





