Mysore
25
haze

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಸ್ಟೋನ್ ಹಿಲ್ ಬಳಿಯ ಕಸದ ರಾಶಿ ತೆರವು ಕಾರ್ಯ ಶುರು

ನವೀನ್ ಡಿಸೋಜ

ಗುಡ್ಡದ ಮೇಲೆ ಅವೈಜ್ಞಾನಿಕವಾಗಿ ಸುರಿದಿದ್ದ ಕಸ ವಿಂಗಡಣೆ ಕೆಲಸ ಚುರುಕು

ಮಡಿಕೇರಿ: ವಾಯು ಗುಣಮಟ್ಟದಲ್ಲಿ ದೇಶದಲ್ಲೇ ಹೆಸರಾಗಿರುವ ಮಡಿಕೇರಿ ನಗರಕ್ಕೆ ಕಪ್ಪುಚುಕ್ಕೆಯಂತಿರುವ ಸ್ಟೋನ್‌ಹಿಲ್ ಬಳಿಯ ಕಸದ ಗುಡ್ಡವನ್ನು ಕರಗಿಸುವ ಕೆಲಸ ಆರಂಭವಾಗಿದೆ. ಸ್ಟೋನ್ ಹಿಲ್ ಕಸವಿಲೇವಾರಿ ಸ್ಥಳಕ್ಕೆ ಬೃಹತ್ ಯಂತ್ರೋ ಪಕರಣಗಳು ಬಂದಿದ್ದು, ಕಸ ವಿಂಗಡಣೆ ಕೆಲಸ ನಡೆಯುತ್ತಿದೆ.

ಕಳೆದ ೧೫ ದಿನಗಳಿಂದ ಸ್ಟೋನ್‌ಹಿಲ್ ಬೆಟ್ಟದ ಮೇಲೆ ಹಿಟಾಚಿ ಯಂತ್ರಗಳು ಕಾರ್ಯಾಚರಣೆ ಶುರು ಮಾಡಿವೆ. ಮೊದಲ ಹಂತದಲ್ಲಿ ಅಲ್ಲಿ ಸಂಗ್ರಹವಾಗಿರುವ ವರ್ಷಗಳಷ್ಟು ಹಳೆಯ ಪಾರಂಪರಿಕ ಕಸದ ವಿಂಗಡಣೆ ಕೆಲಸವಾಗುತ್ತಿದೆ. ಕಸ ವಿಂಗಡಣೆ ಬಳಿಕ ಅದರ ವಿಲೇವಾರಿಯೂ ಆರಂಭವಾಗಲಿದೆ. ಸ್ಟೋನ್‌ಹಿಲ್ ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ಸುರಿಯಲಾಗಿರುವ ಕಸದ ರಾಶಿ ತೆರವಿಗೆ ಹಲವು ಗಳಿಂದ ಆಗ್ರಹಿಸಲಾಗಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದ ಉತ್ಕರ್ಷ್ ಬಾಳಾಸಾಹೇಬ್ ಪಾಟೀಲ್ ಎಂಬ ಏಜೆನ್ಸಿ ಗುತ್ತಿಗೆ ಪಡೆದುಕೊಂಡಿತ್ತು.

ಆ ಸಮಯ ದಲ್ಲೇ ಸಂಸದ ಯದುವೀರ್ ಒಡೆಯರ್ ಮತ್ತು ಶಾಸಕ ಡಾ.ಮಂಥರ್‌ಗೌಡ ಪಾರಂಪರಿಕ ಕಸ ವಿಲೇವಾರಿಗೆ ಚಾಲನೆ ನೀಡಿದ್ದರು. ಆದರೆ ಗುತ್ತಿಗೆ ಪಡೆದ ಸಂಸ್ಥೆ ಕೆಲಸ ಆರಂಭಿಸಲು ತಡ ಮಾಡಿತ್ತು. ಅಷ್ಟರಲ್ಲಿ ಮಳೆಗಾಲವೂ ಆರಂಭವಾದ್ದರಿಂದ ಕಸ ವಿಲೇವಾರಿ ಪ್ರಕ್ರಿಯೆ ಅಲ್ಲಿಗೇ ನಿಂತಿತ್ತು. ಇದೀಗ ಮಳೆ ನಿಂತು ಕಸದ ಗುಡ್ಡ ಒಣಗಿರುವ ಹಿನ್ನೆಲೆಯಲ್ಲಿ ಬೃಹತ್ ಯಂತ್ರೋಪಕರಣಗಳ ಮೂಲಕ ಕಸ ವಿಂಗಡಣೆ ಕೆಲಸವನ್ನು ಆರಂಭಿಸಲಾಗಿದೆ.

