Mysore
22
mist

Social Media

ಭಾನುವಾರ, 11 ಜನವರಿ 2026
Light
Dark

ಗ್ರೇಡ್-1 ಮೈಸೂರು ರಚನೆಗೆ ಸರ್ಕಾರ ಚಿಂತನೆ

ಕೆ.ಬಿ.ರಮೇಶನಾಯಕ

ನಗರಪಾಲಿಕೆ ವತಿಯಿಂದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ

ಬೃಹತ್ ನಗರಪಾಲಿಕೆ ರಚನೆಗೆ ಅಗತ್ಯ ಜನಸಂಖ್ಯೆ 

ಮೈಸೂರು: ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರ ಪಾಲಿಕೆಯನ್ನು ಬೃಹತ್ ನಗರಪಾಲಿಕೆಯನ್ನಾಗಿ ರಚಿಸುವ ಪ್ರಸ್ತಾಪ ಕೈ ಬಿಟ್ಟಿರುವ ರಾಜ್ಯ ಸರ್ಕಾರ, ಗ್ರೇಡ್-೧ ಮೈಸೂರು ನಗರಪಾಲಿಕೆಯನ್ನಾಗಿ ಮಾಡಲು ಚಿಂತನೆ ನಡೆಸಿದೆ. ಈ ಸಂಬಂಧ ಮೈಸೂರು ನಗರ ಪಾಲಿಕೆ ವತಿಯಿಂದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಹೋಗಿದ್ದು, ಕಾನೂನು ಇಲಾಖೆ ಸಲಹೆ ಆಧರಿಸಿ ಮುಂದಿನ ದಿನಗಳಲ್ಲಿ ನಡೆಯುವ ಸಚಿವ ಸಂಪುಟ ಸಭೆಗೆ ತರುವ ಸಾಧ್ಯತೆ ಇದೆ.

ಬೃಹತ್ ನಗರಪಾಲಿಕೆ ರಚನೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ೨೦ ಲಕ್ಷ ಜನಸಂಖ್ಯೆಯನ್ನು ಹೊಂದಿಲ್ಲದ ಕಾರಣ ಗ್ರೇಡ್-೧ ರಚನೆಗೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದು, ಜುಲೈ ಮೊದಲ ವಾರದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಗೊತ್ತಾಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತಕ್ಕಂತೆ ಸ್ಥಳೀಯ ಸಂಸ್ಥೆಗಳಲ್ಲೂ ಒಂದಿಷ್ಟು ಬದಲಾವಣೆ, ಸುಧಾರಣೆಗಳಾಗಬೇಕಿರುವ ಕಾರಣ ಶೀಘ್ರದಲ್ಲೇ ಪ್ರಕ್ರಿಯೆ ಶುರುವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಮೇಲೆ ಮತ್ತಷ್ಟು ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಇದಲ್ಲದೆ, ಮುಂದೆ ಚಿತ್ರನಗರಿ, ವಿಮಾನ ನಿಲ್ದಾಣ ವಿಸ್ತರಣೆ ಮತ್ತಿತರ ಯೋಜನೆಗಳು ಬರುತ್ತಿರುವುದರಿಂದ ಬೃಹತ್ ಪಾಲಿಕೆ ರಚನೆ ಮಾಡಬೇಕೆಂಬ ಕೂಗು ಎದ್ದಿತ್ತು. ಇದರಿಂದಾಗಿ ಮೈಸೂರಿನ ಹೊರವಲ ಯದ ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ, ಕಡಕೊಳ ಪಟ್ಟಣ ಪಂಚಾಯಿತಿ, ಹೂಟಗಳ್ಳಿ ನಗರಸಭೆ, ಇಲವಾಲ ಗ್ರಾಮ ಒಳಗೊಂಡಂತೆ ೮ ಗ್ರಾಪಂಗಳನ್ನು ಸೇರಿಸಿಕೊಂಡು ಬೃಹತ್ ಪಾಲಿಕೆಯನ್ನಾಗಿ ರಚನೆ ಮಾಡಲು ಪ್ರಸ್ತಾವನೆ ತಯಾರಿಸಲಾಗಿತ್ತು.

