Mysore
26
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಎನ್ಎಸ್ಎಸ್ ವಿದ್ಯಾರ್ಥಿಗಳ ಸೇವೆಯನ್ನು ಸಾರುತ್ತಿದೆ ಸರ್ಕಾರಿ ಶಾಲೆ

ಕೆ.ಪಿ.ಮದನ್

ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಿಂದ ಶಾಲೆಗಳಿಗೆ ಹೊಸ ರೂಪ 

ಮೈಸೂರು: ಎಲ್ಲರೂ ತಿಳಿದಂತೆ ಕಾಲೇಜುಗಳಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದರ ಭಾಗವಾಗಿ ಇರುವ ಎನ್‌ಎಸ್‌ಎಸ್ ಘಟಕವು ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ಒಂದು ವಾರ ನಡೆಸುವ ಶಿಬಿರಕ್ಕೆ ಸೀಮಿತ ಎಂಬುದು ಹಲವರ ಭಾವನೆ.

ಆದರೆ ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಲಾ ಕಾಲೇಜಿನ ಎನ್‌ಎಸ್‌ಎಸ್ ಘಟಕವು ವಾರ್ಷಿಕ ಶಿಬಿರಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಸೇವೆಯ ಸಾರ್ಥಕತೆಯನ್ನು ಅಚ್ಚೊತ್ತಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯವಿಲ್ಲ ಎಂದು ಪೋಷ ಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತ ತಲುಪಿವೆ. ಹಾಗಾಗಿ ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬ ಉದ್ದೇಶದಿಂದ, ಈ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಜೆಎಸ್‌ಎಸ್ ಕಲಾ ವಾಣಿಜ್ಯ, ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ.

ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಸಂತೋಷ್ ಕುಮಾರ್ ಅವರ ನಾಯಕತ್ವದಲ್ಲಿ ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅದೇ ಸ್ಥಳದಲ್ಲಿ ಶಿಬಿರ ಆಯೋಜಿಸಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದರೊಂದಿಗೆ ದಾನಿಗಳ ನೆರವಿನಿಂದ ಶಾಲೆಗೆ ಅವಶ್ಯವಿರುವ ಮೂಲ ಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ.

ಶಾಲೆಗಳ ಗೋಡೆಗಳಿಗೆ ಸುಣ್ಣ ಬಳಿಯುವುದು, ಚಲನಚಿತ್ರ ಕಲಾವಿದ ಸ್ವಾಮಿ ಅವರ ಸಹಯೋಗದೊಂದಿಗೆ ಶಾಲೆಗಳ ಗೋಡೆಗಳಲ್ಲಿ ಚಿತ್ತಾರ ಮೂಡಿಸುವ ಮೂಲಕ ಹೊಸ ರೂಪವನ್ನು ನೀಡಲಾಗುತ್ತಿದೆ. ಹುಣಸೂರು ತಾಲ್ಲೂಕಿನ ಕುಟ್ಟವಾಡಿ, ಬಿ.ಬಸವನಹಳ್ಳಿ, ದೇವಲಾಪುರ, ಸಂಜೀವನಗರ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಅಂಬೇಡ್ಕರ್ ನಗರ, ಮಂಟಿಹಾಡಿ ಶಾಲೆಗಳ ಗೋಡೆಗಳಲ್ಲಿ ಜನಪದ ಶೈಲಿಯ ಚಿತ್ತಾರ ಮೂಡಿಸಿ ಮಕ್ಕಳು ಶಾಲೆಯತ್ತ ಆಕರ್ಷಿತರಾಗುವಂತೆ ಮಾಡಿದ್ದಾರೆ.