ದಶಕಗಳಿಂದ ಮಡಿಕೇರಿ ನಗರದ ಸ್ಟೋನ್‌ಹಿಲ್ ಬೆಟ್ಟದ ಮೇಲೆ ನಗರಾದ್ಯಂತ ಸಂಗ್ರಹವಾಗುವ ಕಸವನ್ನು ಸುರಿಯಲಾಗುತ್ತಿದೆ. ಈ ನಡುವೆ ಕಸ ವಿಂಗಡಣೆ ಮತ್ತು ವೈಜ್ಞಾನಿಕ ವಿಲೇವಾರಿ ಮಾಡಲು ಕೆಲವು ಯಂತ್ರೋಪಕರಣಗಳನ್ನು ಅಳವಡಿಸಲಾಯಿತಾದರೂ ಅವು ಮಳೆಯಿಂದ ಕೆಟ್ಟು ನಿಂತಿದ್ದವು. ಇದರಿಂದ ಮತ್ತೆ ಹಲವು ವರ್ಷಗಳಿಂದ ಕಸವನ್ನು ರಾಶಿಹಾಕಲಾಗುತ್ತಿದೆ. ಮನೆಗಳಿಂದ ಬೇರ್ಪಡಿಸಿ ತಂದರೂ ಇಲ್ಲಿ ಎಲ್ಲವನ್ನೂ ಒಟ್ಟಿಗೇ ಹಾಕುವ ಪರಿಸ್ಥಿತಿಯಿದೆ. ಹೀಗೆ ದಶಕಗಳಿಂದ ಇಲ್ಲಿ ಸಂಗ್ರಹವಾಗಿರುವ ಕಸ ಅಂದಾಜು ೭೬ ಸಾವಿರದ ೬೩೬ ಮೆಟ್ರಿಕ್ ಟನ್‌ಗಳಷ್ಟಿದೆ. ಇದರ ವೈಜ್ಞಾನಿಕ ವಿಲೇವಾರಿಗಾಗಿ ೫.೪೪ ಕೋಟಿ ರೂ.ಗಳಿಗೆ ಗುತ್ತಿಗೆ ನೀಡಲಾಗಿದೆ.

ಸದ್ಯ ದಶಕಗಳಿಂದ ನಿರ್ಮಾಣವಾಗಿರುವ ಕಸದ ಬೆಟ್ಟವನ್ನು ಕರಗಿಸುವ ಕಾರ್ಯದ ಭಾಗವಾಗಿ ಕಳೆದ ೧೫ ದಿನಗಳಿಂದ ಯಂತ್ರಗಳ ಸಹಾಯದಿಂದ ಕಸವನ್ನು ವಿಂಗಡಣೆ ಮಾಡಲಾಗುತ್ತಿದೆ. ಹೀಗೆ ವಿಂಗಡಣೆಯಾದ ತ್ಯಾಜ್ಯದ ಪೈಕಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಬ್ಬಾಳದ ಕೆಪಿಟಿಸಿಎಲ್ ವೇಸ್ಟ್ ಟು ಎನರ್ಜಿ ಅಥವಾ ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ಉಳಿದಂತೆ ಗೊಬ್ಬರವಾಗಬಲ್ಲ ಕಸವನ್ನು ಗೊಬ್ಬರ ಮಾಡಲು ಮತ್ತು ಮಣ್ಣನ್ನು ತಗ್ಗು ಪ್ರದೇಶಗಳಿಗೆ ತುಂಬಲು ಬಳಸಿಕೊಳ್ಳಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

