Mysore
27
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಎಚ್.ಡಿ.ಕೋಟೆ ಪೊಲೀಸ್ ಕ್ಯಾಂಟೀನ್ ಬಂದ್

ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ 

ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ, ಸರ್ಕಾರಿ ನೌಕರರಿಗೆ ಕಡಿಮೆ ದರದಲ್ಲಿ ಪ್ರತಿನಿತ್ಯ ತಿಂಡಿ, ಊಟ ದೊರೆಯುತ್ತಿದ್ದ ಇಲ್ಲಿನ ಪೊಲೀಸ್ ಕ್ಯಾಂಟೀನ್ ಬಂದ್ ಆಗಿದೆ.

ಹಿಂದುಳಿದ ತಾಲ್ಲೂಕು ಕೇಂದ್ರ ಸ್ಥಾನವಾಗಿರುವ ಪಟ್ಟಣದ ಪೊಲೀಸ್ ಠಾಣೆ ಸಮೀಪ ಈ ಭಾಗದ ಎಲ್ಲಾ ವರ್ಗದ ಜನರಿಗೆ ಬಡವರಿಗೆ ಉಪಯೋಗವಾಗಲೆಂದು ೯ ವರ್ಷಗಳ ಹಿಂದೆ ಮೈಸೂರಿನ ಎಸ್‌ಪಿ ಆಗಿದ್ದ ರವಿ ಚನ್ನಣ್ಣನವರ್ಅವರು ಕೋಟೆ ಪಟ್ಟಣ ಸೇರಿದಂತೆ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆ ಸಮೀಪದಲ್ಲಿ ಪೊಲೀಸ್ ಕ್ಯಾಂಟೀನ್ ಪ್ರಾರಂಭಿಸಿದ್ದರು.

ಪಟ್ಟಣದ ಪೊಲೀಸ್ ಠಾಣೆ ಬಳಿ ಪೊಲೀಸ್ ಕ್ಯಾಂಟೀನ್ ತೆರೆದು ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೇ ಇದ್ದುದರಿಂದ ಏಳು ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು. ನಂತರ ಪಟ್ಟಣದ ನಿವಾಸಿ ಉಡುಪಿಯ ಅರುಣ್ ರವರು ಪೊಲೀಸ್ ಕ್ಯಾಂಟೀನ್ ಅನ್ನು ಪ್ರಾರಂಭಿಸಿ ೨೦ ರೂ.ಗೆ ತಿಂಡಿ, ೩೦ ರೂ.ಗೆ ರುಚಿಕರವಾದ ಊಟವನ್ನು ನೀಡುತ್ತಿದ್ದರು. ಪ್ರತಿನಿತ್ಯ ೪೦೦ಕ್ಕೂ  ಹೆಚ್ಚು ವಿದ್ಯಾರ್ಥಿ ಗಳು ಕೂಲಿ ಕಾರ್ಮಿಕರು, ಬಡವರು, ಪೊಲೀಸ್ ಠಾಣೆಗೆ ದೂರು ನೀಡಲು ಬರುತ್ತಿದ್ದವರು, ನೌಕರ ವರ್ಗದವರು ಇಲ್ಲಿ ತಿಂಡಿ ಮತ್ತು ಊಟ ಮಾಡುತ್ತಿದ್ದರು. ತಾಲ್ಲೂಕಿನಿಂದ ಪಟ್ಟಣಕ್ಕೆ ಕೆಲಸ ಕಾರ್ಯಗಳಿಗೆ, ಶಾಲಾ ಕಾಲೇಜಿಗೆ ಆಗಮಿಸುತ್ತಿದ್ದವರು ಕೂಡ ಕಡಿಮೆ ದರದಲ್ಲಿ ಆಹಾರ ಸೇವಿಸಲು ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಆದರೆ, ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಸೂಚನೆಯಿಂದ ಕೋಟೆ ಪಟ್ಟಣ ಸೇರಿದಂತೆ ಜಿಲ್ಲೆಯ ಐದು ಭಾಗಗಳಲ್ಲಿನ ಪೊಲೀಸ್ ಕ್ಯಾಂಟೀನ್‌ಗಳು ಬಂದ್ ಆಗಿವೆ. ಇದರಿಂದಾಗಿ ಕಡಿಮೆ ದರದಲ್ಲಿ ಊಟ, ತಿಂಡಿ ಸೇವಿಸಲು ಆಗಮಿಸಿದ ಪ್ರತಿಯೊಬ್ಬರೂ ನಿರಾಶರಾಗಿ ಹೆಚ್ಚು ಹಣ ತೆತ್ತು ಹೋಟೆಲ್‌ಗಳಲ್ಲಿ ಊಟ, ತಿಂಡಿ ಸೇವಿಸುವಂತಾಗಿದೆ. ಕೆಲವರು ಹಸಿವಿನಲ್ಲೇ ತಮ್ಮ ಮನೆಗಳಿಗೆ ತೆರಳುವ ಪರಿಸ್ಥಿತಿ ಎದುರಾಗಿದೆ.

ಜಿಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳು ಮತ್ತು ತಾಲ್ಲೂಕಿನ ಶಾಸಕರು ಬಡವರಿಗೆ ಉಪಯುಕ್ತ ವಾಗಿರುವ ಇಂತಹ ಕ್ಯಾಂಟೀನ್‌ಗಳನ್ನು ಪುನರಾರಂಭಿಸಿ ಬಡವರ ಹಸಿವು ನೀಗಿಸಲು ಮುಂದಾಗಬೇಕಿದೆ.

” ಜಿಲ್ಲೆಯ ಕೆಲವು ಪೊಲೀಸ್ ಕ್ಯಾಂಟೀನ್‌ಗಳು ದೂರುದಾರರು, ಪೊಲೀಸರು, ಮಧ್ಯವರ್ತಿಗಳ ಅಡ್ಡಾಗಳಾಗಿ ಕೆಲಸ ನಿರ್ವಹಿಸುತ್ತಿದ್ದವು. ಇದರಿಂದಾಗಿ ಮೇಲಧಿಕಾರಿಗಳ ಸೂಚನೆಯಂತೆ ಯಾವ ಪೊಲೀಸ್ ಕ್ಯಾಂಟೀನ್‌ಗಳು ಕೂಡ ಕಾರ್ಯನಿರ್ವಹಿಸಬಾರದೆಂದು ಸೂಚಿಸಲಾಗಿದೆ.”

-ನಾಗೇಶ್, ಎಎಸ್‌ಪಿ

” ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಕ್ಯಾಂಟೀನ್ ನಡೆಸುತ್ತಿರುವ ಎಲ್ಲರಿಗೂ ಸೋಮವಾರದಿಂದ ಕ್ಯಾಂಟೀನ್ ನಡೆಸಬಾರದೆಂದು ಪೊಲೀಸ್ ಅದಿಕಾರಿ ಸೂಚಿಸಿದ್ದರಿಂದ ಬಂದ್ ಮಾಡಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೂ ತಿಂಡಿ ಮತ್ತು ಊಟಕ್ಕಾಗಿ ಬಂದ ನೂರಾರು ಬಡವರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ವಾಪಸ್ ಹೋಗಿದ್ದಾರೆ.”

-ಉಡುಪಿ ಅರುಣ್, ಕ್ಯಾಂಟೀನ್ ನಿರ್ವಾಹಕ

Tags:
error: Content is protected !!