Mysore
20
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಸರ್ಕಾರಿ ಶಾಲೆ ಬಾಲಕಿಯರಿಗೆ ಬಯಲೇ ಶೌಚಾಲಯ!

ದೊಡ್ಡಕವಲಂದೆ: 3 ವರ್ಷಗಳಾದರೂ ನಿರ್ಮಾಣವಾಗದ ಶೌಚಾಲಯ; ಗುತ್ತಿಗೆದಾರ ನಾಪತ್ತೆ
ಶ್ರೀಧರ್ ಆರ್. ಭಟ್

ನಂಜನಗೂಡು: ಸ್ವಚ್ಛತೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ ರೂ. ಖರ್ಚು ಮಾಡಿದರೂ ತಾಲ್ಲೂಕಿನ ದೊಡ್ಡಕವಲಂದೆಯ ಸರ್ಕಾರಿ ಶಾಲೆಯ ಹೆಣ್ಣುಮಕ್ಕಳಿಗೆ ಬಯಲು ಶೌಚಾಲಯವೇ ಗತಿ ಯಾಗಿರುವುದು ವಿಪರ್ಯಾಸ.

೧ರಿಂದ ೭ನೇ ತರಗತಿಯವರೆಗೆ ೧೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಈ ಸರ್ಕಾರಿ ಶಾಲೆಯ ಶೌಚಾಲಯದ ಬವಣೆ ನೀಗಲು ೨೦೨೦-೨೧ರಲ್ಲಿ ಸರ್ಕಾರ ೩. ೩೭ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ಅನುದಾನ ಬಿಡುಗಡೆಯಾಗಿದೆ ಎಂದು ಶೌಚಾಲಯ ನಿರ್ಮಾಣಕ್ಕೆ ಟೆಂಡರ್ ಕರೆದು ಭೂಮಿ ಪೂಜೆಯನ್ನೂ ನೆರವೇರಿಸಿ ‘ಇನ್ನಾರು ತಿಂಗಳಲ್ಲಿ ಹೈಟೆಕ್ ಶೌಚಾಲಯ ಲೋಕಾರ್ಪಣೆ’ ಎನ್ನುವ ಘೋಷಣೆಯೂ ಆಯಿತು.

ಇದಾಗಿ ೩ ವರ್ಷಗಳು ಕಳೆದರೂ ಶೌಚಾಲಯ ಕಟ್ಟಡ ಮೇಲೇಳಲೇ ಇಲ್ಲ. ಹೀಗಾಗಿ ೫೫ಕ್ಕೂ ಹೆಚ್ಚು ಬಾಲಕಿಯರು, ಶಿಕ್ಷಕಿಯರು ಅನಿವಾರ್ಯವಾಗಿ ಬಯಲು ಶೌಚಾಲಯವನ್ನು ಅವಲಂಬಿಸಬೇಕಾಗಿದೆ.

ಬಿಡುಗಡೆಯಾದ ೩. ೩೭ ಲಕ್ಷ ರೂ. ಏನಾಯಿತು? ಭೂಮಿಪೂಜೆ ನೆರವೇರಿಸಿದ ಗುತ್ತಿಗೆದಾರ ಎಲ್ಲಿ ಹೋದ? ೩ ವರ್ಷಗಳಾದರೂ ಇಲಾಖೆ ಏನು ಮಾಡುತ್ತಿದೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು ಉತ್ತರಿಸುವವರಾರು? ಈ ಶಾಲೆಯ ಮುಖ್ಯಶಿಕ್ಷಕರು ಈ ಕುರಿತು ಕಾಮಗಾರಿಯ ಹೊಣೆ ಹೊತ್ತಿದ್ದ ದೊಡ್ಡಕವಲಂದೆ ಗ್ರಾಪಂಗೆ ೯ ಬಾರಿ ಪತ್ರ ಬರೆದಿದ್ದರೂ ಅಲ್ಲಿಂದ ಉತ್ತರ ಬಂದಿಲ್ಲ. ಶೌಚಾಲಯ ನಿರ್ಮಿಸದಿದ್ದರೂ ಬಿಡುಗಡೆಯಾದ ಹಣ ಬಳಕೆಯಾಯಿತೇ ಎನ್ನುವ ಅನುಮಾನ ಈಗ ಎಲ್ಲರನ್ನೂ ಕಾಡತೊಡಗಿದೆ.

ಸ್ವತಃ ಮಹಿಳೆಯಾಗಿರುವ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿಯವರು ಶೌಚಾಲಯದ ಬವಣೆ ನೀಗಿಸಬಹುದು ಎಂದು ಕಾಯುತ್ತಿದ್ದೇವೆ ಎನ್ನುತ್ತಾರೆ ಶಾಲೆಯ ೫೫ಕ್ಕೂ ಹೆಚ್ಚು ಬಾಲಕಿಯರು ಮತ್ತು ಶಿಕ್ಷಕಿಯರು.

ಶೌಚಾಲಯ ನಿರ್ಮಾಣದ ೩. ೩೭ ಲಕ್ಷ ರೂ. ಅನುದಾನ ಮಾತ್ರವಲ್ಲದೇ ಬೇರೆ ಯೋಜನೆಯ ೧೨ ಲಕ್ಷ ರೂ. ಗಳಿಗೂ ಹೆಚ್ಚು ಹಣ ದುರುಪಯೋಗವಾಗಿರುವ ಕುರಿತಂತೆ ದೊಡ್ಡಕವಲಂದೆ ಗ್ರಾಪಂನ ಹಿಂದಿನ ಪಿಡಿಒ ಪುರುಷೋತ್ತಮ ಅವರನ್ನು ಅಮಾನತ್ತು ಮಾಡಲಾಗಿದ್ದು, ಈಗಲೂ ಅದರ ವಿಚಾರಣೆ ಮುಂದುವರಿದಿದೆ.  ಜೆರಾಲ್ಡ್ ರಾಜೇಶ್, ಇಒ, ತಾಪಂ, ನಂಜನಗೂಡು

ನರೇಗಾ ಯೋಜನೆಯಡಿ ೩. ೩೭ ಲಕ್ಷ ರೂ. ವೆಚ್ಚದಲ್ಲಿ ದೊಡ್ಡಕವಲಂದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ಅನುದಾನವನ್ನು ಶಿಕ್ಷಣ ಇಲಾಖೆಯಿಂದ ದೊಡ್ಡಕವಲಂದೆ ಗ್ರಾಮ ಪಂಚಾಯಿತಿಗೆ ೨೦೨೦-೨೧ರಲ್ಲೇ ವರ್ಗಾಯಿಸಲಾಗಿದೆ. ಆದರೆ ಈವರೆಗೂ ಶೌಚಾಲಯದ ಕಾಮಗಾರಿಯೇ ಆರಂಭವಾಗಿಲ್ಲ.
ಸಿಸಿಲಿಯಾ ಮೇರಿ, ಮುಖ್ಯಶಿಕ್ಷಕಿ

 

 

Tags: