Mysore
17
broken clouds

Social Media

ಶನಿವಾರ, 31 ಜನವರಿ 2026
Light
Dark

ಓದುಗರ ಪತ್ರ: ಮೈಸೂರು ವಿವಿ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಲಿ

ಓದುಗರ ಪತ್ರ

ಒಂದು ಕಾಲಕ್ಕೆ ಇಡೀ ದೇಶದಲ್ಲೇ ಹೆಸರುವಾಸಿಯಾಗಿದ್ದ ಮೈಸೂರು ವಿಶ್ವವಿದ್ಯಾನಿಲಯ, ಕಳೆದ ೨-೩ ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು ಬೇಸರದ ಸಂಗತಿ. ೧೯೧೬ರಲ್ಲಿ ಪ್ರಾರಂಭವಾದ ಮೈಸೂರು ವಿಶ್ವವಿದ್ಯಾನಿಲಯ, ಮುಂದೆ ದೇಶದ ಹೆಮ್ಮೆಯ ಹಾಗೂ ಪ್ರತಿಷ್ಠಿತ ವಿವಿಯಾಗಿ ರೂಪುಗೊಂಡು, ದೇಶದ ಇತರೆ ವಿವಿಗಳಿಗೂ ಮಾದರಿಯಾಗಿತ್ತು. ಆದರೆ ಮೈಸೂರು ವಿಶ್ವವಿದ್ಯಾನಿಲಯವನ್ನು ವಿಭಜನೆ ಮಾಡಿ ಮಂಡ್ಯ, ಚಾಮರಾಜನಗರ ಮತ್ತು ಹಾಸನ ವಿವಿಗಳನ್ನು ಈ ಹಿಂದಿನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದ ನಂತರ, ಮೈಸೂರು ವಿವಿಯ ಅವನತಿ ಪ್ರಾರಂಭವಾಯಿತು.

ಪ್ರಸ್ತುತ ಮೈಸೂರು ವಿವಿಯ ಅನೇಕ ವಿಭಾಗಗಳಿಗೆ ಪ್ರವೇಶ ಶೂನ್ಯಮಟ್ಟಕ್ಕೆ ಇಳಿದಿರುವುದರ ಜೊತೆಗೆ, ಖಾಯಂ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ಕೊರತೆ ಹೆಚ್ಚಾಗಿದೆ ಎಂದು ಹೇಳಲಾಗಿದ್ದು ಸರ್ಕಾರದ ಅನುದಾನ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದರಿಂದ ವಿವಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರೇ ಹೇಳಿರುವ ಹಾಗೆ, ವಿವಿಯ ನಿವೃತ್ತ ನೌಕರರಿಗೆ ಪಿಂಚಣಿ ಕೊಡುವುದಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದೆ. ಅಂತರಿಕ ಸಂಪನ್ಮೂಲಗಳ ಕ್ರೋಡೀಕರಣ ಕಷ್ಟಸಾಧ್ಯವಾಗಿದೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ವಿದ್ಯಾರ್ಥಿಗಳ ಪ್ರವೇಶಾತಿಯ ಕೊರತೆಯಿಂದಾಗಿ, ೯ ಅಧ್ಯಯನ ವಿಭಾಗಗಳು ಮುಚ್ಚುವ ಭೀತಿಯಲ್ಲಿವೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ಈಗಲಾದರೂ ಮಧ್ಯ ಪ್ರವೇಶಿಸಿ, ಶತಮಾನದ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದ ಪುನಶ್ಚೇತನಕ್ಕೆ ಮುಂದಾಗಬೇಕಾಗಿದೆ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!