Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಗಬ್ಬು ನಾರುತ್ತಿದೆ ಗುಂಡ್ಲುಪೇಟೆ ಎಪಿಎಂಸಿ

Gundlupet APMC

ಮಹೇಂದ್ರ ಹಸಗೂಲಿ

ಚರಂಡಿ ತುಂಬಾ ಕಸದ ರಾಶಿ, ಅನೈರ್ಮಲ್ಯ; ಸಾರ್ವಜನಿಕರ ಆಕ್ರೋಶ

ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಇರುವ ಚರಂಡಿ ತುಂಬಾ ಕಸದ ರಾಶಿ, ಕೊಳೆತ ತರಕಾರಿಗಳು ಹಾಗೂ ತ್ಯಾಜ್ಯಗಳು ತುಂಬಿದ್ದು, ರಸ್ತೆಯ ಬದಿಯಲ್ಲಿ ಕೊಳೆತ ಟೊಮೊಟೊ, ಕಸ, ತ್ಯಾಜ್ಯಗಳ ರಾಶಿ ರಾರಾಜಿಸುತ್ತಿದ್ದರೂ ಸಂಬಂಧಪಟ್ಟವರು ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪಟ್ಟಣದ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ತಾಲ್ಲೂಕಿನ ಎಲ್ಲಾ ಗ್ರಾಮಗಳಿಂದ ರೈತರು ತರಕಾರಿ ಮಾರಾಟ ಮಾಡಲು ಬರುತ್ತಾರೆ. ಅಲ್ಲದೇ ನಂಜನ ಗೂಡು, ಎಚ್.ಡಿ. ಕೋಟೆ ತಾಲ್ಲೂಕಿನಿಂದಲೂ ಗುಂಡ್ಲುಪೇಟೆ ಮಾರುಕಟ್ಟೆಗೆ ತರಕಾರಿ ಬರುತ್ತದೆ.

ಪ್ರತಿನಿತ್ಯ ಹೆಚ್ಚು ವಹಿವಾಟು ನಡೆಯುವ ಮಾರುಕಟ್ಟೆ ಇದಾಗಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಮಾರುಕಟ್ಟೆಯಲ್ಲಿ ರಸ್ತೆಗಳೆಲ್ಲ ಗುಂಡಿಬಿದ್ದು ಸಂಚರಿಸಲಾಗದ ಸ್ಥಿತಿ ಉಂಟಾಗಿದೆ. ಚರಂಡಿಗಳು ಹೂಳು ತುಂಬಿಕೊಂಡು ಅನೈರ್ಮಲ್ಯ ಉಂಟಾಗುವ ಭೀತಿ ಎದುರಾಗಿದೆ. ಶುದ್ದ ಕುಡಿಯುವ ನೀರಿನ ಘಟಕವಿಲ್ಲ, ವಿಶ್ರಾಂತಿ ಗೃಹವಿಲ್ಲ, ಶೌಚಾಲಯವೂ ಇಲ್ಲ. ಇದರಿಂದ ಇಲ್ಲಿಗೆ ಬರುವವರಿಗೆ ಬಹಳ ತೊಂದರೆಯಾಗಿದೆ.ಆದರೆ, ಈ ಬಗ್ಗೆ ಎಪಿಯಂಸಿ ಆಡಳಿತ ಮಂಡಳಿ ಗಮನಹರಿಸುತ್ತಿಲ್ಲ ಎನ್ನುವುದು ಕೇಳಿಬರುತ್ತಿರುವ ಆರೋಪ.

ತರಕಾರಿ ಖರೀದಿಸಲು ಪಕ್ಕದ ತಮಿಳುನಾಡು, ಕೇರಳದಿಂದ ಎಪಿಎಂಸಿಮಾರುಕಟ್ಟೆಗೆ ಬರುವ ವ್ಯಾಪಾರಿಗಳು ಇಲ್ಲಿನ ಅಶುಚಿತ್ವ ನೋಡಿ ಅಪಹಾಸ್ಯ ಮಾಡುವ ಪರಿಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಎಪಿಎಂಸಿ ಆಡಳಿತ ಮಂಡಳಿ ಎಪಿಎಂಸಿ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.

” ಎಪಿಎಂಸಿ ತುಂಬಾ ಅಶುಚಿತ್ವ ತಾಂಡವವಾಡುತ್ತಿದೆ. ಕೆಲವರು ತ್ಯಾಜ್ಯವನ್ನು ಪಕ್ಕದ ಖಾಸಗಿ ಜಾಗಕ್ಕೆ ಹಾಕುವುದರಿಂದ ದುರ್ವಾಸನೆ ಬರುವುದಲ್ಲದೆ ಸುತ್ತಮುತ್ತಲಿನ ಪ್ರದೇಶವೂ ಅನೈರ್ಮಲ್ಯದಿಂದಕೂಡಿದೆ. ಹಾಗಾಗಿ ಶೀಘ್ರದಲ್ಲಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಎಪಿಎಂಸಿ ಆವರಣವನ್ನು ಅಭಿವೃದ್ಧಿಪಡಿಸಬೇಕು.”

-ವೆಂಕಟೇಶ್, ಪಟ್ಟಣ ನಿವಾಸಿ

” ಎಪಿಎಂಸಿ ಆವರಣದಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛತೆಗೆ ಕ್ರಮಕೈಗೊಂಡಿದ್ದು, ಈಗಾಗಲೇ ಸ್ವಚ್ಛತಾ ಕೆಲಸ ಪ್ರಾರಂಭವಾಗಿದೆ. ಎಪಿಎಂಸಿ ರಸ್ತೆ ಅಭಿವೃದ್ಧಿ ಮಾಡಲು ನಮ್ಮ ಮುಖ್ಯ ಕಚೇರಿಗೆ ಪತ್ರ ಬರೆಯಲಾಗಿತ್ತು. ಅಂದಾಜು ಪಟ್ಟಿ ಸಲ್ಲಿಸಲು ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಕೆಲಸವೂ ಆಗುವ ನಿರೀಕ್ಷೆ ಇದೆ.”

-ಶ್ರೀಧರ್, ಕಾರ್ಯದರ್ಶಿ, ಎಪಿಎಂಸಿ

Tags:
error: Content is protected !!