ನಂತರ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ.ಅತೀಕ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಈ ವಿಷಯವನ್ನು ಮಂಡಿಸಲು ಅಧಿಕಾರಿಗಳು ತಯಾರು ಮಾಡಿಕೊಂಡಿದ್ದರೂ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ನಂತರದ ದಿನಗಳಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿತ್ತು. ಇದೆಲ್ಲದರ ನಡುವೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೃಹತ್ ಪಾಲಿಕೆಯನ್ನಾಗಿ ಉನ್ನ ತೀಕರಿಸದಂತೆ ಒತ್ತಡ ಹೇರಿದ್ದರು. ಇದಾದ ನಂತರ ನನೆಗುದಿಗೆ ಬಿದ್ದಿದ್ದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ನಗರಪಾಲಿಕೆ ಅಧಿಕಾರಿಗಳು ಗ್ರೇಡ್-೧ ಮೈಸೂರು ರಚನೆಗೆ ಬೇಕಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ಜನಸಂಖ್ಯೆ ೧೫ ಲಕ್ಷ ಒಳಗಿದ್ದರೆ ಸಾಕು: ಗ್ರೇಡ್ ೧ ಪಾಲಿಕೆಯನ್ನಾಗಿ ಮಾಡಲು ಅಗತ್ಯವಿರುವ ೧೫ ಲಕ್ಷ ಒಳಗಿನ ಜನಸಂಖ್ಯೆಯನ್ನು ಮೈಸೂರು ಹೊಂದಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಪಟ್ಟಣ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿಕೊಂಡರೆ ೧೬ ಲಕ್ಷ ಜನಸಂಖ್ಯೆಯಾಗಲಿದೆ. ಈಗಾಗಲೇ ಮೈಸೂರು ನಗರಪಾಲಿಕೆಯ ಹೊರವಲಯದ ಬಡಾವಣೆಗಳಿಗೆ ಕಾವೇರಿ, ಕಬಿನಿ ನೀರು ಪೂರೈಸುವ ಜತೆಗೆ ಕಸ ವಿಲೇವಾರಿಯನ್ನೂ ಪಾಲಿಕೆಯೇ ನಿರ್ವಹಣೆ ಮಾಡುತ್ತಿದೆ. ಹೀಗಾಗಿ, ಗ್ರೇಡ್-೧ ಮೈಸೂರು ರಚನೆ ಮಾಡಿದರೆ ಒಂದಿಷ್ಟು ಹೊರೆಯಾಗುವುದು ಬಿಟ್ಟರೆ ಬೇರೇನೂ ಸಮಸ್ಯೆಗಳು ಉಂಟಾಗುವುದಿಲ್ಲ ಎನ್ನುವ ಆಲೋಚನೆಯಿಂದಾಗಿ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ನಗರಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಲು ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದೆ. ಹಾಗಾಗಿ,ನಗರಾಭಿವೃದ್ದಿ ಇಲಾಖೆಯು ಅಂತಿಮ ವರದಿಯನ್ನು ಸಂಗ್ರಹಿಸಿದ ನಂತರ ಸಚಿವ ಸಂಪುಟಕ್ಕೆ ತರಲಾಗುತ್ತಿದೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳಿದರು.

” ೨೦೨೩ ನವೆಂಬರ್ ೧೪ರಂದು ಜನಪ್ರತಿನಿಧಿಗಳ ಆಡಳಿತ ಮುಗಿದಿದ್ದು, ಸದ್ಯಕ್ಕೆ ಚುನಾವಣೆ ನಡೆಯುವುದು ಅನುಮಾನವಾಗಿದೆ. ಗ್ರೇಡ್-೧ ಪಾಲಿಕೆ ರಚನೆಯಾದ ನಂತರ ಎಲ್ಲಾ ಪ್ರಕ್ರಿಯೆಗಳು ಮುಗಿಯಲು ಅಂದಾಜು ಒಂದು ವರ್ಷವಾದರೂ ಸಮಯ ಬೇಕಾಗುವ ಕಾರಣ ಅಲ್ಲಿಯವರೆಗೆ ಆಕಾಂಕ್ಷಿಗಳು ವನವಾಸ ಅನುಭವಿಸಬೇಕಿದೆ”

” ನಗರಪಾಲಿಕೆಯನ್ನು ಬೃಹತ್ ನಗರಪಾಲಿಕೆಯನ್ನಾಗಿ ಮಾಡದಿದ್ದರೂ ಗ್ರೇಡ್-೧ ಪಾಲಿಕೆಯನ್ನಾಗಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಮುಖ್ಯಮಂತ್ರಿಗಳು ಸದಾ ಮೈಸೂರಿನ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿರುತ್ತಾರೆ. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಿರುತ್ತೇವೆ.”

-ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು

Tags:
error: Content is protected !!