ಮಹೇಂದ್ರ ಹಸಗೂಲಿ
ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ
ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದು, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಕೊಂಡಿರುವುದರಿಂದ ಜನರ ಓಡಾಟಕ್ಕೆ ಸ್ಥಳವಿಲ್ಲದಂತಾಗಿದೆ. ರಸ್ತೆ ಬದಿಯ ಪಾದಚಾರಿ ಮಾರ್ಗ ಒತ್ತುವರಿಯಿಂದಾಗಿ ಜನರು ರಾಷ್ಟ್ರೀಯ ಹೆದ್ದಾರಿಯಲ್ಲೇ ಓಡಾಡಬೇಕಾಗಿದ್ದು, ವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದೆ. ಅಲ್ಲದೆ ಹೆದ್ದಾರಿ ಬದಿಯ ಫುಟ್‌ಪಾತ್‌ಗಳಲ್ಲಿ ಫಾಸ್ಟ್‌ಫುಡ್ ವ್ಯಾಪಾರ, ವಾಹನಗಳ ನಿಲುಗಡೆ ಮಾಡಲಾಗುತ್ತಿದೆ.
ಪಟ್ಟಣದ ಪುರಸಭೆ ಕಚೇರಿ ಬಳಿಯೇ ಫುಟ್‌ಪಾತ್ ಒತ್ತುವರಿ ಮತ್ತು ವಿರೂಪಗೊಳಿಸಿದ್ದು, ಪುರಸಭೆ ಮುಖ್ಯಾಧಿಕಾರಿ ಕಣ್ಣುಮುಚ್ಚಿ ಕುಳಿತಿದ್ದಾರೆ. ಫುಟ್‌ಪಾತ್ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಸ್ಥಳಗಳನ್ನು ತೆರವು ಮಾಡಬೇಕು. ಸುರಭಿ ಹೋಟೆಲ್‌ನಿಂದ ಹೊಸ ಪ್ರವಾಸಿ ಮಂದಿರದವರೆಗೆ ಆಗಿರುವ ಒತ್ತುವರಿಯನ್ನು ತೆರವು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೇರಳ ಮತ್ತಿತರ ರಾಜ್ಯಗಳಲ್ಲಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ರೈಲಿಂಗ್ಸ್ ಅಳವಡಿಸಿದ್ದು, ಸುಸಜ್ಜಿತ ಪಾದಚಾರಿ ಮಾರ್ಗ ಗಳನ್ನು ನಿರ್ಮಿಸಲಾಗಿರುತ್ತದೆ. ಅದೇ ರೀತಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
” ರಾಷ್ಟ್ರೀಯ ಹೆದ್ದಾರಿ ಬದಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವ ಎಲ್ಲ ಅಂಗಡಿ, ಹೋಟೆಲ್ ಮಾಲೀಕರೂ ಎರಡು ವಾರಗಳಲ್ಲಿ ತೆರವು ಮಾಡದಿದ್ದರೆ, ಹೆದ್ದಾರಿ ಬದಿ ರೈಲಿಂಗ್ಸ್ ಅಳವಡಿಸುವ ಕಾಮಗಾರಿ ನಡೆಯಲಿದ್ದು, ಪುರಸಭೆಯಿಂದ ತೆರವು ಮಾಡಲಾಗುತ್ತದೆ. ಹೆದ್ದಾರಿ ಬದಿ ಮಾರ್ಗ ವಿರೂಪಗೊಳಿಸಬಾರದು ಎಂದು ಈಗಾಗಲೇ ತಿಳಿಸಲಾಗಿದೆ.”
ಸರವಣ, ಪುರಸಭೆ ಮುಖ್ಯಾಧಿಕಾರಿ
” ಗುಂಡ್ಲುಪೇಟೆ ಪಟ್ಟಣದಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗಿದೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬದಿ ಫುಟ್‌ಪಾತ್ ಒತ್ತುವರಿ ಮಾಡಿ, ವಿರೂಪಗೊಳಿಸಿದ್ದು ಪಾದಚಾರಿಗಳು ಓಡಾಡಲು ಜಾಗವಿಲ್ಲದಂತಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದರೆ ಯಾರು ಹೊಣೆ?”
ಮುನೀರ್ ಪಾಷ, ಗಡಿನಾಡು ರಕ್ಷಣಾ ಸೇನೆ ಅಧ್ಯಕ್ಷ





