Mysore
18
scattered clouds

Social Media

ಸೋಮವಾರ, 12 ಜನವರಿ 2026
Light
Dark

ಎಂಸಿಡಿಸಿಸಿಬಿ ಅಧ್ಯಕ್ಷ ಸ್ಥಾನ ಚುನಾವಣೆಗೆ ಸರ್ಕಾರ ಪ್ಲಾನ್

ಕೆ.ಬಿ.ರಮೇಶನಾಯಕ

೩ ಕ್ಷೇತ್ರಗಳ ಚುನಾವಣೆ ಬಾಕಿ ಇದ್ದರೂ ಅನುಮತಿ ಕೋರಲು ಸಿದ್ಧತೆ

ಘೋಷಣೆಯಾಗದ ೩ ಕ್ಷೇತ್ರಗಳ ಫಲಿತಾಂಶ: ಇಂದು ‘ಹೈ’ ತೀರ್ಪು

ಮೈಸೂರು: ಎಂಸಿಡಿಸಿಸಿ ಬ್ಯಾಂಕ್ (ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್) ಆಡಳಿತ ಮಂಡಳಿಯ ಮೂರು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಬಾಕಿ ಇದ್ದರೂ, ರಾಜ್ಯ ಸರ್ಕಾರ ಅದಕ್ಕೂ ಮುನ್ನವೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಮುಂದಾಗಿದೆ.

ಇತ್ತೀಚೆಗೆ ಬ್ಯಾಂಕ್ ೧೩ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಆ ಪೈಕಿ ಮೂರು ಸ್ಥಾನಗಳ ಫಲಿತಾಂಶ ಘೋಷಣೆ ಬಾಕಿ ಇದ್ದು, ಜುಲೈ ೩ರಂದು ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಈಗಾಗಲೇ ಮತದಾನ ನಡೆದಿರುವ ೧೩ ಕ್ಷೇತ್ರಗಳನ್ನೇ ಪರಿಗಣಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅವಕಾಶ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸರ್ಕಾರ ತಯಾರಿ ನಡೆಸಿದೆ ಎನ್ನಲಾಗಿದೆ.

ಎಂಸಿಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿ ಮುಗಿದು ಒಂದೂವರೆ ವರ್ಷಗಳು ಕಳೆದರೂ, ರಾಜ್ಯ ಸರ್ಕಾರ ಚುನಾವಣೆ ನಡೆಸಲು ಮುಂದಾಗದ ಕಾರಣ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರ ತಂಡ ಹೈಕೋರ್ಟ್ ಮೊರೆ ಹೋಗಿತ್ತು. ಇದರಿಂದಾಗಿ ಜೂನ್ ತಿಂಗಳೊಳಗೆ ಚುನಾವಣಾ ಪ್ರಕ್ರಿಯೆಯನ್ನು ಮುಗಿಸುವಂತೆ ಆದೇಶ ನೀಡಿದ್ದರಿಂದ ಸರ್ಕಾರ ಅನಿವಾರ್ಯವಾಗಿ ಅಧಿಸೂಚನೆ ಹೊರಡಿಸಿತ್ತು.

ಜೂ.೨೬ರಂದು ಬ್ಯಾಂಕ್‌ನ ೧೩ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆರು, ಬಿಜೆಪಿ-ಜಾತ್ಯತೀತ ಜನತಾದಳ ಬೆಂಬಲಿತ ಮೂವರು ಜಯ ಗಳಿಸಿದ್ದಾರೆ, ನಾಲ್ಕು ಕ್ಷೇತ್ರಗಳ ಫಲಿತಾಂಶ ಪ್ರಕಟಿಸುವುದು ಬಾಕಿ ಇದೆ. ಹಾಗೆಯೇ ಹಳೆಯ ಬೈಲಾ ಪ್ರಕಾರ ನಾಲ್ಕು ಅಥವಾ ಹೊಸ ಬೈಲಾ ಪ್ರಕಾರದಲ್ಲಿ ೩ ಕ್ಷೇತ್ರಗಳಿಗೆ ನಡೆಸಬೇಕಾ ಎನ್ನುವ ಜಿಜ್ಞಾಸೆಯಿಂದ ತಡೆಯಾಜ್ಞೆಯಾಗಿರುವ ಕ್ಷೇತ್ರಗಳಿಗೆ ಚುನಾವಣೆ ನಡೆಸಬೇಕಿದೆ. ಇದೆಲ್ಲದರ ನಡುವೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಗುರುವಾರ ನ್ಯಾಯಾಲಯಕ್ಕೆ ಅನುಮತಿ ಕೇಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ನಡೆಯದ ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ೧೩ ಸದಸ್ಯರನ್ನು ಪರಿಗಣಿಸಿ ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ಕೇಳುವುದು. ಒಂದು ವೇಳೆ ನ್ಯಾಯಾಲಯವೇ ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿದರೂ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಸುವುದಕ್ಕೆ ಅಧಿಕಾರಿಗಳು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ಗೆ ಸುಲಭದ ಅಧಿಕಾರ: ಸದ್ಯದ ಬಲಾಬಲದಲ್ಲಿ ಕಾಂಗ್ರೆಸ್ ಸುಲಭದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿರುವ ಕಾರಣ ನಾಲ್ಕು ಕ್ಷೇತ್ರಗಳ ಚುನಾವಣೆ ಬಗ್ಗೆ ಗಮನಹರಿಸದೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ಸರ್ಕಾರ ಕಾರ್ಯತಂತ್ರ ರೂಪಿಸಿದೆ. ೧೩ ಸದಸ್ಯರ ಬಲಾಬಲದಲ್ಲಿ ಬಹುಮತಕ್ಕೆ ೭ ಸ್ಥಾನಗಳು ಬೇಕಿವೆ. ಈಗಾಗಲೇ ಆರು ಸ್ಥಾನಗಳನ್ನು ಹೊಂದಿದ್ದು, ಡ್ರಾ ಆಗಿರುವ ಎಚ್.ಡಿ.ಕೋಟೆ ಮತ್ತು ಕೊಳ್ಳೇಗಾಲ ತಾಲ್ಲೂಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ. ಕೊನೆಯ ಕ್ಷಣದಲ್ಲಿ ನ್ಯಾಯಾಲಯದಲ್ಲಿ ವೋಟ್ ಮಾಡಲು ಹಕ್ಕು ತಂದಿರುವ ಡೆಲಿಗೇಟ್ಸ್‌ಗಳು ಹಾಲಿ-ಮಾಜಿ ಶಾಸಕರ ಬೆಂಬಲಿಗರಾಗಿರುವ ಕಾರಣ ಮತ ಚಲಾಯಿಸಿರುವ ನಿರೀಕ್ಷೆ ಇದೆ. ಹೀಗಾಗಿ, ಕಾಂಗ್ರೆಸ್ ಎಂಟು ಸ್ಥಾನಗಳನ್ನು ಹೊಂದುವ ಕಾರಣ ಅಧೀಕಾರ ಗಿಟ್ಟಿಸಲು ನೆರವಾಗಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

