Mysore
30
few clouds

Social Media

ಭಾನುವಾರ, 08 ಮಾರ್ಚ್ 2026
Light
Dark

ಹನಗೋಡು ಭಾಗದಲ್ಲಿ ಶುಂಠಿ ಬಿತ್ತನೆ ಕಾರ್ಯ ಚುರುಕು

ವೀರನಹೊಸಹಳ್ಳಿ: ಹಸಿ ಶುಂಠಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದರೂ, ಹನಗೋಡು ಭಾಗದಲ್ಲಿ ಶುಂಠಿ ಬಿತ್ತನೆ ಕಾರ್ಯವು ಭರದಿಂದ ಸಾಗಿದೆ. ರೈತರು ಉತ್ಸಾಹದಿಂದ ಶುಂಠಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.

ಕಳೆದ ವರ್ಷ ಹಸಿ ಶುಂಠಿಗೆ ಉತ್ತಮ ಬೆಲೆ ದೊರೆತಿದ್ದು, ರೈತರ ಉತ್ಸಾಹ ಇಮ್ಮಡಿಯಾಗಿದೆ. ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ಶುಂಠಿ ಕೃಷಿಯು ಹೆಚ್ಚಿನ ಆದ್ಯತೆ ಪಡೆಯುತ್ತಿದೆ. ಈ ಭಾಗದಲ್ಲಿ ಹೊಗೆಸೊಪ್ಪು ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿದ್ದರೂ ಶುಂಠಿ ಬೆಳೆಯುವ ಕೃಷಿ ಭೂಮಿಯು ವಿಸ್ತಾರ ಗೊಳ್ಳುತ್ತಿದೆ. ಮತ್ತೊಂದು ಮುಖ್ಯ ವಾಣಿಜ್ಯ ಬೆಳೆಯಾಗಿ ಪರಿಣಮಿಸುತ್ತಿದೆ.

ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿಯ ದೃಷ್ಟಿಯಿಂದ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿತ್ತನೆ ಮಾಡುವುದು ಸಾಮಾನ್ಯ. ಈಗಾಗಲೇ ಶುಂಠಿ ನಾಟಿ ಪ್ರಾರಂಭವಾಗಿದೆ. ಉತ್ತಮ ಲಾಭ ಗಳಿಸುವ ನಿರೀಕ್ಷೆಯಲ್ಲಿ ಉತ್ಸಾಹದಿಂದಲೇ ಚಟುವಟಿಕೆ ಆರಂಭಿಸಿರುವ ಬೆಳೆಗಾರರಿಗೆ ಪಿವಿಸಿ ಪೈಪ್, ಕೋಳಿ ಗೊಬ್ಬರ, ಬಿತ್ತನೆ ಬೀಜದ ಬೆಲೆ ಮತ್ತು ಕೂಲಿಯಲ್ಲಿನ ಹೆಚ್ಚಳವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

೨೦೨೫ ರ ಜನವರಿಯಲ್ಲಿ ಹಸಿಶುಂಠಿ ಬೆಲೆಯು ಪ್ರತಿ ೬೦ ಕೆ.ಜಿ.ಯ ಚೀಲಕ್ಕೆ ೧ ಸಾವಿರ ರೂ.ನಿಂದ ೧,೨೦೦ ರೂ.ಗೆ ಮಾರಾಟವಾಗಿತ್ತು. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಈ ಬೆಲೆ ೩ ಸಾವಿರ ರೂ. ತಲುಪಿತ್ತು.

ಜುಲೈ ಮತ್ತು ಆಗಸ್ಟ್‌ನಲ್ಲಿ ಹೊಸ ಶುಂಠಿಯು ಮಾರುಕಟ್ಟೆಗೆ ಬಂದಿದ್ದರಿಂದ ೩,೫೦೦ ರೂ.ಗಳಿಗೆ ಮಾರಾಟವಾಯಿತು. ಸೆಪ್ಟೆಂಬರ್‌ನಲ್ಲಿ ೩,೮೦೦ ರೂ., ಅಕ್ಟೋಬರ್‌ನಲ್ಲಿ ೩ ಸಾವಿರ ರೂ.ನಿಂದ ೩,೫೦೦ ರೂ. ತಲುಪಿತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ೩,೦೦೦ ರೂ.ರಿಂದ ೨,೮೦೦ ರೂ., ಈ ವರ್ಷದ ಜನವರಿ-ಫೆಬ್ರವರಿ ತಿಂಗಳಲ್ಲಿ ೨,೩೦೦ ರೂ.ನಿಂದ ೩ ಸಾವಿರ ರೂ.ವರೆಗೆ ಬೆಲೆ ಸಿಕ್ಕಿತ್ತು. ಸದ್ಯಕ್ಕೆ ಶುಂಠಿಯ ಬೆಲೆ ೨,೫೦೦ ರೂ. ಇದೆ.

ಕಳೆದ ವರ್ಷ ೧೦೦೦ ರಿಂದ ೧,೨೦೦ ರೂ. ದೊರೆತಿದ್ದ ಬೀಜದ ಶುಂಠಿಯು, ಈ ವರ್ಷ ಪ್ರತಿ ೬೦ ಕೆ.ಜಿ.ಗೆ ೩,೫೦೦ ರೂ. ತಲುಪಿದ್ದು, ದುಬಾರಿ ಎನಿಸಿತು. ಜನವರಿಯ ನಂತರ ಮಾರುಕಟ್ಟೆಯಲ್ಲಿ ಶುಂಠಿಯ ಬೆಲೆ ಸ್ವಲ್ಪ ಇಳಿಮುಖವಾದ್ದರಿಂದ ಬೀಜದ ಬೆಲೆಯು ತುಸು ಕಡಿಮೆಯಾಗಿದೆ. ಸದ್ಯ ೨,೫೦೦ ರೂ.ಗೆ ಮಾರಾಟ ಆಗುತ್ತಿದೆ.

ಕೋಳಿಗೊಬ್ಬರ ದುಬಾರಿ: ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುವಲ್ಲಿ ಕೋಳಿಗೊಬ್ಬರಕ್ಕೆ ರೈತರು ಮಹತ್ವ ನೀಡುತ್ತಿರುವುದರಿಂದ ಈ ಬಾರಿ ಕೋಳಿ ಕೊಬ್ಬರದ ಬೆಲೆಯೂ ದುಬಾರಿಯಾಗಿದೆ. ಟನ್‌ಗೆ ೩,೮೦೦ ರೂ.ನಿಂದ ಸಾವಿರದಿಂದ ೪,೦೦೦ ರೂ. ತಲುಪಿದೆ.

” ಈ ವರ್ಷ ಶುಂಠಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಹುಣಸೂರು ತಾಲ್ಲೂಕಿನಲ್ಲಿ ಕಳೆದ ವರ್ಷ ೧,೩೦೦ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು, ಈ ವರ್ಷ ೧,೫೦೦ ಹೆಕ್ಟೇರ್ ದಾಟುವ ಸಾಧ್ಯತೆಯಿದೆ.”

-ಡಾ.ನಾಗರಾಜ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

” ಒಂದು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಸಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ೧ ಲಕ್ಷ ರೂ.ಗಿಂತ ಹೆಚ್ಚು ಖರ್ಚಾಗುತ್ತಿದೆ. ದರ ಉತ್ತಮವಾಗಿ ದೊರೆತಲ್ಲಿ ಲಾಭವಾಗುತ್ತದೆ.”

-ಚೇತನ್, ಶುಂಠಿ ಬೆಳೆಗಾರ, ಹಿಂಡಗೂಡು

 

 

Tags:
error: Content is protected !!