” ೧೫ ದಿನಗಳಿಂದ ಕಸ ವಿಂಗಡಣೆ ಕೆಲಸ ಆರಂಭವಾಗಿದೆ. ವಿಂಗಡಿಸಿದಕಸವನ್ನು ಗುತ್ತಿಗೆದಾರರು ಬೇರೆಡೆಗೆ ಸಾಗಿಸುತ್ತಾರೆ. ಮಳೆ ಹಿನ್ನೆಲೆಯಲ್ಲಿ ಕಸ ವಿಲೇವಾರಿ ತಡವಾಗಿದೆ. ಅವರಿಗೆ ನೀಡಿದ್ದ ಸಮಯ ಮಾರ್ಚ್ ತಿಂಗಳಿಗೆ ಮುಗಿಯುತ್ತದೆ. ಆದರೆ ಮಳೆಯಿಂದ ವಿಳಂಬವಾಗಿದ್ದು, ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಹೊಸ ಘಟಕದ ಜಾಗಕ್ಕೆ ಅರಣ್ಯ ಇಲಾಖೆಯಿಂದ ಎಫ್‌ಸಿ ಸಿಗಬೇಕಿದೆ.”

-ಎಚ್.ಆರ್.ರಮೇಶ್, ಪೌರಾಯುಕ್ತರು, ಮಡಿಕೇರಿ ನಗರಸಭೆ

ಸಿಗದ ಫಾರೆಸ್ಟ್ ಕ್ಲಿಯರೆನ್ಸ್ ..!: 

ಹೊಸದಾಗಿ ಘನತ್ಯಾಜ್ಯ ಸಂಸ್ಕರಣಾ ಮತ್ತು ವಿಲೇವಾರಿ ಘಟಕ ಆರಂಭಿಸಲು ೨ನೇ ಮೊಣ್ಣಂಗೇರಿ ಬಳಿ ಜಾಗವನ್ನು ಗುರುತಿಸಲಾಗಿದೆ. ಉದ್ದೇಶಿತ ಸ್ಥಳದಲ್ಲಿ ಕಸ ಸಂಸ್ಕರಣೆ ಮತ್ತು ವೈಜ್ಞಾನಿಕ ವಿಲೇವಾರಿ ಘಟಕ ಸ್ಥಾಪನೆಗೆ ಈಗಾಗಲೇ ನಗರಸಭೆಯಿಂದ ೬.೭ ಕೋಟಿ ರೂ. ಅಂದಾಜು ವೆಚ್ಚದ ಯೋಜನಾ ವರದಿ ಸಿದ್ಧಗೊಂಡಿದೆ. ಈ ಯೋಜನೆಗೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಬೇಕಿದೆ. ಈ ಸಂಬಂಧ ಅರಣ್ಯ ಇಲಾಖೆಯೊಂದಿಗೆ ನಗರಸಭೆ ವರ್ಷಗಳಿಂದ ಪತ್ರ ವ್ಯವಹಾರ ನಡೆಸುತ್ತಿದೆಯಾದರೂ ಅರಣ್ಯ ಇಲಾಖೆಯಿಂದ ಎಫ್‌ಸಿ(ಫಾರೆಸ್ಟ್ ಕ್ಲಿಯರೆನ್ಸ್)ಸಿಕ್ಕಿಲ್ಲ ಎನ್ನಲಾಗಿದೆ. ಎಫ್‌ಸಿ ದೊರೆತಲ್ಲಿ ಶೀಘ್ರದಲ್ಲಿಯೇ ಘನತ್ಯಾಜ್ಯ ಸಂಸ್ಕರಣಾ ಮತ್ತು ವಿಲೇವಾರಿ ಘಟಕ ಆರಂಭವಾಗಲಿದೆ.

 

 

 

Tags:
error: Content is protected !!