Mysore
18
few clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮಗಳು, ಮೊಮ್ಮಗಳ ಜೀವ ಉಳಿಸಿ ಕತ್ತಲಲ್ಲಿ ಕಣ್ಮರೆಯಾದ ಅಜ್ಜಿ

  • ಸಾಲೋಮನ್‌

ಮೈಸೂರು: ಕಾರ್ಗತ್ತಲ ಇರುಳಲ್ಲಿ ಧೋ… ಎಂದು ಸುರಿಯುತ್ತಿದ್ದ ಮಳೆಯ ಜೊತೆಗೆ ಕಿವಿಗಪ್ಪಳಿಸುವ ಮಿಂಚು ಗುಡುಗಿನ ಶಬ್ದ. ಮನೆ ಮುಳುಗಡೆಯಾಗುವ ಆತಂಕ… ಮೊದಲು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸ ಬೇಕೆಂದುಕೊಂಡ ಹಿರಿಯ ಜೀವ, ಮೊದಲು ಮಗಳು, ಮೊಮ್ಮಗಳನ್ನು ಮನೆ ಆಟ್ಟದ ಮೇಲಕ್ಕೆ ಕಳುಹಿಸಿ, ಇನ್ನೇನು ತಾನು ಹತ್ತಬೇಕು ಎನ್ನುವಷ್ಟ ರಲ್ಲಿ ನೆಲ ಕುಸಿಯಿತು! ಕ್ಷಣ ಮಾತ್ರದಲ್ಲಿ ಅಜ್ಜಿ ಕಾರಿರುಳಲ್ಲಿ ಪ್ರವಾಹದಲ್ಲಿ ಕಣ್ಮರೆಯಾಗಿಬಿಟ್ಟರು…

ಇದು ವಯನಾಡಿನ ‘ವೆಲ್ಲಮಲಾ ಶಾಲೆ ಸಮೀಪದಲ್ಲಿ ನಡೆದ ಘಟನೆ. ದುರಂತದಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿ ಸ್ಮಶಾನವಾದ ಪ್ರದೇಶದಿಂದ ರಾತೋರಾತ್ರಿ ಜೀವ ಉಳಿಸಿಕೊಂಡು ಗಡಿಭಾಗದ ಮೇಪ್ಪಾಡಿಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಮಹೇಶ್ ‘ಆಂದೋಲನ’ ದಿನಪತ್ರಿಕೆಯೊಂದಿಗೆ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.

ಘಟನೆ ನಡೆದ ಆ ಕರಾಳ ರಾತ್ರಿಯಲ್ಲಿ ‘ಸೆಂಟ್ರಲ್ ರಾಕ್ ಎಸ್ಟೇಟ್’ನಲ್ಲಿದ್ದ ಮಹೇಶ್ ಹಾಗೂ ಅವರ ತಂದೆ-ತಾಯಿಯನ್ನು ನೆರೆಮನೆಯವರು ಕೂಗಿ ಕೊಂಡು ಎಚ್ಚರಿಸಿದಾಗ ರಾತ್ರಿ 1.30. ಅಕ್ಕ ಪಕ್ಕದ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿತ್ತು. ಅದರಿಂದ ಆ ಮನೆಗಳವರು ಸುರಕ್ಷತೆಗಾಗಿ ಎತ್ತರದ ಪ್ರದೇಶದ ಕಡೆಗೆ ಹೋಗುತ್ತಿದ್ದರು. ಎಸ್ಟೇಟ್‌ನಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಇದ್ದರು, ಸುಮಾರು 20 ಮಂದಿ ಎಚ್ಚೆತ್ತು ಬೇರೆ ಸ್ಥಳಕ್ಕೆ ಹೋದರು. ಒಂದಷ್ಟು ಜನರು ಪ್ರವಾಹದಲ್ಲಿ ಕೊಚ್ಚಿ ಹೋದರು ಎಂದು ತಿಳಿದು ಬಂತು. ಬಹಳ ಕತ್ತಲು ಇದ್ದುದರಿಂದ ಸುತ್ತಲೂ ಏನು ನಡೆಯುತ್ತಿದೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಕೊಚ್ಚಿಹೋದ ಅಜ್ಜಿಯ ಬದುಕುಳಿದ ಮಗಳು, ಮೊಮ್ಮಗಳು ನನ್ನೊಂದಿಗೆ ದುರಂತವನ್ನು ವಿವರಿಸಿದರು ಎಂದು ಮಹೇಶ್ ಸ್ಮರಿಸಿದರು.

ಅದು ಮಂಜರೆ ಗ್ರಾಮ, ಸುಮಾರು 500 ಮನೆಗಳಿದ್ದಿರಬಹುದು. ಅವುಗಳೆಲ್ಲ ಕೊಚ್ಚಿಹೋಗಿವೆ. ಬೆಳಿಗ್ಗೆ 6 ಗಂಟೆ ಹೊತ್ತಿಗೆ ಸೂರ್ಯೋದಯ ವಾದಾಗಲೇ, ಇಡೀ ಪ್ರದೇಶ ಕೊಚ್ಚಿ ಹೋಗಿ ಕೆಸರು ಗದ್ದೆಯಂತಾಗಿದ್ದು ಗೊತ್ತಾಯಿತು. ನಿತ್ಯ ನಮ್ಮೊಟ್ಟಿಗೆ ಪ್ರೀತಿಯಿಂದ ಮಾತನಾಡುತ್ತಾ ಕಷ್ಟು ಸುಖ ಹಂಚಿಕೊಂಡವರು ಬೆಳಗಾಗುವಷ್ಟರಲ್ಲಿ ಕಣ್ಣೆದುರೇ ಹೆಣವಾಗಿ ಇಡೀ ದೇಹವೆಲ್ಲ ಸಂಪೂರ್ಣ ಕೆಸರಾಗಿ ಗುರುತೇ ಸಿಗದಂತಾಗಿದ್ದವು ಎಂದ ಮಹೇಶ್ ಅವರ ಧ್ವನಿಯಲ್ಲಿ ಅಪಾರ ನೋವು ಇತ್ತು.

“ಅದು ನನ್ನ ಬದುಕಿನ ಕರಾಳ ರಾತ್ರಿ’
ಸೋಮವಾರ ರಾತ್ರಿ ಬದುಕಿನ ಕರಾಳ ರಾತ್ರಿಯಾಗಿದ್ದು, ಮಂಗಳವಾರ ಮುಂಜಾನೆ ಆ ಭೀಕರತೆಯನ್ನು ನೋಡಿ ಇಡೀ ದೇಹ ಕಂಪಿಸುತ್ತಿತ್ತು. ಈ ಸುಂದರ ಪ್ರದೇಶ ಹೀಗೆ ಕೆಸರಿನಂತೆ ಆಗುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಅಚ್ಚ ಹಸಿರಾಗಿ ಮೋಹಕ ನಗು ಬೀರುತ್ತಿದ್ದ ಊರನ್ನೇ ಆಪೋಶನ ತೆಗೆದುಕೊಂಡು ರೌದ್ರ ರೂಪ ತಾಳಿ ಅಟ್ಟಹಾಸ ಮೆರೆಯುತ್ತಿದೆ ಅನಿಸುತ್ತಿದೆ.

ಮಹೇಶ್, ಮೇಪ್ಪಾಡಿ, ವಯನಾಡು ಜಿಲ್ಲೆ, ಕೇರಳ

 

Tags:
error: Content is protected !!