Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸಂಕಷ್ಟದಲ್ಲಿ ಕೊಡಗು ಜಿಲ್ಲೆಯ ಶುಂಠಿ ಬೆಳೆಗಾರರು 

Kodagu district

೬ ಸಾವಿರ ರೂ.ಇದ್ದ ಬಿತ್ತನೆ ಶುಂಠಿಗೆ ೧,೫೦೦ ರೂ. ನಿಗದಿ; ಮುಗಿಯದ ರೈತರ ಗೋಳು

ಪುನೀತ್ ಮಡಿಕೇರಿ

ಮಡಿಕೇರಿ: ದುಡ್ಡಿನ ಬೆಳೆ ಎಂದೇ ಪರಿಗಣಿಸಲ್ಪಡುವ ಶುಂಠಿ ಬೆಳೆದ ರೈತರು ಉತ್ತಮ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶುಂಠಿ ಬೆಳೆದ ರೈತರ ನೆರವಿಗೆ ಬರುವ ಉದ್ದೇಶದಿಂದ ಕೃಷಿ ಉತ್ಪನ್ನ ಮಾರಾಟ ಇಲಾಖೆ ಎಪಿಸಿಎಂಎಸ್ ಮೂಲಕ ಹಸಿ ಶುಂಠಿ ಖರೀದಿಗೆ ಮುಂದಾಗಿದೆ. ಆದರೆ, ಶುಂಠಿ ಖರೀದಿಗೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ದರ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅನುಕೂಲಕ್ಕಿಂತ ಅನನುಕೂ ಲವೇ ಹೆಚ್ಚಾಗುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಶುಂಠಿಯನ್ನು ಜೂಜಿನ ಬೆಳೆ ಎಂದು ಕೂಡ ಕರೆಯಲಾಗುತ್ತದೆ. ಕಳೆದ ವರ್ಷ ಇದೇ ಅವಽಯಲ್ಲಿ ೬೦ ಕೆಜಿ ತೂಕದ ಒಂದು ಚೀಲ ಬಿತ್ತನೆ ಶುಂಠಿಗೆ ಸುಮಾರು ೬ ಸಾವಿರ ರೂ. ಬೆಲೆ ಇತ್ತು. ಈ ವರ್ಷ ಈ ಬೆಲೆ ೧.೫ ಸಾವಿರ ರೂ.ಗಳ ಆಸುಪಾಸಿನಲ್ಲಿದೆ. ಮಾರುಕಟ್ಟೆ ದರ ೬೦ ಕೆಜಿ ತೂಕದ ಒಂದು ಚೀಲಕ್ಕೆ ೧,೨೦೦-೧,೬೦೦ ರೂ.ವರೆಗೆ ಇದೆ.

ಶುಂಠಿ ಬೆಲೆ ಇಳಿಕೆಯ ಹಾದಿಯಲ್ಲಿ ಇರುವಂತೆಯೇ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಶುಂಠಿ ಬೆಳೆಗಾರರು ಸರ್ಕಾರದ ಮೊರೆ ಹೋಗಿದ್ದರು. ಕೊಡಗಿನಲ್ಲೂ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಕೃಷಿ ಉತ್ಪನ್ನ ಮಾರಾಟ ಇಲಾಖೆ ಎಪಿಸಿಎಂಎಸ್ ಮೂಲಕ ಹಸಿ ಶುಂಠಿ ಖರೀದಿಗೆ ಮುಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯುವ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕುಗಳಿಗೆ ಸಂಬಂದಿಸಿದಂತೆ ಕುಶಾಲನಗರ ಎಪಿಸಿಎಂಎಸ್ ಮತ್ತು ಸೋಮವಾರಪೇಟೆ ಎಪಿಸಿಎಂಎಸ್‌ನಲ್ಲಿ ಹಸಿಶುಂಠಿ ಖರೀದಿ ಕೇಂದ್ರ ಕಾರ್ಯಾರಂಭ ಮಾಡಿದೆ.

ಎಪಿಸಿಎಂಎಸ್‌ಗಳಲ್ಲಿ ತೆರೆಯಲಾಗಿರುವ ಹಸಿ ಶುಂಠಿ ಖರೀದಿ ಕೇಂದ್ರಕ್ಕೆ ಶುಂಠಿ ಮಾರಾಟ ಮಾಡಬೇಕಾದರೆ ಕೃಷಿಕರು ಫ್ರೂಟ್ಸ್ ಐಡಿ ಹೊಂದಿರಬೇಕು. ತೋಟಗಾರಿಕೆ ಪರಿಣತ ಅಧಿಕಾರಿಗಳಿಂದ ದೃಢೀಕರಿಸಿದ ಗುಣಮಟ್ಟದ ಹಸಿ ಶುಂಠಿಯನ್ನು ಮಾತ್ರ ಈ ಕೇಂದ್ರಗಳಲ್ಲಿ ಖರೀದಿಸಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಎಫ್‌ಎಕ್ಯೂ ಗುಣಮಟ್ಟ ಹೊಂದಿರುವ ಶುಂಠಿಗೆ ಮಾತ್ರ ಈ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಅವಕಾಶವಿದೆ. ಸರ್ಕಾರ ಕ್ವಿಂಟಾಲ್‌ಗೆ ೨,೪೪೫ ರೂ. ದರ ನಿಗದಿಪಡಿಸಿದೆ. ಅಂದರೆ ೬೦ ಕೆಜಿ ತೂಕದ ಚೀಲಕ್ಕೆ ೧,೪೬೭ ರೂ. ಆಗಲಿದೆ.