ಗಣೇಶ್ ಪ್ರಸಾದ್ ವರ್ಸಸ್ ದೊಡ್ಡಸ್ವಾಮೇಗೌಡ:

ಎಂಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕಾಗಿ ಶಾಸಕ ಎಚ್. ಎಂ.ಗಣೇಶ್ ಪ್ರಸಾದ್ ಹಾಗೂ ಕೆ.ಆರ್.ನಗರ ಶಾಸಕ ಡಿ. ರವಿಶಂಕರ್ ತಂದೆ ದೊಡ್ಡಸ್ವಾಮೇಗೌಡ ಅವರ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಅಧ್ಯಕ್ಷರಾದ ಸಿ.ಬಸವೇಗೌಡ, ಎಸ್. ಚಂದ್ರಶೇಖರ್ ಸೋಲು ಕಂಡಿರುವ ಕಾರಣ ಅಖಾಡದಿಂದಲೇ ಹೊರಗುಳಿದಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು, ಆರ್.ನರೇಂದ್ರ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಶಾಸಕ ಅನಿಲ್ ಚಿಕ್ಕಮಾದು ಅಫೆಕ್ಸ್ ಬ್ಯಾಂಕ್‌ಗೆ ನಾಮನಿರ್ದೇಶನ ಆಗುವ ಕುರಿತು ತಮ್ಮ ಆಸೆಯನ್ನು ಹೊರಹಾಕಿದ್ದಾರೆ. ಹೊಸ ಮುಖಗಳಾದ ಎಂ.ಕೆಂಚಪ್ಪ, ಇ.ಪಿ.ಲೋಕೇಶ್, ವೈ.ಎನ್. ಜಯರಾಮ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆಯಾಗಿದೆ. ಇದರಿಂದಾಗಿ, ದೊಡ್ಡಸ್ವಾಮೇಗೌಡ ಅಥವಾ ಗಣೇಶ್ ಪ್ರಸಾದ್ ಅವರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ದೊರೆಯಬಹುದು ಎಂದು ಮೂಲಗಳು ತಿಳಿಸಿವೆ.

” ಎಂಸಿಡಿಸಿಸಿ ಬ್ಯಾಂಕ್‌ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯದೆ ಇದ್ದರೂ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಅರ್ಜಿ ಸಲ್ಲಿಸುತ್ತೇವೆ. ಈಗಾಗಲೇ ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸುವ ವಿಚಾರ ನ್ಯಾಯಾಲಯದಲ್ಲಿದೆ. ಗುರುವಾರ ನ್ಯಾಯಾಲಯ ನೀಡುವ ತೀರ್ಪು ನೋಡುತ್ತೇವೆ. ಮುಂದಿನ ಪ್ರಕ್ರಿಯೆ ನಡೆಸುವುದಕ್ಕೆ ನ್ಯಾಯಾಲಯ ಹೇಳಿದರೆ ಮುಂದುವರಿಯಲಾಗುವುದು. ಇಲ್ಲದಿದ್ದರೆ ನಾವೇ ಅರ್ಜಿ ಸಲ್ಲಿಸುತ್ತೇವೆ.”

ಕಾಂತರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

Tags:
error: Content is protected !!