ಸೈಕಲ್ ವಿತರಣೆ: ಬಸ್ ಸೌಲಭ್ಯಗಳಿಲ್ಲದ ಹಾಡಿ ವಿದ್ಯಾರ್ಥಿನಿಯರಿಗೆ ದಾನಿಗಳ ನೆರವಿನಿಂದ ಸೈಕಲ್‌ಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡಲು ಕಂಪ್ಯೂಟರ್, ಪ್ರಿಂಟರ್, ಟ್ಯಾಬ್, ಸೆಟ್‌ಅಪ್ ಬಾಕ್ಸ್, ಯುಪಿಎಸ್, ಕಲಿಕಾ ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ. ಬಿಡುವಿನ ವೇಳೆಯಲ್ಲಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತು ಇಂಗ್ಲಿಷ್ ತರಗತಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಪಠ್ಯ ಚಟುವಟಿಕೆಗಳನ್ನು ರೂಪಿಸುತ್ತಿದ್ದಾರೆ.

ಪರಿಸರ ಸಂರಕ್ಷಣೆಗೆ ಒತ್ತು: ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಅದರ ಪೋಷಣೆ ಮಾಡಿ ಹಸಿರಾಗಿಸಿದ್ದಾರೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗಿದ್ದು, ಶಾಲಾ ದಾಖಲಾತಿ ಪ್ರಮಾಣವೂ ಹೆಚ್ಚಾಗಿದೆ. ಶಿಬಿರದ ಸಮಯದಲ್ಲಿ ಸಾರ್ವಜನಿಕರಿಗೆ ಬೀದಿ ನಾಟಕಗಳ ಮೂಲಕ ಮದ್ಯಪಾನ ಮತ್ತು ಧೂಮಪಾನ ಸೇವನೆ, ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳು, ಮಾರಕ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು. ಶೌಚಾಲಯ  ಹಾಗೂ ನೀರಿನ ಸದ್ಬಳಕೆ, ಕಸ ವಿಲೇವಾರಿ, ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಅವಶ್ಯವಿರುವ ರೋಗಿಗಳಿಗೆ ರಕ್ತದಾನ ಮಾಡುವ ಮೂಲಕವೂ ನೆರವಾಗುತ್ತಿದ್ದು, ಎನ್‌ಎಸ್‌ಎಸ್ ಎಂದರೆ ವಾರದ ಶಿಬಿರಕ್ಕೆ ಸೀಮಿತವಲ್ಲ, ನಿರಂತರವಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನೂ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.

” ನಮ್ಮ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಇದುವರೆಗೂ ೧೦ಕ್ಕೂ ಹೆಚ್ಚು ಶಾಲೆಗಳನ್ನು ಅದರಲ್ಲೂ ಹಾಡಿ ಮಕ್ಕಳ ಶಾಲೆಗಳನ್ನು ದತ್ತು ತೆಗೆದುಕೊಂಡು ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ನಮ್ಮ ಕಾಲೇಜಿನ ಸ್ವಯಂಸೇವಕರು ಈ ಶಾಲೆಗಳಿಗೆ ಬಣ್ಣ ಹಚ್ಚಿ ಹೊಸ ರೂಪ ನೀಡುವುದರ ಜೊತೆಗೆ ಕಂಪ್ಯೂಟರ್, ಸ್ಮಾರ್ಟ್ ಟಿವಿ, ಪ್ರಿಂಟರ್, ಕಲಿಕಾ ಹಾಗೂ ಕ್ರೀಡಾ ಸಾಮಗ್ರಿಗಳನ್ನೂ ಒದಗಿಸುತ್ತಿದ್ದಾರೆ. ಶಾಲೆಗಳು ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದ್ದಾರೆ.”

-ಪದೇಶ್, ದ್ವಿತೀಯ ಬಿ.ಎ

” ಗಿಡ ನೆಡುವುದು ಮತ್ತು ಅದನ್ನು ಪೋಷಿಸುವುದು, ಗ್ರಾಮೀಣ ಜನರಿಗೆ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವುದು, ಶಾಲಾ ಮಕ್ಕಳಿಗೆ ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಲಿಕೆ ಪಾಠವನ್ನು ಹೇಳಿಕೊಡುವುದೂ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಮ್ಮ ಎನ್‌ಎಸ್‌ಎಸ್ ಘಟಕವು ರೂಪಿಸುತ್ತಿದೆ.”

-ನಿತ್ಯಶ್ರೀ,  ದ್ವಿತೀಯ ಬಿ.ವೋಕ್

Tags:
error: Content is protected !!