ಅಲ್ಪಾವಧಿ ಬೆಳೆಯಾಗಿರುವ ಶುಂಠಿ ಹೆಚ್ಚು ಲಾಭ ತಂದು ಕೊಡುತ್ತದೆ ಎಂದು ರೈತರು ನಂಬಿರುವುದರಿಂದ ಈ ಬೆಳೆ ಹಲವರನ್ನು ಆಕರ್ಷಿಸುತ್ತಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಒಟ್ಟು ೮೦೬ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿ ೮,೮೯೪.೨ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿದೆ. ಕುಶಾಲನಗರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ ೫೦೧ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದು ೫೫೧೧ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿದೆ. ಉಳಿದಂತೆ ಮಡಿಕೇರಿ ತಾಲ್ಲೂಕಿನ ೫೦ ಹೆಕ್ಟೇರ್ ಪ್ರದೇಶದಲ್ಲಿ ೬೨೫ ಟನ್, ಸೋಮವಾರಪೇಟೆ ತಾಲ್ಲೂಕಿನ ೨೦೩ ಹೆಕ್ಟೇರ್ ಪ್ರದೇಶದಲ್ಲಿ ೨೨೩೩ ಮೆ.ಟ., ವಿರಾಜಪೇಟೆ ತಾಲ್ಲೂಕಿನ ೧೨ ಹೆಕ್ಟೇರ್ ಪ್ರದೇಶದಲ್ಲಿ ೧೨೧.೨೦ ಮೆ.ಟ. ಹಾಗೂ ಪೊನ್ನಂಪೇಟೆ ತಾಲ್ಲೂಕಿನ ೪೦ ಹೆಕ್ಟೇರ್‌ನಲ್ಲಿ ೪೦೪ ಮೆ.ಟ. ಶುಂಠಿ ಉತ್ಪಾದಿಸಲಾಗಿದೆ.

“ಎಪಿಸಿಎಂಎಸ್ ಮೂಲಕ ಸರ್ಕಾರ ಹಸಿ ಶುಂಠಿ ಖರೀದಿಸುತ್ತಿರುವುದು ಸ್ವಾಗತಾರ್ಹ. ಆದರೆ, ಅಲ್ಲಿ ಸಿಗುವ ಬೆಲೆಯಿಂದ ಹೆಚ್ಚಿನ ಶುಂಠಿ ಕೃಷಿಕರಿಗೆ ಪ್ರಯೋಜನ ಆಗುವುದಿಲ್ಲ. ಅದರಲ್ಲೂ ಭೋಗ್ಯಕ್ಕೆ ಜಮೀನು ಪಡೆದು ಶುಂಠಿ ಬೆಳೆದವರಿಗೆ ಉಪಯೋಗವೇ ಇಲ್ಲ. ಅಲ್ಲಿ ಗುಣಮಟ್ಟದ ಶುಂಠಿಯನ್ನು ಮಾತ್ರ ಖರೀದಿ ಮಾಡುವುದರಿಂದ ಉಳಿದ ಶುಂಠಿಯನ್ನು ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ. ಮಾರುಕಟ್ಟೆ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಸಿ ಶುಂಠಿ ಖರೀದಿ ವ್ಯವಸ್ಥೆಯನ್ನು ಇನ್ನಷ್ಟು ರೈತ ಸ್ನೇಹಿಯಾಗಿ ರೂಪಿಸಬೇಕಿತ್ತು.”

-ಬೇಬಿ, ಶುಂಠಿ ಬೆಳೆಗಾರ, ಸಿದ್ಧಲಿಂಗಪುರ

“ಕೊಡಗು ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ೮೦೬ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿ ೮,೮೯೪.೨ ಮೆಟ್ರಿಕ್ ಟನ್ ಶುಂಠಿ ಇಳುವರಿ ಪಡೆಯಲಾಗಿದೆ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಶುಂಠಿಯ ಇಳುವರಿ ಚೆನ್ನಾಗಿ ಬಂದಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶುಂಠಿ ಇಳುವರಿ ೧ ಹೆಕ್ಟೇರ್‌ಗೆ ೧೧.೦೩ ಮೆಟ್ರಿಕ್ ಟನ್ ಇದೆ.”

-ಎಚ್.ಆರ್.ಯೋಗೇಶ್, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಮಡಿಕೇರಿ

Tags:
error: Content is protected !!